ಮದ್ಯದಂಗಡಿ ಲಾಕ್ ಓಪನ್ ಮಾಡಿದ ಸರ್ಕಾರ: ಭಾರಿ ಸಂಭ್ರಮದಲ್ಲಿದ್ದಾರೆ ಮದ್ಯಪ್ರಿಯರು

Drinks
Published on

ಬೆಂಗಳೂರು: ಕರೊನಾ COVID 19 ವೈರಸ್ ಸೋಂಕು ಹರಡದಂತೆ ತಡೆಯಲು ಸರ್ಕಾರ ಈಗಾಗಲೇ ಎರಡು ಹಂತದ ಲಾಕ್​ಡೌನ್ ಮುಗಿಸಿದ್ದು, ಮೂರನೆ ಹಂತದ ಲಾಕ್​ಡೌನ್ ಚಾಲ್ತಿಗೆ ತಂದಿದೆ. ಎರಡು ಹಂತದ ಲಾಕ್​ಡೌನ್ ಅವಧಿಯಲ್ಲಿ ಮದ್ಯಮಾರಾಟವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಮದ್ಯವ್ಯಸನಿಗಳು ಭಾರಿ ಭ್ರಮನಿರಸನ ಹೊಂದಿದ್ದರು. ಇದೀಗ, ಮೂರನೆ ಹಂತದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟ ಕಾರಣ ಮದ್ಯ ಪ್ರಿಯರು ಭಾರಿ ಖುಷಿಯಲ್ಲಿದ್ದಾರೆ.

ಮದ್ಯ ಮಾರಾಟ ನಿಷೇಧ ಇರುವ ಪ್ರದೇಶಗಳನ್ನು ಹೊರತುಪಡಿಸಿ ಉಳದೆಲ್ಲೆಡೆ ಮದ್ಯಪ್ರಿಯರ ಸಂಭ್ರಮ ಮುಗಿಲುಮುಟ್ಟಿತ್ತು. ಸೋಮವಾರ ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ ಎದುರು ಹಾಜರಾದ ಅವರು ಸಾಮಾಜಿಕ ಅಂತರ ಕಾಯ್ದುಕೊಂಡೇ ಮದ್ಯ ಖರೀದಿಗೆ ಸರದಿ ನಿಂತ ದೃಶ್ಯಗಳು ಬಹುತೇಕ ಕಡೆಗಳಲ್ಲಿ ಕಂಡುಬಂದವು.  ಸರ್ಕಾರದ ಈ ಕ್ರಮದ ಬಗ್ಗೆ ಅನೇಕ ಟೀಕೆಗಳೂ ವ್ಯಕ್ತವಾಗಿವೆ. ಸರ್ಕಾರ ಈ ತೀಮಾರ್ನ ಘೋಷಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ವೈನ್ ಶಾಪ್ ಎದುರು ಕಿ.ಮೀ. ಉದ್ದ ಕ್ಯೂ ಏರ್ಪಟ್ಟ ವಿಡಿಯೋ ಕೂಡ ಭಾನುವಾರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಹುಬ್ಬಳ್ಳಿ ವರದಿ: ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮಳಿಗೆಗಳ ಎದುರು ದೊಡ್ಡ ಸರದಿಯೇ ಕಂಡುಬಂದಿದೆ. ನಗರದ 150 ಮಳಿಗೆಗಳ ಪೈಕಿ 38 ಮದ್ಯ ಮಾರಾಟ ಮಳಿಗೆಗಳಿಗೆ ಅನುಮತಿ ಸಿಕ್ಕಿದೆ. ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಮಳಿಗೆಗಳು ವ್ಯವಸ್ಥೆ ಮಾಡಿಕೊಂಡಿವೆ.

ಶಿವಮೊಗ್ಗ ವರದಿ: ಮದ್ಯ ಸಾಮ್ರಾಜ್ಯದ ಲಾಕ್​ ಓಪನ್ ಮಾಡಿ ಬಿಟ್ಟ ಕಾರಣ ಸೋಮವಾರ ರಾಜ್ಯದ ಹಲವೆಡೆ ಸೋಮವಾರ ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ ಮುಂದೆ ಕುಡುಕರು ಸರದಿ ನಿಲ್ಲಲಾರಂಭಿಸಿದ್ದರು. ಇದರಂತೆ ಶಿವಮೊಗ್ಗದ ಶರಾವತಿ ನಗರದಲ್ಲಿ ಮದ್ಯ ಪಡೆಯಲು ಜನರು ಸೋಮವಾರ ಬೆಳ್ಳಂಬೆಳಗ್ಗೆ ಮದ್ಯದಂಗಡಿ ಮುಂದೆ ಸರದಿಯಲ್ಲಿ ನಿಂತಿದ್ದರು.

ಹಾವೇರಿ ವರದಿ: ಲಾಕ್​ಡೌನ್ 3ರ ಅವಧಿಯಲ್ಲಿ ಮದ್ಯಮಾರಾಟಕ್ಕೆ ಕೊಂಚ ವಿನಾಯಿತಿ ಸಿಕ್ಕಿದ ಕಾರಣ ಹಾವೇರಿ ಜಿಲ್ಲೆಯಾದ್ಯಂತ ಮದ್ಯದಂಗಡಿಗಳು ಸೋಮವಾರ ಬೆಳಗ್ಗೆಯೇ ಓಪನ್ ಆಗಿವೆ. ಲಾಕ್​​ಡೌನ್ ಎರಡು ಅವಧಿಯಲ್ಲೂ ಮದ್ಯ ಮಾರಾಟ ಇಲ್ಲದ ಕಾರಣ, ಭ್ರಮನಿರಸನಕ್ಕೆ ಒಳಗಾಗಿದ್ದ ಮದ್ಯಪ್ರಿಯರು ಕೊಂಚ ರಿಲ್ಯಾಕ್ಸ್ ಮೂಡ್​ನಲ್ಲಿದ್ದುದು ಕಂಡುಬಂತು.

ಮೈಸೂರು ವರದಿ: ಮದ್ಯ ಮಾರಾಟ ಪ್ರಕ್ರಿಯೆ ರಾಜ್ಯದೆಲ್ಲೆಡೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸೋಮವಾರ ಆರಂಭವಾಗಿದೆ. ಇದರಂತೆ, ಕೆಂಪು ವಲಯ ಮೈಸೂರಿನಲ್ಲೂ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಮದ್ಯ ಖರೀದಿಗೆ ಮೈಸೂರಿನಲ್ಲಿ ಮದ್ಯ ಪ್ರಿಯರು ಸಾಲುಗಟ್ಟಿದ್ದಾರೆ. ಕೆಲವು ಕಡೆ ಸಾಮಾಜಿಕ ಅಂತರ ಪಾಲಿಸಬೇಕೆಂಬ ನಿಯಮದ ಬಗ್ಗೆಯೂ ಅವರ ಗಮನಹರಿಯಲಿಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net