ಯೋಗದಿಂದ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಕೆ

Suryanamaskara
Published on

ನಾನು ಸುಮಾರು 50-60 ಕಿ.ಗ್ರಾಂ ಹೊಂದಿದ್ದೇನೆ. ನನಗೆ ತೆಳ್ಳಗಾಗಲು ಯಾವ ಯಾವ ಯೋಗ ಮಾಡಬೇಕು ತಿಳಿಸಿ.

| ಚೈತ್ರಾ, 22 ವರ್ಷ, ಮಂಡ್ಯ

ತೂಕ ನಷ್ಟಕ್ಕೆ ಯೋಗ ಉತ್ತಮವೇ ಎಂದು ಯೋಗ ತರಗತಿಗಳಲ್ಲಿ ಕೇಳುತ್ತಾರೆ. ಯೋಗದ ಬೆಳವಣಿಗೆಯು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳುವಲ್ಲಿ ಅನೇಕ ಜನರಿಗೆ ಪ್ರಯೋಜನವನ್ನು ನೀಡಿದೆ. ಯೋಗ, ಆರೋಗ್ಯಕರ ಆಹಾರದೊಂದಿಗೆ ಸಂಯೋಜಿಸಿದಾಗ, ನಿಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡ, ನೋವು, ದೈಹಿಕ ಚಟುವಟಿಕೆ ಕೊರತೆ, ಆತಂಕ, ನಿದ್ರಾಹೀನತೆ, ತಪ್ಪಾದ ಜೀವನಶೈಲಿ ಇತ್ಯಾದಿಗಳಿಂದ ತೂಕ ಹೆಚ್ಚಾಗುತ್ತದೆ. ಇದನ್ನೆಲ್ಲ ನಿಭಾಯಿಸಲು ಯೋಗ ಸಹಾಯ ಮಾಡುತ್ತದೆ. ಯೋಗದ ದೈಹಿಕ, ಮಾನಸಿಕ ಪ್ರಯೋಜನಗಳು, ಒತ್ತಡ ನಿರ್ವಹಣೆಯೊಂದಿಗೆ ಸೇರಿ, ವ್ಯಕ್ತಿಗೆ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗುತ್ತದೆ.

ಯೋಗವು ದೇಹದ ನಮ್ಯತೆಯನ್ನು ನಿರ್ವಿುಸುವುದು, ಏಕಾಗ್ರತೆಯನ್ನು ಸುಧಾರಿಸುವುದು ಮತ್ತು ಸ್ನಾಯುವಿನ ನಾದವನ್ನೂ ಹೆಚ್ಚಿಸುವತ್ತ ಗಮನ ಹರಿಸುತ್ತದೆ. ದೇಹವು ಆಯ್ದ ಆಸನಗಳಿಗೆ ಒಗ್ಗಿಕೊಂಡ ನಂತರ ತೂಕ ಇಳಿಕೆಗೆ ಸಹಾಯವಾಗುತ್ತದೆ. ಕನಿಷ್ಠ ಮೂರು ತಿಂಗಳು ತಜ್ಞ ಯೋಗಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.

ತೂಕ ನಷ್ಟಕ್ಕೆ ಕೆಲವು ಆಸನಗಳು: ಆರಂಭದಲ್ಲಿ ಸೂಕ್ಷ್ಮ ವ್ಯಾಯಾಮಗಳು, ಕಪಾಲಭಾತಿ, ಸೂರ್ಯನಮಸ್ಕಾರ, ಆಸನಗಳಲ್ಲಿ ಪಾದಹಸ್ತಾಸನ, ಅರ್ಧಚಕ್ರಾಸನ, ಪರಿವೃತ್ತ ತ್ರಿಕೋಣಾಸನ, ಉತ್ಥಿತ ಪಾರ್ಶ್ವಕೋಣಾಸನ, ಪದ್ಮಾಸನ, ಪಶ್ಚಿಮೋತ್ಥಾನಾಸನ, ಉಷ್ಟ್ರಾಸನ, ಮಂಡೂಕಾಸನ, ವಕ್ರಾಸನ, ನೌಕಾಸನ, ಊರ್ಧ್ವಪ್ರಸಾರಿತ ಪಾದಾಸನ, ಜಠರ ಪರಿವರ್ತನಾಸನ, ಹಲಾಸನ, ಭುಜಂಗಾಸನ, ಧನುರಾಸನ, ಚಕ್ರಾಸನ, ಶವಾಸನ. ಪ್ರಾಣಾಯಾಮಗಳಲ್ಲಿ ಭಸ್ತ್ರಿಕಾ ಪ್ರಾಣಾಯಾಮ, ನಾಡೀಶುದ್ಧಿ ಪ್ರಾಣಾಯಾಮ. ನಿಮ್ಮ ತೂಕವನ್ನು ನಮೂದಿಸಿಲ್ಲ. ತೂಕ ಇದೆ ಎಂಬ ಚಿಂತೆಯನ್ನು ಬಿಟ್ಟು ಸಂತೋಷದಿಂದಿರಿ. ಉತ್ತಮ ಆಹಾರದ ಕಡೆಗೆ ಗಮನ ಕೊಡಿ.

