ಭಯಾನಕ ದೃಶ್ಯ ನೋಡಿದಾಗ ಮೈಯೆಲ್ಲಾ ರೋಮಗಳು ನಿಮಿರಿಕೊಳ್ಳುವುದೇಕೆ? ಇದರ ಹಿಂದಿದೆ ಅಚ್ಚರಿಯ ವೈಜ್ಞಾನಿಕ ಕಾರಣ! Goosebumps

ಭಯಾನಕ ಸಿನಿಮಾ ನೋಡುವಾಗ ಇದ್ದಕ್ಕಿದ್ದಂತೆ ಬಾಗಿಲು ಬಡಿದ ಶಬ್ದ ಕೇಳಿಸಿದರೆ ಅಥವಾ ದೆವ್ವದ ದೃಶ್ಯ ಕಣ್ಣಮುಂದೆ ಬಂದರೆ ಮೈಯೆಲ್ಲಾ ಒಮ್ಮೆಲೆ ನಡುಗುತ್ತದೆ. ಕೆಲವರಿಗೆ ಕೈಕಾಲುಗಳ ಮೇಲಿನ ರೋಮಗಳು ನಿಮಿರಿಕೊಂಡು ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದನ್ನೇ ನಾವು ಸಾಮಾನ್ಯವಾಗಿ ಮೈ ನವಿರೇಳುವುದು ಎನ್ನುತ್ತೇವೆ. ಆದರೆ, ಯಾವುದೇ ಅಪಾಯವಿಲ್ಲದೆ ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತಿದ್ದರೂ ದೇಹದಲ್ಲಿ ಇಂತಹ ಬದಲಾವಣೆಯಾಗುವುದೇಕೆ? ಭಯವಾದಾಗ ನಮ್ಮ ಮೆದುಳು ಮತ್ತು ನರಮಂಡಲದಲ್ಲಿ ಏನೆಲ್ಲ ಬದಲಾವಣೆಗಳು ಸಂಭವಿಸುತ್ತವೆ ಗೊತ್ತಾ? ಇದರ ಹಿಂದೆ ಅಚ್ಚರಿಯ ವೈಜ್ಞಾನಿಕ ಕಾರಣವಿದೆ.
ಭಯಾನಕ ದೃಶ್ಯ ನೋಡಿದಾಗ ಮೈಯೆಲ್ಲಾ ರೋಮಗಳು ನಿಮಿರಿಕೊಳ್ಳುವುದೇಕೆ?
ಭಯಾನಕ ದೃಶ್ಯ ನೋಡಿದಾಗ ಮೈಯೆಲ್ಲಾ ರೋಮಗಳು ನಿಮಿರಿಕೊಳ್ಳುವುದೇಕೆ?WEB
Published on: 

Goosebumps : ಭಯಾನಕ ಸಿನಿಮಾ ನೋಡುವಾಗ ಇದ್ದಕ್ಕಿದ್ದಂತೆ ಬಾಗಿಲು ಬಡಿದ ಶಬ್ದ ಕೇಳಿಸಿದರೆ ಅಥವಾ ದೆವ್ವದ ದೃಶ್ಯ ಕಣ್ಣಮುಂದೆ ಬಂದರೆ ಮೈಯೆಲ್ಲಾ ಒಮ್ಮೆಲೆ ನಡುಗುತ್ತದೆ. ಕೆಲವರಿಗೆ ಕೈಕಾಲುಗಳ ಮೇಲಿನ ರೋಮಗಳು ನಿಮಿರಿಕೊಂಡು ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದನ್ನೇ ನಾವು ಸಾಮಾನ್ಯವಾಗಿ ಮೈ ನವಿರೇಳುವುದು ಎನ್ನುತ್ತೇವೆ. ಆದರೆ, ಯಾವುದೇ ಅಪಾಯವಿಲ್ಲದೆ ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತಿದ್ದರೂ ದೇಹದಲ್ಲಿ ಇಂತಹ ಬದಲಾವಣೆಯಾಗುವುದೇಕೆ? ಭಯವಾದಾಗ ನಮ್ಮ ಮೆದುಳು ಮತ್ತು ನರಮಂಡಲದಲ್ಲಿ ಏನೆಲ್ಲ ಬದಲಾವಣೆಗಳು ಸಂಭವಿಸುತ್ತವೆ ಗೊತ್ತಾ? ಇದರ ಹಿಂದೆ ಅಚ್ಚರಿಯ ವೈಜ್ಞಾನಿಕ ಕಾರಣವಿದೆ.

