

ಬೆಂಗಳೂರು: ನಮ್ಮ ಜೀವನಶೈಲಿಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದಿನನಿತ್ಯದ ಕೆಲಸದ ಒತ್ತಡದಲ್ಲಿ ಯಾವ ಆಹಾರ ತಿನ್ನಬೇಕು? ಯಾವ ಸಮಯದಲ್ಲಿ ಸೇವಿಸುವುದು ಸೂಕ್ತ ಎಂಬ ವಿಷಯವನ್ನು ತಿಳಿದುಕೊಳ್ಳುವಲ್ಲಿ ಅನೇಕರು ವಿಫಲರಾಗುತ್ತಾರೆ. ವೃತ್ತಿಯ ಜೀವನದಲ್ಲಿ ಬ್ಯುಸಿ ಇರುವ ಜನಸಾಮಾನ್ಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಡವುತ್ತಾರೆ. ಉತ್ತಮ ಆರೋಗ್ಯಕ್ಕೆ ಹಣ್ಣು-ಹಂಪಲು ಎಷ್ಟು ಉತ್ತಮವೋ ಅದಕ್ಕಿಂತ ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರ ಈ ಮೊಳಕೆ ಕಟ್ಟಿದ ಕಾಳುಗಳು (Sprouts).
ಹೆಸರುಕಾಳು, ಕಡ್ಲೇಕಾಳು, ಶೆಂಗಾ (ಕಡ್ಲೇಬೀಜ) ಸೇರಿದಂತೆ ಇತರೆ ಧಾನ್ಯಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಅದನ್ನು ನೀರಿನಿಂದ ಬೇರ್ಪಡಿಸಿ, ಶುದ್ಧ ಬಟ್ಟೆಯಲ್ಲಿ ಕಟ್ಟಿಟ್ಟರೆ ಕಾಳುಗಳಲ್ಲಿ ಮೊಳಕೆ ಬರುತ್ತದೆ. ಈ ಕಾಳುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಅದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಒದಗುತ್ತದೆ.
ಪೌಷ್ಟಿಕಾಂಶ ಪ್ರಮಾಣ ಹೆಚ್ಚಿರುವ ಮೊಳಕೆ ಕಟ್ಟಿದ ಕಾಳುಗಳನ್ನು ಹಸಿಯಾಗಿ ತಿನ್ನುವವರ ಸಂಖ್ಯೆಯೇ ಹೆಚ್ಚು. ಕೆಲವರು ಬೇಯಿಸಿ ತಿನ್ನುವುದನ್ನು ರೂಢಿಸಿಕೊಳ್ಳುತ್ತಾರೆ. ಕಾರಣ, ಕಾಳುಗಳನ್ನು ಬೇಯಿಸಿದರೆ, ಅದರಲ್ಲಿರುವ ಬ್ಯಾಕ್ಟಿರೀಯಾಗಳು ಸಾಯುತ್ತವೆ ಎಂದು. ಬಹುಜನರು ಹಸಿ ಮೊಳಕೆ ಕಾಳುಗಳನ್ನು ಸೇವನೆ ಮಾಡುತ್ತಾರೆ. ಆದರೆ, ಇದನ್ನು ಯಾವ ಸಮಯದಲ್ಲಿ ತಿನ್ನೋದು ಸೂಕ್ತ ಎಂಬ ಗೊಂದಲ ಇಂದಿಗೂ ಅನೇಕರಲ್ಲಿದೆ.
ಅಸಲಿಗೆ ಕಾಳುಗಳನ್ನು ಇಂತಹ ಸಮಯದಲ್ಲಿಯೇ ತಿನ್ನಬೇಕು ಎಂಬುದೇನಿಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಉಪಹಾರದಲ್ಲಿ ಮೊಳಕೆ ಕಟ್ಟಿದ ಕಾಳನ್ನು ಸೇರಿಸಿಕೊಳ್ಳಬಹುದು. ಅಥವಾ ಕೇವಲ ಇದೊಂದನ್ನು ಪ್ರತ್ಯೇಕ ಸಮಯದಲ್ಲಿಯಾದರೂ ತಿನ್ನಬಹುದು. ಜೀರ್ಣಕ್ರಿಯೆ ಸೇರಿದಂತೆ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಈ ಕಾಳುಗಳು ಒದಗಿಸುತ್ತದೆ. ವ್ಯಾಯಾಮ ಮತ್ತು ಫಿಟ್ನೆಸ್ ಮಾಡುವವರು ಹೆಚ್ಚಾಗಿ ಮೊಳಕೆ ಕಾಳುಗಳನ್ನು ತಮ್ಮ ಡಯಟ್ನಲ್ಲಿ ಸೇರಿಸಿಕೊಳ್ಳುತ್ತಾರೆ. ಇದರೊಂದಿಗೆ ಒಂದೆರೆಡು ಬೇಯಿಸಿದ ಮೊಟ್ಟೆಯನ್ನು ಸಹ ಸೇವಿಸುತ್ತಾರೆ. ಇದು ಅವರವರ ಆಹಾರ ಪದ್ಧತಿಗೆ ತಕ್ಕಂತೆ ಇರುತ್ತದೆ.