 ಹಲಾಸನದ ಸಂಕ್ಷಿಪ್ತ ಮಾಹಿತಿ ಹಾಗೂ ಪ್ರಯೋಜನದ ಬಗ್ಗೆ ತಿಳಿಸಿ.

| ಸಂಜಯ್, 50 ವರ್ಷ, ಬೆಂಗಳೂರು

ಭಾರತೀಯ ಕೃಷಿಯಲ್ಲಿ ಸಾಮಾನ್ಯವಾಗಿ ಬಳಸುವ ಜನಪ್ರಿಯ ಕೃಷಿ ಸಾಧನ ನೇಗಿಲು. ಹಲಾಸನವು ಇದರ ಆಕಾರವನ್ನು ಹೋಲುವ ಭಂಗಿಯಾಗಿದೆ. ಹಲ ಎಂದರೆ ನೇಗಿಲು, ಆಸನ ಎಂದರೆ ಭಂಗಿ. ಸುಲಭವಾದ ಉಸಿರಾಟವನ್ನು ಪಡೆಯಲು ಮತ್ತು ಕಡಿಮೆ ಬೆನ್ನಿನ ನಮ್ಯತೆಯ ಮೇಲೆ ಕೆಲಸ ಮಾಡಲು ಹೆಚ್ಚುವರಿ ಅಭ್ಯಾಸದ ಅಗತ್ಯವಿರುವವರಿಗೆ ಈ ಆಸನ ಸಹಕಾರಿ.

ಪ್ರಯೋಜನ : ಮಿದುಳನ್ನು ಶಾಂತಗೊಳಿಸುತ್ತದೆ. ಸ್ನಾಯುಗಳು ಬಲಗೊಂಡು ಬೆನ್ನೆಲುಬು ಬಲಿಷ್ಠವಾಗುತ್ತದೆ, ಕಿಬ್ಬೊಟ್ಟೆಯ ಅಂಗಗಳು ಮತ್ತು ಥೈರಾಯ್್ಡ ಗ್ರಂಥಿಯನ್ನು ಉತ್ತೇಜಿಸುತ್ತದೆ. ಭುಜಗಳು ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಋತುಸಂಬಂಧದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆನ್ನುನೋವು, ತಲೆನೋವು, ಬಂಜೆತನ, ನಿದ್ರಾಹೀನತೆ, ಸೈನಸೈಟಿಸ್​ಗೆ ಚಿಕಿತ್ಸಕವಾಗಿದೆ. ಒತ್ತಡ, ಆಯಾಸ ಕಡಿಮೆಯಾಗುತ್ತದೆ. ಮೂಳೆಗಳ ಸವಕಳಿಯನ್ನು ತಡೆಯುತ್ತದೆ. ದೀರ್ಘಕಾಲದ ಮಲಬದ್ಧತೆ ನಿಯಂತ್ರಣವಾಗುತ್ತದೆ. ನಿತ್ಯ ನಿರಂತರ ಅಭ್ಯಾಸದಿಂದ ಬಲು ಬೇಗ ಬೊಜ್ಜು ಕರಗಿಸಲು ಸಹಾಯಕವಾಗುತ್ತದೆ. ಗುರುಮುಖೇನವೇ ಕಲಿತು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ.

ಸೂಚನೆ: ಕುತ್ತಿಗೆನೋವು, ಸ್ಪಾಂಡಿಲೈಟಿಸ್ ಇದ್ದವರು ಹಾಗೂ ಹೆಚ್ಚಿನ ರಕ್ತದೊತ್ತಡ ಇರುವವರು ಇದರ ಅಭ್ಯಾಸ ಮಾಡುವುದು ಬೇಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net