

ನವದೆಹಲಿ: ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಆ್ಯಂಟಿಜೆನ್ ಕಿಟ್ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ. ಕರೊನಾವೈರಾಣು ಸೋಂಕು ಪತ್ತೆಗೆ ಈ ಕಿಟ್ಗಳನ್ನು ಬಳಸಲಾಗುತ್ತದೆ.
ಪ್ಯಾಥೋಕ್ಯಾಚ್ ಕೋವಿಡ್-19 ಆ್ಯಂಟಿಜೆನ್ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಎಂಬ ಹೆಸರಿನ ಈ ಕಿಟ್ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿದ್ದು, ಪ್ರತಿ ಕಿಟ್ಗೆ 450 ರೂ.ನಂತೆ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಕೋವಿಡ್-19 ಪಿಡುಗನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಲೇ ಇದೆ. ವಿದೇಶಿ ಕಿಟ್ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸುಲಭ ದರದ ಆರ್ಟಿ-ಪಿಸಿಆರ್ ಟೆಸ್ಟ್ ಅನ್ನು ಬಿಡುಗಡೆ ಮಾಡಿದ ಬಳಿಕ ಕರೊನಾ ಸೋಂಕಿನ ಪರೀಕ್ಷೆಯನ್ನು ತ್ವರಿತಗೊಳಿಸಲು ಕಾಂಪ್ಯಾಕ್ಟ್ ಎಕ್ಸ್ಎಲ್ ಎಂಬ ಕಿಟ್ ಅನ್ನು ಬಿಡುಗಡೆ ಮಾಡಿದೆವು. ಇದೀಗ ಮೊದಲ ಆ್ಯಂಟಿಜೆನ್ ಟೆಸ್ಟಿಂಗ್ ಕಿಟ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ನ ಎಂಡಿ ಹಸ್ಮುಖ್ ರಾವಲ್ ತಿಳಿಸಿದ್ದಾರೆ.
ರಾಷ್ಟ್ರದಲ್ಲಿನ ಕೋವಿಡ್ ಪರೀಕ್ಷೆಯನ್ನು ಚುರುಕುಗೊಳಿಸಲು ಆರ್ಆರ್ಟಿ-ಪಿಸಿಆರ್ ಜತೆಗೆ ಆ್ಯಂಟಿಜೆನ್ ಆಧಾರಿತ ಪರೀಕ್ಷಾ ಸಾಧನಗಳನ್ನೂ ಬಳಸಲಾಗುತ್ತಿದೆ. ಆರ್ಆರ್ಟಿ-ಪಿಸಿಆರ್ ಟೆಸ್ಟಿಂಗ್ಗೆ ಹೋಲಿಸಿದರೆ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಕೇವಲ 30 ನಿಮಿಷದಲ್ಲಿ ಫಲಿತಾಂಶ ಬರುತ್ತದೆ ಎಂದು ವಿವರಿಸಿದ್ದಾರೆ.