ಮೆದುಳು ಅಪಾಯದ ಸೂಚನೆ ನೀಡುವುದೇಕೆ?

ನಾವು ಭಯಾನಕ ದೃಶ್ಯವನ್ನು ನೋಡಿದಾಗ ಅಥವಾ ಅನಿರೀಕ್ಷಿತ ಶಬ್ದವನ್ನು ಕೇಳಿದಾಗ ಮೆದುಳು ಅದನ್ನು ಗ್ರಹಿಸಿ ಪ್ರತಿಕ್ರಿಯಿಸುತ್ತದೆ. ಮೆದುಳಿನಲ್ಲಿರುವ ಅಮಿಗ್ಡಾಲಾ ಎಂಬ ಭಾಗವು ಭಯ ಮತ್ತು ಆತಂಕದಂತಹ ಭಾವನೆಗಳನ್ನು ಸಂಸ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಪಾಯದ ಸೂಚನೆ ಸಿಕ್ಕಾಗ ದೇಹವನ್ನು ಎಚ್ಚರಿಸುವ ನರಮಂಡಲದ ಪ್ರತಿಕ್ರಿಯೆಗಳು ಆರಂಭವಾಗುತ್ತವೆ. ಇದರಿಂದ ದೇಹ ಕ್ಷಣಾರ್ಧದಲ್ಲಿ ಎಚ್ಚರಗೊಳ್ಳುತ್ತದೆ.

ರೋಮಗಳು ನಿಮಿರಿಕೊಳ್ಳಲು ಕಾರಣವೇನು?

ನಮ್ಮ ಚರ್ಮದ ಪ್ರತಿಯೊಂದು ಕೂದಲಿನ ಬುಡದಲ್ಲಿಯೂ ಸಣ್ಣ ಸ್ನಾಯುಗಳಿರುತ್ತವೆ. ಇವುಗಳನ್ನು ಅರಕ್ಟರ್ ಪಿಲಿ ಎಂದು ಕರೆಯಲಾಗುತ್ತದೆ. ಭಯ, ಚಳಿ ಅಥವಾ ತೀವ್ರ ಭಾವನೆ ಉಂಟಾದಾಗ ಸಿಂಪಥೆಟಿಕ್ ನರಮಂಡಲದ ಪ್ರಭಾವದಿಂದ ಈ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಆಗ ಕೂದಲುಗಳು ನಿಮಿರಿಕೊಂಡು ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ಪೈಲೊಎರೆಕ್ಷನ್ ಎಂದು ಕರೆಯುತ್ತಾರೆ. ಇದೇ ನಾವು ಅನುಭವಿಸುವ ಮೈ ನವಿರೇಳುವಿಕೆಯ ಹಿಂದಿನ ಪ್ರಮುಖ ಕಾರಣ.

ಇದನ್ನೂ ಓದಿ : ನೀವು ರಾತ್ರಿ 12 ಗಂಟೆಗೆ ಕನ್ನಡಿ ನೋಡ್ತೀರಾ? ಹಾಗಾದ್ರೆ ಈ ಭಯಾನಕ ಕಥೆಯನ್ನು ಒಮ್ಮೆ ಓದಲೇಬೇಕು! Mirror Mystery

ಭಯವಾದಾಗ ಹೃದಯದ ಬಡಿತ ಹೆಚ್ಚಾಗುವುದೇಕೆ?

ಮೈ ನವಿರೇಳುವುದಷ್ಟೇ ಅಲ್ಲ, ಭಯವಾದಾಗ ಹೃದಯದ ಬಡಿತವೂ ಹೆಚ್ಚಾಗುತ್ತದೆ. ಕೆಲವರಿಗೆ ಕೈಕಾಲುಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ, ಉಸಿರಾಟ ವೇಗಗೊಳ್ಳುತ್ತದೆ. ಇದಕ್ಕೆ ಕಾರಣ ದೇಹದಲ್ಲಿ ಸಕ್ರಿಯಗೊಳ್ಳುವ ಫೈಟ್ ಆರ್ ಫ್ಲೈಟ್ ಪ್ರತಿಕ್ರಿಯೆ. ಅಂದರೆ ಅಪಾಯ ಎದುರಾದಾಗ ಅದನ್ನು ಎದುರಿಸಲು ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ದೇಹವನ್ನು ಸಿದ್ಧಪಡಿಸುವ ಸ್ವಾಭಾವಿಕ ವ್ಯವಸ್ಥೆ. ಈ ಸಂದರ್ಭದಲ್ಲಿ ಅಡ್ರಿನಲಿನ್ ಸೇರಿದಂತೆ ಕೆಲವು ರಾಸಾಯನಿಕಗಳ ಬಿಡುಗಡೆಯೂ ದೇಹದ ಪ್ರತಿಕ್ರಿಯೆಗೆ ನೆರವಾಗುತ್ತದೆ.

