ಇಂದು ವಿಶ್ವ ಶ್ರವಣ ದಿನ; ಕಿವಿಗೊಟ್ಟು ಆಲಿಸಿ!

VV Samvada
Published on

ಶ್ರವಣ ದೋಷಗಳ ಬಗ್ಗೆ ಜಾಗೃತಿ ಹಾಗೂ ಈ ಸಮಸ್ಯೆ ನಿವಾರಣೆಗೆ ಸಾಮೂಹಿಕ ಪ್ರಯತ್ನ ನಡೆಸುವ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನ ಆಚರಿಸುತ್ತದೆ. ಈ ಬಾರಿಯ ಘೋಷವಾಕ್ಯ ‘ಕಿವಿ ಮತ್ತು ಶ್ರವಣದ ಬಗ್ಗೆ ಕಾಳಜಿ ಮತ್ತು ಆರೈಕೆ ನಿಜವಾಗಿಸೋಣ’. ಶ್ರವಣ ದಿನ ಈ ಹಿನ್ನೆಲೆಯಲ್ಲಿ ವಾಕ್ ಮತ್ತು ಶ್ರವಣ ತಜ್ಞ ಡಾ. ರಮೇಶ್ ಕೆ. ಕೌಲ್​ಗುಡ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಜಿಸ್ಟ್ ಹವಿಲಾ ಜಯಕುಮಾರ್ ಅವರು ವಿಜಯವಾಣಿ - ದಿಗ್ವಿಜಯ ವಾಹಿನಿ ಆಯೋಜಿಸಿದ್ದ ಸಂವಾದದಲ್ಲಿ ಕಿವಿ ಆರೈಕೆ ಕುರಿತು ಮಾಹಿತಿ ನೀಡಿದ್ದು, ಅದರ ವಿವರ ಇಲ್ಲಿದೆ.

