ಯುವತಿಯರ ಜತೆ ರೀಲ್ಸ್​ ಮಾಡುವಾಗ ಕಿಡ್ನಾಪ್​ ಆಗಿದ್ದ ಟಿಕ್​ಟಾಕ್​ ಸ್ಟಾರ್​ ನವೀನ್​ ಬರ್ಬರ ಹತ್ಯೆ!

Tik Tok Star Naveen
Published on

ಮೈಸೂರು: ಬೆಂಗಳೂರು ಮೂಲದ ಟಿಕ್​ಟಾಕ್​ ಸ್ಟಾರ್​ ನವೀನ್​ ಮೈಸೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇದೀಗ ಈ ಪ್ರಕರಣವನ್ನು ಭೇದಿಸಿರುವ ಮೈಸೂರಿನ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅರಮನೆ ಮುಂದೆ ಕಿಡ್ನಾಪ್​

ಇದೇ ತಿಂಗಳು 27 ರಂದು ನವೀನ್​, ಇಬ್ಬರು ಯುವತಿಯರ ಜತೆ ಮೈಸೂರಿಗೆ ಆಗಮಿಸಿ, ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ಆತನನ್ನು ಅಪಹರಣ ಮಾಡಲಾಗಿತ್ತು. ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ನವೀನ್​ನನ್ನು ರಾತ್ರಿ 9.45ರ ಸುಮಾರಿಗೆ ಕಿಡ್ನಾಪ್​ ಮಾಡಿತ್ತು.

ಎಂಟು ಆರೋಪಿಗಳ ಬಂಧನ 

ಇದಾದ ಬಳಿಕ ನವೀನ್​ ಮೃತದೇಹ ನಂಜನಗೂಡಿನ ಗೋಳೂರಿನ‌ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗುರುತು ಪತ್ತೆಯಾಗಿದ್ದು, ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ

ಬೆಂಗಳೂರಿನ ಕಾರ್ಪೋರೆಟರ್ ಅಣ್ಣನ ಮಗನ ಕೊಲೆಗೆ ಪ್ರತೀಕಾರವಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್​ ಆರೋಪಿಯಾಗಿದ್ದ. ಅಲ್ಲದೆ, ಜೈಲು ಸೇರಿದ್ದ ನವೀನ್​ ಕೆಲದಿನಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಇದೀಗ ಕೊಲೆಯಾಗಿದ್ದು, ಇದೇ ಕಾರಣಕ್ಕೆ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಟಿಕ್‌ ಟಾಕ್‌ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ. ಸದ್ಯ ನಂಜನಗೂಡು ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net