ಕರೊನಾ ಕಾಲದಲ್ಲಿ ಅಮೆರಿಕ, ಇಟಲಿಯನ್ನು ನೋಡಿ ನಾವು ಕಲಿಯಬೇಕಾದುದೇನು?

Coronavirus Feb 20-10
Published on

ಮಾನವನ ಪೋಷಣೆ, ರಕ್ಷಣೆಗಳು ಪ್ರಕೃತಿಯ ಸ್ವಾಭಾವಿಕ ನಡೆಗಳೆಂದು ಹೇಳಬಹುದು. ವ್ಯಾಧಿ, ವಿಕೃತಿಗಳು ಇದಕ್ಕೆ ವಿರುದ್ಧವಾದವು. ಕೋವಿಡ್-19ರಂತಹ ಸಾಂಕ್ರಾಮಿಕ ವಿಶ್ವದೆಲ್ಲೆಡೆ ರೌದ್ರಾವತಾರ ತೋರುತ್ತಿದೆ. ಭಾರತದ ಪರಿಸ್ಥಿತಿ ತುಸು ಭಿನ್ನವಾಗಿದೆ. ಅಮೆರಿಕ, ಇಟಲಿಗಳಂತಹ ದೇಶಗಳಿಗೆ ಹೋಲಿಸಿದರೆ ಇಲ್ಲಿನ ವೈದ್ಯಕೀಯ ವ್ಯವಸ್ಥೆಗಿಂತ ಅದೆಷ್ಟೋ ಹೆಚ್ಚಿನ ರೀತಿಯಲ್ಲಿ ಸದಾ ಸನ್ನದ್ಧವಾಗಿರುವ ದೇಶಗಳವು. ನೈರ್ಮಲ್ಯವನ್ನು ಪ್ರಾಶಸ್ತ್ಯ ನೀಡಿ ಕಾಪಾಡಿಕೊಂಡು ಬಂದವರು ಅವರು. ಪರಿಸರ, ರಸ್ತೆ, ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿ ಇಡುವ ನಾಗರಿಕ ಪ್ರಜ್ಞೆ ಪಾಲಿಸಿದವರು. ಆಗಾಗ ಕೈ ತೊಳೆಯುವುದು, ದೇಹವನ್ನು ಬಾಹ್ಯವಾಗಿ ಮಲಿನ ಮಾಡದೆ ಇಟ್ಟುಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತನ್ನು ಕಾಪಾಡುವುದು, ಜನಸಂಖ್ಯೆಯೂ ಕಡಿಮೆ ಇರುವುದರಿಂದಲೋ ಏನೋ ಜನದಟ್ಟಣೆಯಿಂದ ಅಂತರವನ್ನು ಕಾಯ್ದುಕೊಂಡವರು. ಇವೆಲ್ಲ ಅಲ್ಲಿನ ದಿನನಿತ್ಯದ ವ್ಯವಸ್ಥೆಗಳು. ಹಾಗಿದ್ದೂ ಸಾಂಕ್ರಾಮಿಕ ರೋಗವೀಗ ಅಲ್ಲಿ ಪಸರಿಸುತ್ತಿರುವ ರೀತಿ ನೋಡಿದರೆ ದಂಗಾಗಬೇಕಾಗುತ್ತದೆ. ಇದರಿಂದ ನಾವು ಕಲಿತುಕೊಳ್ಳಬೇಕಾದ ಪಾಠಗಳು ಹಲವು ಇವೆ ಅನಿಸುತ್ತದೆ.