ಮನುಷ್ಯನಿಗೆ ಪಂಚೇಂದ್ರಿಯ (ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಚರ್ಮ) ಗಳಲ್ಲಿ ಎಲ್ಲವೂ ಮುಖ್ಯವೇ. ಇವುಗಳಲ್ಲಿ ಕಿವಿ ಹೊರತುಪಡಿಸಿ ಉಳಿದ ಯಾವುದೇ ಇಂದ್ರಿಯಕ್ಕೆ ತುಸು ಸಮಸ್ಯೆಯಾದರೂ ಕೂಡಲೇ ಅರಿವಿಗೆ ಬರುತ್ತದೆ. ಆದರೆ ಸದ್ದಿಲ್ಲದೆ, ಅರಿವಿಗೂ ಬಾರದೆ ಎದುರಾಗುವ ಸಮಸ್ಯೆ ಕಿವುಡುತನ. ಹಾಗಾಗಿ ಕಿವಿಯ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಅದರಲ್ಲೂ ನವಜಾತ ಶಿಶುಗಳ ಕಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ಶ್ರವಣ ತಜ್ಞರು. ವಾಕ್ ಶಕ್ತಿ ಮತ್ತು ಶ್ರವಣ ಶಕ್ತಿ ಒಂದಕ್ಕೊಂದು ಪೂರಕವಾಗಿರುವುದರಿಂದ ಕಿವಿ ಕೇಳಿಸದವರಿಗೆ ಮಾತು ಬಾರದಿರುವುದು ಸಾಮಾನ್ಯ ಸಮಸ್ಯೆ. ಈ ಸೂಕ್ಷ್ಮತೆ ಅರಿಯದ ಬಹಳಷ್ಟು ಜನರು ಶ್ರವಣ ದೋಷವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಕಾರಣದಿಂದಾಗಿ ಸಣ್ಣ ಸಮಸ್ಯೆ ತೀವ್ರಗೊಂಡು ಶಾಶ್ವತ ಕಿವುಡುತನಕ್ಕೆ ದಾರಿಯಾಗಬಹುದು. ಶ್ರವಣ ಸಮಸ್ಯೆಯ ಸ್ವರೂಪ, ಅದನ್ನು ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ಮತ್ತು ಶ್ರವಣ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತಜ್ಞ ವೈದ್ಯರು ವಿವರಿಸಿದ್ದಾರೆ. ಜತೆಗೆ ಶ್ರವಣ ಸಮಸ್ಯೆಗೆ ಇತರ ಅಂಗಗಳಷ್ಟೇ ಸಮಾನ ಆದ್ಯತೆ ನೀಡುವ ಮೂಲಕ ಶ್ರವಣದೋಷಮುಕ್ತ ಸಮಾಜ ನಿರ್ವಣದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಎಳೆಯ ಮಕ್ಕಳಲ್ಲೇ ಶ್ರವಣ ತಪಾಸಣೆ: ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಲು ಶ್ರವಣ ಶಕ್ತಿ ಅತ್ಯವಶ್ಯಕ. ಮಗು ಹುಟ್ಟಿದ ಮೂರು ತಿಂಗಳ ಒಳಗಾಗಿ ಅದರ ಶ್ರವಣ ಸಾಮರ್ಥ್ಯವನ್ನು ವೈದ್ಯರಲ್ಲಿ ಪರೀಕ್ಷಿಸಿ ಸಮಸ್ಯೆ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಶೇ.60 ಸಮಸ್ಯೆ ಪರಿಹಾರ ಸಾಧ್ಯ. ಸೂಕ್ತ ಸಮಯದಲ್ಲಿ ಸಮಸ್ಯೆ ಪತ್ತೆ ಮತ್ತು ಚಿಕಿತ್ಸೆ ಅಗತ್ಯ. ಇದನ್ನು ನಿರ್ಲಕ್ಷಿಸಿದರೆ ಮಕ್ಕಳು ಶಾಶ್ವತ ಕಿವುಡುತನಕ್ಕೆ ಒಳಗಾಗಬಹುದು. ಶ್ರವಣ ದೋಷದಿಂದ ಮಕ್ಕಳು ವಾಕ್ ಸಾಮರ್ಥ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಉದಾಸೀನ ಸರಿಯಲ್ಲ. ಮಗು ಜನಿಸಿದ ಕೂಡಲೇ ಅದರ ಕಿವಿಯ ಆರೋಗ್ಯ ತಪಾಸಣೆ ಮಾಡಿಸಿದರೆ ಭವಿಷ್ಯದಲ್ಲಿ ಶ್ರವಣ ದೋಷ ಎದುರಾಗುವ ಸಾಧ್ಯತೆಗಳಿದ್ದರೆ ಅದನ್ನು ಪತ್ತೆ ಹೆಚ್ಚಿ ಚಿಕಿತ್ಸೆ ನೀಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಮಕ್ಕಳು ಜನಿಸುತ್ತಲೇ ಕಿವಿಯ ತಪಾಸಣೆ ಮಾಡಿಸಿ, ನಂತರ 3 ತಿಂಗಳಲ್ಲಿ, ಬಳಿಕ 6 ತಿಂಗಳಲ್ಲಿ ಇನ್ನೊಮ್ಮೆ ಪರೀಕ್ಷೆ ಮಾಡಿಸುವುದು ಸೂಕ್ತ.

