

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain).
ಉ: ಈ ಆಸನಕ್ಕೆ ಬೆಕ್ಕಿನ ಹೆಸರನ್ನು ಇಡಲಾಗಿದೆ. ಮಾರ್ಜಾಲಾಸನ ಹಾಗೂ ಮಾರ್ಜಾಲಾಸನದಲ್ಲಿ ಕ್ಯಾಟ್ ಮತ್ತು ಕ್ಯಾಮೆಲ್ ಭಂಗಿ (ಮೈ ಚಾಚಿದ ಬೆಕ್ಕಿನ ಭಂಗಿ) ಎಂಬ ವಿಧಗಳಿವೆ. ಈ ಆಸನವನ್ನು ಮೂರು ರೀತಿಯಲ್ಲಿ ಮಾಡಲಾಗುತ್ತದೆ. ಅದು ಒಂಟೆಯನ್ನು, ಬೆಕ್ಕನ್ನು ಹೋಲುತ್ತವೆ.
ಜಮಖಾನದ ಮೇಲೆ ಮೊಣಕಾಲು ಮತ್ತು ಕೈಗಳನ್ನು ಊರಿ ನೆಲೆಸಿರಿ. ಆನಂತರ ಉಸಿರನ್ನು ತೆಗೆದುಕೊಳ್ಳುತ್ತಾ ತಲೆ, ಕುತ್ತಿಗೆಯನ್ನು ಮೇಲಕ್ಕೆತ್ತಿ. ದೃಷ್ಟಿ ಮೇಲೆ ನೋಡುತ್ತಿರಬೇಕು. ನಂತರ ಉಸಿರನ್ನು ಬಿಡುತ್ತಾ ತಲೆಯನ್ನು ಎರಡೂ ಕೈಗಳ ನಡುವೆ ತನ್ನಿ. ಹಾಗೆಯೇ ಹೊಟ್ಟೆಯ ಭಾಗ ಮತ್ತು ಎದೆಯ ಭಾಗವನ್ನು ಒಳಕ್ಕೆಳೆದುಕೊಳ್ಳಿ. ಬೆನ್ನನ್ನು ಸ್ವಲ್ಪ ಹಿಗ್ಗಿಸಿ ನಂತರ ಸಹಜ ಸ್ಥಿತಿಗೆ ಬರಬೇಕು. ಈ ಸ್ಥಿತಿಗೆ ಕ್ಯಾಟ್ ಮತ್ತು ಕ್ಯಾಮೆಲ್ ಎಂದು ಹೆಸರು. ಈ ಆಸನವನ್ನು ಮೂರರಿಂದ ಆರು ಬಾರಿ ಅಭ್ಯಾಸ ನಡೆಸಿ ವಿಶ್ರಮಿಸಿರಿ. ಊರಿರುವ ಕೈಗಳು ಊರಿರುವ ಮೊಣಕಾಲಗಳು ನೇರಕ್ಕೆ ಸರಿಯಾಗಿರಲಿ.
ಜಮಖಾನದ ಮೇಲೆ ಮೊಣಕಾಲು ಮತ್ತು ಕೈಗಳನ್ನು ಊರಿ ನೆಲೆಸಿ. ಆನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಬಲಕಾಲನ್ನು ನೇರವಾಗಿಸಿ. ತಲೆಯನ್ನು ಸ್ವಲ್ಪ ಮೇಲೆತ್ತಿ ದೃಷ್ಟಿಯನ್ನು ನೇರವಾಗಿಸಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ ವಿರಮಿಸಿ. ಹಾಗೆಯೇ ಎಡಗಾಲಿನಲ್ಲಿಯೂ ಅಭ್ಯಾಸ ಮಾಡಿ.
