ಬಿಳಿ ಮೊಟ್ಟೆ vs ಕಂದು ಮೊಟ್ಟೆ ಯಾವುದು ಆರೋಗ್ಯಕರ? ಇಲ್ಲಿದೆ ಉಪಯುಕ್ತ ಮಾಹಿತಿ…

Eggs
Published on

ಮೊಟ್ಟೆಯು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಇದನ್ನು ಬೆಳಗಿನ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಯಾವಾಗ ಬೇಕಾದರೂ ಸೇವಿಸಬಹುದು. ಮೊಟ್ಟೆ ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಮೊಟ್ಟೆ ಪೋಷಕಾಂಶಗಳು ಆಗರವಾಗಿದೆ. ಮೊಟ್ಟೆಯ ಚಿಪ್ಪಿನ ಬಣ್ಣವು ಮೊಟ್ಟೆಗಳ ಆಯ್ಕೆಯ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ, ಕೆಲವರು ಕಂದು ಮೊಟ್ಟೆಗಳು ಉತ್ತಮ ಹಾಗೂ ಆರೋಗ್ಯಕರವೆಂದು ನಂಬುತ್ತಾರೆ. ಆದಾಗ್ಯೂ ಕಂದು ಮತ್ತು ಬಿಳಿ ಮೊಟ್ಟೆಗಳ ನಡುವಿನ ಪೋಷಕಾಂಶಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬಿಳಿ ಮತ್ತು ಕಂದು ಬಣ್ಣದ ಚಿಪ್ಪಿನ ಮೊಟ್ಟೆಗಳಲ್ಲಿ ಪೋಷಕಾಂಶಗಳ ಮಟ್ಟವು ಹೆಚ್ಚೇನು ಭಿನ್ನವಾಗಿರುವುದಿಲ್ಲ. ಮೊಟ್ಟೆಯ ಚಿಪ್ಪಿನ ಬಣ್ಣದ ಹೊರತಾಗಿ ಅದರ ಗಾತ್ರವೂ ಪೋಷಕಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ದೊಡ್ಡ ಗಾತ್ರದ ಮೊಟ್ಟೆಗಳು 90 ಕ್ಯಾಲೋರಿಗಳು ಮತ್ತು 8 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ ಮತ್ತು ಮಧ್ಯಮ ಗಾತ್ರದ ಮೊಟ್ಟೆಗಳು 60 ಕ್ಯಾಲೋರಿಗಳು ಮತ್ತು 6 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ.

ಕೋಳಿಗಳು ತಿನ್ನುವ ಆಹಾರ

ಮೊಟ್ಟೆಗಳ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ಕೋಳಿಗಳು ತಿನ್ನುವ ಆಹಾರವಾಗಿದೆ. ಉದಾಹರಣೆಗೆ, ಕೋಳಿ ಸಾಕಾಣೆ ಮಾಡುವವರು ತಮ್ಮ ಕೋಳಿಗಳಿಗೆ ಜೀವಸತ್ವಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಅಥವಾ ಇತರ ಪೋಷಕಾಂಶಗಳುಳ್ಳ ಆಹಾರವನ್ನು ನೀಡಿ, ಕೋಳಿಗಳನ್ನು ಉತ್ಕೃಷ್ಟಗೊಳಿಸಬಹುದು.

ಸೂರ್ಯನ ಬೆಳಕು ಮುಖ್ಯ

ಹೊರಗೆ ಆರಾಮಾಗಿ ತಿರುಗಾಡುವ ಕೋಳಿಗಳು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕೋಳಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನ ಬೆಳಕಿನಿಂದಾಗಿ ಮೊಟ್ಟೆಗಳಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗುತ್ತದೆ. ಆದರೆ, ಕೋಳಿ ಫಾರ್ಮ್​ಗಳಲ್ಲಿ ಒಂದು ಶೆಡ್​ನಲ್ಲಿ ಕೂಡಿಟ್ಟು ಸಾಕುವ ಕೋಳಿಗಳನ್ನು ಸೂರ್ಯನ ಬೆಳಕಿಗೆ ಒಡ್ಡುವುದಿಲ್ಲ. ಅಲ್ಲದೆ, ಫಾರ್ಮ್​ಗಳಲ್ಲಿ ಕೋಳಿಗೆ ಇಂಜೆಕ್ಷನ್​ ನೀಡಿ ಬೆಳವಣಿಗೆ ಮಾಡಿಸುವುದರಿಂದ ಅವುಗಳು ಮೊಟ್ಟೆಗಳು ಸಹ ಆರೋಗ್ಯಕ್ಕೆ ಅಷ್ಟೇನು ಲಾಭ ನೀಡುವುದಿಲ್ಲ.

ಮೊಟ್ಟೆಗಳನ್ನು ಆಯ್ಕೆ ಮಾಡುವ ಟಿಪ್ಸ್​

* ಅಂಗಡಿಗಳಲ್ಲಿ ರೆಫ್ರಿಜರೇಟರ್‌ನಲ್ಲಿರುವ ಮೊಟ್ಟೆಗಳನ್ನು ಮಾತ್ರ ಖರೀದಿಸಿ

* ಸ್ವಚ್ಛ ಮತ್ತು ಬಿರುಕು ಬಿಡದ ಚಿಪ್ಪುಗಳನ್ನು ಹೊಂದಿರುವ ಮೊಟ್ಟೆಗಳನ್ನು ಆರಿಸಿ

* ಅವಧಿ ಮೀರಿದ ಮೊಟ್ಟೆಗಳನ್ನು ಖರೀದಿಸಬೇಡಿ

* ಖರೀದಿಸಿದ ನಂತರ ಸಾಧ್ಯವಾದಷ್ಟು ಬೇಗ ರೆಫ್ರಿಜರೇಟರ್‌ನಲ್ಲಿ ಇರಿಸಿ

ಯಾವುದು ಉತ್ತಮ ರುಚಿ ಹೊಂದಿದೆ?

ಕಂದು ಬಣ್ಣದ ಮೊಟ್ಟೆಗಳು ಬಿಳಿ ಮೊಟ್ಟೆಗಳಿಗಿಂತ ಭಾರವಾಗಿರುತ್ತವೆ ಮತ್ತು ಹೆಚ್ಚು ಶೆಲ್ ಮತ್ತು ಅಲ್ಬುಮೆನ್ ಅನ್ನು ಹೊಂದಿರುತ್ತದೆ. ಕಂದು ಮೊಟ್ಟೆಗಳು ಕಡಿಮೆ ಹಳದಿ ಲೋಳೆಯನ್ನು ಹೊಂದಿರುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net