

ಮುಂಬೈ: ದೇಶದಲ್ಲಿ ಕರೊನಾ ವೈರಸ್ನ ಕಾಟ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ವೈರಸ್ ದಾಳಿಗೆ ತತ್ತರಿಸಿದ್ದು, ಅಲ್ಲಿನ ಸರ್ಕಾರ ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುನ್ನೆಚ್ಚರಿಕೆಯ ಒಂದು ಭಾಗವಾಗಿ ಮುಂಬೈನ ಲೋಕಲ್ ಟ್ರೈನ್ಗಳು ಮತ್ತು ಮೆಟ್ರೋ ರೈಲುಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಮೆಟ್ರೋ ರೈಲುಗಳು ಮತ್ತು ಲೋಕಲ್ ರೈಲುಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ. ಬೋಗಿಗಳಿಗೆ ನಿಯಮಿತ ಪ್ರಯಾಣಿಕರಿಗೆ ಮಾತ್ರ ಹತ್ತುವುದಕ್ಕೆ ಅವಕಾಶ ಮಾಡಿಕೊಡುವುದು, ರೈಲುಗಳಲ್ಲಿ ಆಗಾಗ ರೋಗನಿರೋಧಕವನ್ನು ಸಿಂಪಡಿಸುತ್ತಿರುವುದು ಹೀಗೆ ಅನೇಕ ರೀತಿಯ ಪರ್ಯಾಯ ಮಾರ್ಗಗಳೂ ಸಹ ಇದೆ. ಇವುಗಳೆಲ್ಲದರ ಕುರಿತಾಗಿ ಇಂದು ವಿಧಾನಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ಇದುವರೆಗೆ ದೇಶದಲ್ಲಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. 38 ಜನರಲ್ಲಿ ಕರೊನಾ ಪತ್ತೆಯಾಗಿದ್ದು ಇಂದು ಒಬ್ಬ ಮೃತನಾಗಿದ್ದಾನೆ. 63 ವರ್ಷದ ವೃದ್ಧ ಕರೊನಾದಿಂದಾಗಿ ತೀರಿಕೊಂಡಿದ್ದು ಇದು ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಾವಾಗಿದೆ. (ಏಜೆನ್ಸೀಸ್)