ಮಾರ್ಜಾಲಾಸನ ಸ್ಥಿತಿಯಲ್ಲಿದ್ದುಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ಬಲಗಾಲನ್ನು ದೇಹಕ್ಕೆ ಸಮನಾಂತರವಾಗಿ ಎತ್ತಬೇಕು. ಈಗ ಎಡಕೈಯನ್ನು ಮುಂದಕ್ಕೆ ನೇರವಾಗಿ ಚಾಚಿ. ದೃಷ್ಟಿ ನೇರವಾಗಿರಲಿ. ಈ ಸ್ಥಿತಿಯಲ್ಲಿ ಸ್ವಲ್ಪಹೊತ್ತು ಇದ್ದು ಉಸಿರನ್ನು ಬಿಡುತ್ತಾ ಕೈಕಾಲನ್ನು ಕೆಳಗೆ ತರಬೇಕು. ಇದೇ ರೀತಿ ಎಡಕಾಲಿನಿಂದಲೂ ಅಭ್ಯಾಸ ಮಾಡಿ.
ಪ್ರಯೋಜನ: ದೀರ್ಘ ಕಾಲದ ಬೆನ್ನು ನೋವನ್ನು ನಿಯಂತ್ರಣಕ್ಕೆ ತರಲು ಈ ಆಸನ ಸಹಕಾರಿ. ಬೆೆನ್ನುಹುರಿ ಮತ್ತು ಹೊಟ್ಟೆಯ ಅಂಗಗಳಿಗೆ ಮೃದುವಾದ ಮಸಾಜ್ ಈ ಆಸನದಿಂದ ದೊರಕುತ್ತದೆ. ಸ್ತೀಯರ ಮುಟ್ಟುದೋಷ ನಿಯಂತ್ರಣಕ್ಕೆ ಸಹಕಾರಿಯಾದ ಆಸನವಿದು. ಇದರ ನಿರಂತರ ಅಭ್ಯಾಸದಿಂದ ಬಿಳುಪು ಹೋಗುವುದು ಕಡಿಮೆಯಾಗುತ್ತದೆ. ಗರ್ಭಿಣಿಯರು ಮೂರು ತಿಂಗಳ ಅನಂತರದಿಂದ ಆರು ತಿಂಗಳವರೆಗೆ ಅಭ್ಯಾಸ ಮಾಡಬಹುದು. ಸುಖ ಪ್ರಸವಕ್ಕೆ ಈ ಆಸನ ಸಹಕಾರಿಯಾಗುತ್ತದೆ. ಸ್ವಾಧಿಷ್ಟಾನ ಚಕ್ರ ಪುನಶ್ಛೇತನಗೊಳಿಸುತ್ತದೆ.
ಮಾರ್ಜಾಲಾಸನದಿಂದ ಕೈಗಳಿಗೆ, ಕಾಲುಗಳಿಗೆ, ಸೊಂಟಕ್ಕೆ ವ್ಯಾಯಾಮ ದೊರಕುತ್ತದೆ. ಬೆನ್ನುಹುರಿ ಬಲಗೊಳ್ಳುತ್ತದೆ. ಕುತ್ತಿಗೆಯ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ದೊರಕಿದಂತಾಗುತ್ತದೆ. ಈ ಅಸನವನ್ನು ಅಭ್ಯಾಸ ಮಾಡುವುದರಿಂದ ಗರ್ಭಿಣಿಯರಿಗೆ ಸುಲಭ ಪ್ರಸವವಾಗಲು ಹೆಚ್ಚಿನ ಸಹಕಾರಿಯಾಗುತ್ತದೆ. ಇದೊಂದು ಸರಳ ಸುಲಭ ಆಸನವಾಗಿದ್ದು ಹೃದಯ ಶಾಂತತೆಗೆ ಉಪಯೋಗಕಾರಿಯಾಗಿದೆ.
ಮೊಣಕೈಗಳ ಬಳಿ ತೋಳುಗಳು ಬಾಗಬಾರದು. ಯೋಗವನ್ನು ಗುರು ಮುಖೇನವೇ ಕಲಿತು ಅಭ್ಯಾಸ ಮಾಡಿ.