ನೈಸರ್ಗಿಕ ರಕ್ಷಣೆ

ಕಿವಿಗೆ ತನ್ನನ್ನು ತಾನು ಸಂರಕ್ಷಣೆ ಮಾಡಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆ ಹೊಂದಿದೆ. ಗುಗ್ಗೆ ಉತ್ಪತ್ತಿ ಆಗಿ ತಾನಾಗಿಯೇ ಬಿದ್ದು ಹೋಗುತ್ತದೆ. ಹಾಗಾಗಿ ಗುಗ್ಗೆ ತೆಗೆಯಲು ಬಡ್ಸ್ ಹಾಗೂ ಇತರೆ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಯುಕ್ತ. ಕಿವಿಯಲ್ಲಿ ತಂತಾನೇ ಉತ್ಪತ್ತಿ ಆಗುವ ಮೇಣದ ದ್ರವವನ್ನು ಸ್ವಚ್ಛ ಮಾಡಿಕೊಳ್ಳುವುದೂ ತಪು್ಪ. ಹಾಗೆಯೇ ಕಿವಿಗೆ ನೀರು ಬೀಳದಂತೆ ಎಚ್ಚರವಹಿಸಬೇಕು. ಕಿವಿಯಲ್ಲಿ ಹುಳು ಹೊಕ್ಕರೆ ಉಪು್ಪ ನೀರು ಬಿಡುವುದು, ಗುಗ್ಗೆ ಮೆದುವಾಗಿಸಲು ಎಣ್ಣೆ ಬಿಡುವುದು ಮಾಡಬಾರದು. ಅದರಿಂದ ಕಿವಿಯ ತಮಟೆಗೆ ಘಾಸಿಯಾಗುವ ಸಾಧ್ಯತೆ ಹೆಚ್ಚು. ಪ್ರಸ್ತುತ ವೈಜ್ಞಾನಿಕವಾಗಿ ತಯಾರಿಸಿರುವ ಔಷಧ ಲಭ್ಯವಿದ್ದು, ಇಎನ್​ಟಿ ತಜ್ಞರ ಸಲಹೆ ಮೇರೆಗೆ ಬಳಸಬಹುದು.

ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ

ಕರ್ನಾಟಕವನ್ನು ಶ್ರವಣದೋಷಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಜಾರಿಗೊಳಿಸಿದೆ. ಇದರಿಂದ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಉಳಿದಂತೆ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯಾರ್ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿದೆ. ಬೆಂಗಳೂರಿನ ಕೆ.ಸಿ.ಜನರಲ್ ಸಾರ್ವಜನಿಕ ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಚಿಕಿತ್ಸೆ ವಿಳಂಬ ಆದಲ್ಲಿ ಮಕ್ಕಳಿಗೆ ಇದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯಾದ್ಯಂತ 26 ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಈ ಚಿಕಿತ್ಸೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ 6 ವರ್ಷದೊಳಗಿನ ಮಕ್ಕಳಲ್ಲಿ ಎರಡೂ ಕಿವಿಗಳಲ್ಲಿ ಗಂಭೀರ ಸ್ವರೂಪದ ಶ್ರವಣ ದೋಷಗಳಿದ್ದಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಅವಶ್ಯಕತೆಯಿದ್ದಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಚಿಕಿತ್ಸೆ ನಂತರ 2-3 ವರ್ಷಗಳವರೆಗೆ ಅಂದರೆ ಮಗು ಮಾತನಾಡಲು ಸಾಧ್ಯವಾಗುವವರೆಗೆ ಆಡಿಯಾಲಜಿಸ್ಟ್​ಗಳಿಂದ ಸ್ಪೀಚ್ ಥೆರಪಿ ಸೌಲಭ್ಯವನ್ನೂ ನೀಡಲಾಗುತ್ತಿದೆ.

ಕರ್ಣಕ್ಕೆ ಬೇಕು ವಿಶ್ರಾಂತಿ

ಕಾಲ್ ಸೆಂಟರ್ ಅಥವಾ ಇಯರ್ ಫೋನ್ ಬಳಸಿ ನಿರಂತರವಾಗಿ ಶಬ್ದ ಕೇಳುತ್ತಿದ್ದರೆ ಅಂತಹವರು ಮೊಬೈಲ್, ಟಿವಿ, ಕಂಪ್ಯೂಟರ್​ನಲ್ಲಿ ಶೇ.60 ಡೆಸಿಬೆಲ್ ಪ್ರಮಾಣಕ್ಕಿಂತ ಕಡಿಮೆ ಶಬ್ದ ಇಟ್ಟುಕೊಳ್ಳಬೇಕು. 1 ಗಂಟೆಗೂ ಹೆಚ್ಚು ಕಾಲ ಬಳಸಿದರೆ 10 ನಿಮಿಷವಾದರೂ ಕಿವಿಗೆ ವಿಶ್ರಾಂತಿ ಕೊಡಬೇಕು.

