ಬೆನ್ನಿನ ಸಾಮರ್ಥ್ಯ ಬಲಪಡಿಸುವ ಯೋಗಾಭ್ಯಾಸ

Yoga
Published on

# ನನಗೆ ಕಚೇರಿಯಲ್ಲಿ ತುಂಬ ಹೊತ್ತು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಭುಜ, ಬೆನ್ನಿಗೆ ತುಂಬ ಒತ್ತಡ ಹಾಗೂ ನೋವಾಗುತ್ತಿದೆ. ಯೋಗದ ಪರಿಹಾರ ತಿಳಿಸಿ.

| ಪ್ರಕಾಶ 32 ವರ್ಷ, ಬೆಳಗಾವಿ

ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ತಮ್ಮ ದಿನಗಳನ್ನು ಮೇಜಿನ ಬಳಿ ಆರರಿಂದ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕಳೆಯುತ್ತಾರೆ. ಡೆಸ್ಕ್ ಕೆಲಸ ಮಾಡುತ್ತಿರುವುದರಿಂದ ಇಡೀ ದಿನ ಕಂಪ್ಯೂಟರ್​ನ ಮುಂದೆ ಕುಳಿತಿರುವುದರಿಂದ ಕುತ್ತಿಗೆ, ಭುಜಗಳು, ಬೆನ್ನುನೋವು ಸಹಜವಾಗಿ ಕಾಡುವುದು ಅಥವಾ ನೋವನ್ನು ಉಂಟುಮಾಡುತ್ತದೆ. ನೀವು ಮುಂಜಾನೆ ನಲವತೆôದು ನಿಮಿಷ ನಿಯಮಿತವಾಗಿ ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮ ಮಾಡಿ. ಇದರ ಹೊರತಾಗಿ ನಿಮ್ಮ ದೇಹವನ್ನು ಚೈತನ್ಯಗೊಳಿಸಲು, ಒತ್ತಡವನ್ನು ನಿವಾರಿಸಲು, ದೇಹದ ನೋವುಗಳನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮೇಜಿನ ಬಳಿ ಕೆಲಸದ ಮಧ್ಯೆ ಬಿಡುವಿನ ವೇಳೆಯಲ್ಲಿ ನೆಕ್ ರೊಟೇಶನ್, ಭುಜಗಳ ವ್ಯಾಯಾಮ, ಕೈಗಳನ್ನು ಪರಸ್ಪರ ಹೆಣೆದು ಶಿರಸ್ಸಿನ ಮೇಲಕ್ಕೂ ಕೆಳಕ್ಕೆ ತರುವುದು, ರಿಸ್ಟ್ ರೊಟೇಶನ್, ಹಾಗೂ ಬೆನ್ನು, ಕುತ್ತಿಗೆ, ಶಿರಸ್ಸು ನೇರ ಮಾಡಿ ಉಸಿರನ್ನು ಗಮನಿಸುವ ಚಿಕ್ಕ ಧ್ಯಾನ ದಿನಕ್ಕೆ 2-3 ಬಾರಿ ಮಾಡಿ. ಇದರಿಂದ ರಕ್ತ ಪರಿಚಲನೆ ಜರುಗುತ್ತದೆ. ನಮ್ಯತೆಯನ್ನು ಸುಧಾರಿಸುತ್ತದೆ. ಕಚೇರಿಯಲ್ಲಿ ವಿರಾಮಗಳನ್ನು ತೆಗೆದುಕೊಳ್ಳುವುದು ಆತಂಕವನ್ನು ಕಡಿಮೆ ಮಾಡುವ ಅತ್ಯಂತ ಪರಿಣಾಮ ಮಾರ್ಗಗಳಲ್ಲಿ ಒಂದಾಗಿದೆ. ಉದ್ಯೋಗಿಗಳಿಗೆ ಸ್ಟ್ರೆಚ್ ಹಾಗೂ ಬ್ರೇಕ್​ಗಳು ಬಹಳ ಮುಖ್ಯವಾಗಿವೆ.

# ಬೆನ್ನಿನ ಸಾಮರ್ಥ್ಯ ಬಲಪಡಿಸುವುದಕ್ಕೆ ಯಾವೆಲ್ಲ ಯೋಗಾಸನಗಳು ಸಹಕಾರಿ ಎಂದು ತಿಳಿಸಿ.

| ರಂಗಪ್ಪ 51 ವರ್ಷ, ಉಡುಪಿ

ಬೆನ್ನುಮೂಳೆಯ ಆರೋಗ್ಯವು ನಿಮ್ಮ ಇಡೀ ದೇಹದ ಆರೋಗ್ಯಕ್ಕೆ ಪ್ರಮುಖವಾಗಿದೆ. ಬೆನ್ನುನೋವು ಕಡಿಮೆ ಮಾಡಲು ಹಾಗೂ ಬೆನ್ನುಮೂಳೆಯ ಬಲಕ್ಕೆ ಆಯ್ದ ಯೋಗಾಸನಗಳು ತುಂಬ ಸಹಕಾರಿಯಾಗುತ್ತವೆ.

ಸೂಚಿತ ಆಸನಗಳು: ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಕಟಿಚಕ್ರಾಸನ, ವೀರಭದ್ರಾಸನ, ಪರ್ವತಾಸನ, ಪಶ್ಚಿಮೋತ್ಥಾನಾಸನ, ಶಶಾಂಕಾಸನ, ವಜ್ರಾಸನ, ಉಷ್ಟ್ರಾಸನ, ಮಾರ್ಜಾಲಾಸನ, ಭರದ್ವಾಜಾಸನ, ನೌಕಾಸನ, ಸೇತುಬಂಧ, ಹಲಾಸನ, ಮಕರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಧನುರಾಸನ, ಮತ್ಸ್ಯಾಸನ, ಶವಾಸನ.

ಯೋಗದ ಆಯ್ದ ಭಂಗಿಗಳು ಬೆನ್ನಿನ ಹಿಂಭಾಗದಲ್ಲಿರುವ ಸ್ನಾಯುಗಳನ್ನು, ಕಿಬ್ಬೊಟ್ಟೆಯ ಸ್ನಾಯುಗಳನ್ನು ನಿಧಾನವಾಗಿ ಬಲಪಡಿಸುತ್ತವೆ. ಸ್ನಾಯುಗಳು ಉತ್ತಮ ಸ್ಥಿತಿಯಲ್ಲಿದ್ದಾಗ ಬೆನ್ನುನೋವು ಬಹಳವಾಗಿ ಕಡಿಮೆಯಾಗುತ್ತದೆ. ಗುರುಮುಖೇನ ಸಲಹೆ ಪಡೆದುಕೊಂಡು ಆಸನಗಳನ್ನು ಅಭ್ಯಾಸ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net