

Lionel Messi: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಅವರೇ ತಮ್ಮ ಭೇಟಿಯನ್ನು ಇದೀಗ ಖಚಿತಪಡಿಸಿದ್ದಾರೆ.
ಹೌದು, ಮೆಸ್ಸಿ ಕೊನೆಯ ಬಾರಿಗೆ ಭಾರತಕ್ಕೆ 2011 ರಲ್ಲಿ ಭೇಟಿ ನೀಡಿದ್ದರು. ಇದು 14 ವರ್ಷಗಳ ನಂತರ ಅವರ ಮರಳುವಿಕೆಯನ್ನು ಸೂಚಿಸುತ್ತದೆ. ತಮ್ಮ ಭೇಟಿಯ ಬಗ್ಗೆ ಮಾತನಾಡಿದ ಮೆಸ್ಸಿ, ಭಾರತದಂತಹ ಫುಟ್ಬಾಲ್ ಪ್ರಿಯ ದೇಶಕ್ಕೆ ಮರಳುವುದು ಗೌರವದ ಸಂಗತಿ ಎಂದು ಹೇಳಿದರು.
"ಭಾರತದ ಪ್ರವಾಸ ಕೈಗೊಳ್ಳುವುದು ನನಗೆ ಸಿಕ್ಕ ದೊಡ್ಡ ಗೌರವ. ಭಾರತ ಬಹಳ ವಿಶೇಷವಾದ ದೇಶ. 14 ವರ್ಷಗಳ ಹಿಂದೆ ಇಲ್ಲಿ ಕಳೆದ ನನ್ನ ನೆನಪುಗಳು ಇನ್ನೂ ಸುಂದರವಾಗಿವೆ. ಅಭಿಮಾನಿಗಳು ಅದ್ಭುತವಾಗಿದ್ದರು. ಭಾರತವು ಫುಟ್‌ಬಾಲ್ ಬಗ್ಗೆ ಉತ್ಸಾಹ ಹೊಂದಿರುವ ದೇಶ. ಹೊಸ ಪೀಳಿಗೆಯ ಅಭಿಮಾನಿಗಳನ್ನು ಭೇಟಿ ಮಾಡಲು ಮತ್ತು ಈ ಸುಂದರ ಆಟದ ಬಗ್ಗೆ ನನ್ನ ಪ್ರೀತಿಯನ್ನು ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ" ಎಂದು ಲಿಯೋನೆಲ್ ಮೆಸ್ಸಿ ಹೇಳಿದರು.
ಆಗಸ್ಟ್ 15 ರಂದು ಮೆಸ್ಸಿಯ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಆಯೋಜಕರು ಬಿಡುಗಡೆ ಮಾಡಿದ್ದು, ಗುರುವಾರ ಮೆಸ್ಸಿ ಹೇಳಿಕೆ ಇದನ್ನು ದೃಢಪಡಿಸಿದೆ.
ಮೆಸ್ಸಿ ಭಾರತದ ನಾಲ್ಕು ನಗರಗಳಿಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 13 ರಂದು ಅವರು ಮೊದಲು ಕೋಲ್ಕತ್ತಾಗೆ ಆಗಮಿಸಲಿದ್ದಾರೆ. ನಂತರ ಅವರು ಅಹಮದಾಬಾದ್, ಮುಂಬೈ ಮತ್ತು ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಡಿಸೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯೊಂದಿಗೆ ಪ್ರವಾಸವು ಮುಕ್ತಾಯಗೊಳ್ಳಲಿದೆ.(ಏಜೆನ್ಸೀಸ್)