

ಸಿಂಗಾಪುರ/ಮಾಸ್ಕೋ: ವಿಶ್ವ ಚೆಸ್ ಚಾಂಪಿಯನ್ಷಿಪ್ನ 14ನೇ ಹಾಗೂ ಕೊನೇ ಪಂದ್ಯ ಡ್ರಾದತ್ತ ಸಾಗುತ್ತಿದ್ದಾಗ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ 55ನೇ ನಡೆಯಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡರು. ಇದರ ಲಾಭವೆತ್ತಿದ ಗುಕೇಶ್ 58ನೇ ನಡೆಯಲ್ಲಿ ಗೆಲುವು ಒಲಿಸಿಕೊಂಡರು. ಲಿರೆನ್ ನಿರ್ಣಾಯಕ ಹಂತದಲ್ಲಿ ಉದ್ದೇಶಪೂರ್ವಕವಾಗಿ ಕೆಟ್ಟ ನಡೆ ಇಟ್ಟು, ಬೇಕೆಂದೇ ಸೋತರು ಎಂದು ರಷ್ಯಾ ಚೆಸ್ ಒಕ್ಕೂಟದ ಅದ್ಯಕ್ಷ ಆಂಡ್ರೇ ಫಿಲಾಟೋವ್ ಆರೋಪಿಸಿದ್ದಾರೆ. ಜತೆಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
"ಕೊನೇ ಪಂದ್ಯದ ಫಲಿತಾಂಶ ವೃತ್ತಿಪರ ಚೆಸ್ ಆಟಗಾರರ ಮತ್ತು ಅಭಿಮಾನಿಗಳಿಗೆ ದಿಗ್ಭ್ರಮೆ ತಂದಿದೆ. ನಿರ್ಣಾಯಕ ಹಂತದಲ್ಲಿ ಚೀನಾ ಆಟಗಾರ ಇಟ್ಟ ನಡೆ ಅನುಮಾನಾಸ್ಪದವಾಗಿದೆ. ಈ ಬಗ್ಗೆ ಫಿಡೆ ತನಿಖೆ ಮಾಡಬೇಕಾದ ಅಗತ್ಯವಿದೆ. ಲಿರೆನ್ ಆಗ ಇದ್ದ ಸ್ಥಿತಿಯಲ್ಲಿ ಸೋಲುವುದು ಬಹುತೇಕ ಅಸಾಧ್ಯವೆನಿಸಿತ್ತು. ಆದರೆ ಅವರು ಬೇಕೆಂದೇ ಸೋತಂತೆ ಕಾಣಿಸಿತು' ಎಂದು ಫಿಲಾಟೋವ್ ದೂರಿದ್ದಾರೆ.
ಕ್ರೀಡೆಯಲ್ಲಿ ತಪ್ಪುಗಳಾಗುತ್ತವೆ ಎಂದ ಫಿಡೆ
ವಿಶ್ವ ಚೆಸ್ ಚಾಂಪಿಯನ್ಷಿಪ್ನ ಗುಣಮಟ್ಟ ಮತ್ತು ಡಿಂಗ್ ಲಿರೆನ್ ನಿರ್ಣಾಯಕ ಹಂತದಲ್ಲಿ ಇಟ್ಟ ಎಡವಟ್ಟಿನ ನಡೆಯ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆಯ ಅಧ್ಯಕ್ಷ ಅರ್ಕಾಡಿ ಡ್ವೊಕೋರ್ವಿಚ್, "ಕ್ರೀಡೆಯ ರೋಚಕ ಹಂತಗಳಲ್ಲಿ ಆಟಗಾರರು ತಪ್ಪುಗಳನ್ನು ಮಾಡುವುದು ಸಹಜವಾದುದು' ಎಂದು ಸಮರ್ಥಿಸಿಕೊಂಡಿದ್ದಾರೆ. "ಕ್ರೀಡೆಯಲ್ಲಿ ತಪ್ಪುಗಳು ಇದ್ದೇ ಇರುತ್ತವೆ. ಫುಟ್ಬಾಲ್ನಲ್ಲಿ ತಪ್ಪುಗಳು ಆಗದಿದ್ದರೆ ಗೋಲುಗಳೇ ಆಗುವುದಿಲ್ಲ. ಎಲ್ಲ ಕ್ರೀಡಾಪಟುಗಳು ತಪ್ಪುಗಳನ್ನು ಮಾಡುತ್ತಾರೆ. ಆದರೆ ಆ ತಪ್ಪುಗಳಿಂದ ಎದುರಾಳಿ ಲಾಭ ಪಡೆದುಕೊಳ್ಳುವನೇ ಎಂಬುದೇ ನಿರ್ಣಾಯಕವಾದುದು' ಎಂದು ಡ್ವೊಕೋರ್ವಿಚ್ ವಿಶ್ವ ಚೆಸ್ ಸಮಾರೋಪ ಸಮಾರಂಭದಲ್ಲಿ ವಿವರಿಸಿದರು.