

ಬೆಂಗಳೂರು: 'ಸಿನಿಮಾ ಸೆಲೆಬ್ರಿಟಿಗಳ ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ಸುಲಭವಾಗಿ ದುಡ್ಡು ಸಂಪಾದಿಸಿ'!- ಹೀಗಂತ ಯಾರಾದರೂ ಹೇಳಿದರೆ, ಜಾಹೀರಾತು ನೋಡಿ ಲೈಕ್ಶೇರ್ ಆ್ಯಪ್ ಡೌನ್ಲೋಡ್ ಮಾಡಿದ್ದೀರಾ? ಹಾಗಿದ್ದರೆ ಎಚ್ಚರ!
ಉತ್ತರಹಳ್ಳಿಯ ಆಶಾ ನಿವೇದಿತಾ ಎಂಬ ಯುವತಿ ಲೈಕ್ ಶೇರ್ ಆ್ಯಪ್ ನಿಂದ ವಂಚನೆಗೊಳಗಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಅವರ ದೂರಿನಲ್ಲಿರುವುದಿಷ್ಟು - ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದೆ. ಹೆಚ್ಚುವರಿ ಸಂಪಾದನೆಗಾಗಿ ವೆಬ್ಸೈಟ್ಗಳನ್ನು ಪರಿಶೋಧಿಸುತ್ತಿದ್ದಾಗ ಅಪರಿಚಿತನೊಬ್ಬ ಲೈಕ್ ಶೇರ್ ಆ್ಯಪ್ ಬಗ್ಗೆ ತಿಳಿಸಿದ್ದ. ಅದರ ಪ್ರತಿನಿಧಿಯಂತೆ ಪೋಸು ನೀಡಿದ್ದ ಆತ, ಆ್ಯಪ್ ಡೌನ್ಲೋಡ್ ಮಾಡಿ ನೋಂದಣಿ ಶುಲ್ಕ ಪಾವತಿಸಬೇಕು. ಹಂತ ಹಂತವಾಗಿ ಆ್ಯಪ್ನಲ್ಲಿ ಬರುವ ಸಂದೇಶಗಳನ್ನು ಪಾಲಿಸತ್ತ ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಸೆಲೆಬ್ರಿಟಿಗಳ ಫೋಟೋ ಮತ್ತು ವಿಡಿಯೋಗಳನ್ನು ಲೈಕ್ ಮಾಡಿ ಶೇರ್ ಮಾಡುತ್ತ ಬಂದರೆ 1,000 ರೂಪಾಯಿಯಿಂದ 60,000 ರೂಪಾಯಿ ತನಕ ದುಡಿಯಬಹುದು ಎಂದು ನಂಬಿಸಿದ್ದ.
ಇದರಂತೆ ಲೈಕ್ಶೇರ್ ಆ್ಯಪ್ ಡೌನ್ಲೋಡ್ ಮಾಡಿ ನೋಂದಣಿ ಶುಲ್ಕವನ್ನೂ ಪಾವತಿಸಿದ್ದೆ. ಅಲ್ಲದೆ, ಹೆಚ್ಚು ಹಣ ಸಂಪಾದನೆ ಮಾಡುವ ಸಲುವಾಗಿ 90 ಜನರಿಂದ ಈ ಆ್ಯಪ್ ಡೌನ್ಲೋಡ್ ಮಾಡಿಸಿದ್ದೆ. ಅವರೂ ನೋಂದಣಿ ಶುಲ್ಕ ಪಾವತಿಸಿದ್ದಾರೆ. ಅವರೂ ಸೆಲೆಬ್ರೆಟಿಗಳ ಫೋಟೋ ಮತ್ತು ವಿಡಿಯೋಗಳನ್ನು ಲೈಕ್ ಮಾಡಿ ಶೇರ್ ಮಾಡಿದ್ದಾರೆ. ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದವರು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಒಟ್ಟು 28.51 ಲಕ್ಷ ರೂಪಾಯಿ ದೋಚಿದ್ದಾರೆ.
ಈ ಬಗ್ಗೆ ಆಶಾ ನೀಡಿರುವ ದೂರನ್ನು ಪರಿಗಣಿಸಿ ದಕ್ಷಿಣ ವಿಭಾಗ ಸಿಇಎನ್ ಠಾಣೆ ಪೊಲೀಸು ಕ್ರಮ ತೆಗೆದುಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.