ಸಿನಿಮಾ ನೋಡಿದಾಗಲೂ ಇದೇ ಅನುಭವವಾಗುವುದೇಕೆ?

ನಿಜ ಜೀವನದಲ್ಲಿ ಯಾವುದೇ ಅಪಾಯವಿಲ್ಲದಿದ್ದರೂ ಭಯಾನಕ ಸಿನಿಮಾ ನೋಡುವಾಗ ಮೈ ನವಿರೇಳಬಹುದು. ತೆರೆಮೇಲಿನ ಭಯಾನಕ ದೃಶ್ಯಗಳು, ಹಠಾತ್ ಕೇಳಿಬರುವ ಶಬ್ದಗಳು ಮತ್ತು ಅನಿರೀಕ್ಷಿತ ಘಟನೆಗಳು ಮೆದುಳಿನಲ್ಲಿ ಭಯದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಹೀಗಾಗಿ ಸುರಕ್ಷಿತವಾದ ಸ್ಥಳದಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದರೂ ದೇಹವು ಅಪಾಯ ಎದುರಾದಂತೆ ಪ್ರತಿಕ್ರಿಯಿಸಬಹುದು. ಇದೇ ಕಾರಣಕ್ಕೆ ಕೆಲವರು ಭಯಾನಕ ದೃಶ್ಯ ಬಂದಾಗ ಕಣ್ಣು ಮುಚ್ಚಿಕೊಳ್ಳುತ್ತಾರೆ ಅಥವಾ ಕಿವಿ ಮುಚ್ಚಿಕೊಳ್ಳುತ್ತಾರೆ.

ಭಯವೊಂದೇ ಇದಕ್ಕೆ ಕಾರಣವಲ್ಲ

ಆಶ್ಚರ್ಯಕರ ಸಂಗತಿಯೆಂದರೆ ಮೈ ನವಿರೇಳುವುದು ಭಯವಾದಾಗ ಮಾತ್ರ ಸಂಭವಿಸುವುದಿಲ್ಲ. ಮನಸ್ಸಿಗೆ ಇಷ್ಟವಾದ ಹಾಡು ಕೇಳುವಾಗ, ಭಾವನಾತ್ಮಕ ದೃಶ್ಯ ನೋಡುವಾಗ, ದೇಶಭಕ್ತಿಯ ಹಾಡು ಕೇಳಿ ರೋಮಾಂಚನಗೊಂಡಾಗಲೂ ಇದೇ ಅನುಭವವಾಗಬಹುದು. ಅಷ್ಟೇ ಅಲ್ಲ, ತೀವ್ರ ಚಳಿಯಾದಾಗ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿಯೂ ರೋಮಗಳು ನಿಮಿರಿಕೊಳ್ಳುತ್ತವೆ.

ಮೈ ನವಿರೇಳುವುದು ನಮ್ಮ ದೇಹದ ಸಹಜ ಪ್ರತಿಕ್ರಿಯೆ. ಭಯಾನಕ ದೃಶ್ಯವಿರಲಿ, ಮನಸ್ಸಿಗೆ ಇಷ್ಟವಾದ ಸಂಗೀತವಿರಲಿ, ನಮ್ಮ ಮೆದುಳು ಮತ್ತು ನರಮಂಡಲವು ಭಾವನೆಗಳಿಗೆ ಅನುಗುಣವಾಗಿ ದೇಹದಲ್ಲಿ ಹಲವು ಬದಲಾವಣೆಗಳನ್ನು ಉಂಟುಮಾಡುತ್ತವೆ. ನಾವು ಸಾಮಾನ್ಯವೆಂದು ಭಾವಿಸುವ ಈ ಸಣ್ಣ ಪ್ರತಿಕ್ರಿಯೆಯ ಹಿಂದೆಯೂ ಇಷ್ಟೊಂದು ಅಚ್ಚರಿಯ ವಿಜ್ಞಾನ ಅಡಗಿದೆ, (ಏಜೆನ್ಸೀಸ್​).