ಕಿವಿ ಆರೈಕೆಗೆ ಟಿಪ್ಸ್

  • ಮಗು ಹುಟ್ಟಿದ 1 ವರ್ಷ ಕಾಲ ಪಾಲಕರು ಹೆಚ್ಚು ಒಡನಾಟ ಹೊಂದಿರಲಿ.
  • ಪತಿ, ಪತ್ನಿ ಮಾತ್ರ ಇರುವ ಕುಟುಂಬದವರು ಸಣ್ಣ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ.
  • ಸದಾ ಶಬ್ದದ ಮಧ್ಯೆ ಕೆಲಸ ಮಾಡುವ ಕಾರ್ವಿುಕರು ಕಿವಿಗೆ ಇಯರ್ ಪ್ಲಗ್ ಧರಿಸಬೇಕು.
  • ಸಭೆ, ಸಮಾರಂಭಗಳಲ್ಲಿ ಮೈಕ್, ಡಿಜೆ ಸದ್ದು ಕಡಿಮೆ ಪ್ರಮಾಣದಲ್ಲಿರಿಸುವುದು ಯುಕ್ತ.
  • ಈಜುಗಾರರು ಕಿವಿಗೆ ಇಯರ್ ಪ್ಲಗ್, ತಲೆಗೆ ಹೆಡ್ ಕ್ಯಾಪ್ ಧಾರಣೆ ಸೂಕ್ತ.
  • ಕಿವಿಗೆ ಇಯರ್ ಫೋನ್ ಹಾಕಿಕೊಂಡರೂ ಶಬ್ದದ ಪ್ರಮಾಣ ಕಡಿಮೆಯಿರಲಿ.
  • ಮೊಬೈಲನ್ನು ಕಿವಿಗೆ ಒತ್ತಿಹಿಡಿಯದೆ ತುಸು ದೂರದಿಂದ ಸಂಭಾಷಣೆ ನಡೆಸಬೇಕು.
  • ಅನುವಂಶೀಯ ಮದುವೆಯಿಂದ ದೂರ ಇದ್ದಲ್ಲಿ ಕಿವುಡತನ ಸಮಸ್ಯೆಯಿಂದ ಮುಕ್ತ.ವರ್ಷಕ್ಕೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಕಿವಿಯ ಆರೋಗ್ಯ ತಪಾಸಣೆ ಸೂಕ್ತ.

ನವಜಾತಶಿಶು ಶ್ರವಣದೋಷ ಪತ್ತೆ ಪರೀಕ್ಷೆ ಕಡ್ಡಾಯ

ರಾಜ್ಯದಲ್ಲಿ ಮಕ್ಕಳಲ್ಲಿ ಶ್ರವಣದೋಷದ ಕುರಿತು ನಿಖರವಾದ ದತ್ತಾಂಶ ಇಲ್ಲ. ಈ ಸಮಸ್ಯೆ ನಿವಾರಿಸಲು ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಿವಿ ಸಮಸ್ಯೆಯುಳ್ಳ 30 ಸಾವಿರ ಮಕ್ಕಳನ್ನು ಆರ್​ಟಿಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 600 ಮಕ್ಕಳಲ್ಲಿ ಗಂಭೀರ ಸಮಸ್ಯೆ ಪತ್ತೆಯಾಗಿದ್ದು, ಅವರೆಲ್ಲರಿಗೂ ಸ್ಥಳೀಯವಾಗಿಯೇ ಚಿಕಿತ್ಸೆ ಆರಂಭಿಸಲಾಗಿದೆ. ಇದೀಗ ಸರ್ಕಾರ ಎಲ್ಲ ಆಸ್ಪತ್ರೆಗಳಲ್ಲಿ ಆದ್ಯತೆ ನವಜಾತಶಿಶು ಶ್ರವಣದೋಷ ಪತ್ತೆ ಪರೀಕ್ಷೆಯನ್ನು ಕಡ್ಡಾಯ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net