ಮಕ್ಕಳನ್ನು ತುಂಬ ಸೂಕ್ಷ್ಮದೇಹಿಗಳಾಗಿ ಬೆಳೆಸಬಾರದು! ಭಾರತದಲ್ಲಿ ಹೊರಗೆ ಕ್ರೀಡಾಂಗಣಗಳಲ್ಲಿ ಫುಟ್ಬಾಲ್, ಕ್ರಿಕೆಟ್ ಮುಂತಾದವುಗಳನ್ನು ಆಡುವ ಮಕ್ಕಳು ಮಣ್ಣಿನಲ್ಲಿ ಮಿಂದೇಳುತ್ತಾರೆ. ಅದೇ ವಿದೇಶಗಳಲ್ಲಿ ಕೃತಕ ಹುಲ್ಲುಹಾಸಿನ ಮೇಲೆಯೇ ಅವರ ಆಟ! ಮಣ್ಣಿನ ಕಣಗಳ ಸ್ಪರ್ಶವೇ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಪ್ರತಿನಿತ್ಯ ಆಗಾಗ ಕೈಕಾಲು ತೊಳೆಯುವುದು ಅಭ್ಯಾಸವಾಗಿರುತ್ತದೆ. ಇಲ್ಲಿ ಅದೆಷ್ಟು ಬಾರಿ ಇವೆಲ್ಲ ನಡೆಯುತ್ತದೆ? ತರಕಾರಿಯಾಗಲಿ ಯಾವುದೇ ವಸ್ತುವಾಗಲಿ ಎಲ್ಲವೂ ಹವಾನಿಯಂತ್ರಿತ ವ್ಯವಸ್ಥೆಯೊಳಗೇ ಇರುತ್ತವೆ. ಇಲ್ಲಿ ಹಾಗಿಲ್ಲವಲ್ಲ. ಭಾರತೀಯರ ರೋಗನಿರೋಧಕಶಕ್ತಿಯ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿರಬಹುದು. ಆಹಾರವ್ಯವಸ್ಥೆಯಲ್ಲಿ ಬಳಸುವ ಅನೇಕ ಸಾಂಬಾರಪದಾರ್ಥಗಳಿಗೆ ರೋಗನಿರೋಧಕಶಕ್ತಿ ಹೆಚ್ಚಿಸುವ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುವ ಕ್ರಿಯಾಶೀಲತೆಯಿದೆ. ಜೊತೆಯಲ್ಲಿ ವೈರಾಣು ವಿರೋಧಿ ಗುಣ, ಜೀರ್ಣಶಕ್ತಿ ವರ್ಧಿಸುವ, ಯಕೃತ್ ಬಲಪಡಿಸುವ ಗುಣಧರ್ಮಗಳಿವೆ. ಆಹಾರವ್ಯಂಜನಗಳಲ್ಲಿ ಅದರ ಬಳಕೆಯೂ ಯಥೇಚ್ಛವಾಗಿದೆ.

ಮುಂದುವರಿದ ದೇಶಗಳಲ್ಲಿ ಬದುಕಿನ ಬಹುತೇಕ ಸಮಯ ಹವಾನಿಯಂತ್ರಿತ ವ್ಯವಸ್ಥೆಯ ಒಳಗೇ ಇರುತ್ತದೆ. ಬಿಸಿಲಿರಲಿ, ಚಳಿಯಿರಲಿ ಎಲ್ಲಿಯೂ ಬಾಹ್ಯ ವಾತಾವರಣಕ್ಕೆ ಮೈಯೊಡ್ಡುವ ಸಂದರ್ಭವೇ ಎದುರಾಗುವುದಿಲ್ಲ. ಮನೆ, ವಾಹನ, ಕಚೇರಿ, ವಾಹನ ನಿಲ್ದಾಣ, ಮಾಲ್, ಅಂಗಡಿ, ಶಾಲೆಗಳು ಎಲ್ಲೆಡೆಯೂ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ! ಇಲ್ಲಿ ಇವೆಲ್ಲ ಎಲ್ಲಿದೆ? ಪ್ರತಿಶತ ಒಂದರಷ್ಟು ಜನರೂ ಹವಾನಿಯಂತ್ರಣ ವ್ಯವಸ್ಥೆಯಲ್ಲಿಲ್ಲ. ಇದ್ದವರೂ, ದಿನಪೂರ್ತಿ ಹಾಗಿರುವುದಿಲ್ಲ. ಪರಿಸರದ ಜೊತೆಗೇ ಬೆಳೆಯುವವರು ನಾವು. ಆಳುವ ಸರ್ಕಾರಗಳು ಈ ಸಂದರ್ಭದಲ್ಲಿ ಏನೆಲ್ಲ ಜಾಗೃತಿ ಮಾಡಬೇಕೋ ಅವೆಲ್ಲವನ್ನೂ ಮಾಡಿವೆ. ರಾಜಧರ್ಮ ಪಾಲಿಸಿವೆ. ಆ ಎಲ್ಲವನ್ನೂ ಅನುಷ್ಠಾನಕ್ಕೆ ತಂದು ರೋಗವನ್ನು ಹಿಮ್ಮೆಟ್ಟಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದುವೇ ಪ್ರಜಾಧರ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net