

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ |
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನ್ ಅವಲೋಕಯನ್ || 6.13
ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ |
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ || 6.14
ಯುಂಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ |
ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ || 6.15
‘ತಲೆ, ಕುತ್ತಿಗೆ, ಶರೀರಗಳನ್ನು ಅಚಲವಾಗಿಟ್ಟುಕೊಂಡು ಸುತ್ತಲೂ ದಿಕ್ಕುಗಳನ್ನು ನೋಡದೆ ಸ್ಥಿರವಾಗಿ ತನ್ನ ಮೂಗಿನ ತುದಿಯನ್ನು ನೋಡುತ್ತಾ ಯೋಗ ಮಾಡಬೇಕು. ಪ್ರಶಾಂತ ಚಿತ್ತನೂ ನಿರ್ಭಯನೂ ಆಗಿ ಬ್ರಹ್ಮಚಾರಿ ವ್ರತದಲ್ಲಿದ್ದು ಮನಸ್ಸನ್ನು ಸಂಯಮ ಮಾಡಿಕೊಳ್ಳಬೇಕು. ಪರಮ ಪುರುಷಾರ್ಥನಿಗಾಗಿ ಧ್ಯಾನಿಸಬೇಕು. ಹೀಗೆ ಯಾವಾಗಲೂ ಮನಸ್ಸನ್ನು ನಿಗ್ರಹಿಸಿದ ಯೋಗಸಾಧಕನು ಶಾಂತಿಸ್ವರೂಪವಾದ ಪರಮ ನಿರ್ವಾಣವನ್ನು ಪಡೆದುಕೊಳ್ಳುತ್ತಾನೆ.’
ಇದರಿಂದ ಲಭಿಸುವುದು ಏನೇನು?: ಪ್ರಾಣಾಯಾಮ ಮುಂತಾದ ಯೋಗಭ್ಯಾಸದ ಮೂಲಕ ಪ್ರಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಿಕೊಳ್ಳಬಹುದು. ಇದರಿಂದ ಜಗತ್ತಿನ ಸೆಳೆತ, ಮನೋದೈಹಿಕ ವ್ಯಾಧಿಗಳನ್ನು ನಿಯಂತ್ರಣದಲ್ಲಿರಿಸಬಹುದು. ಯಾರ ಮನಸ್ಸು ಅವನ ನಿಯಂತ್ರಣದಲ್ಲಿರುತ್ತದೋ ಅವನಿಂದ ಜೀವನ ಜಯ, ಬದುಕಿನ ಸಾರ್ಥಕತೆ ಆನಂದ ಲಭಿಸುತ್ತದೆ. ಈ ಸಾಧನೆಗಳಿಗೆ ಪೂರಕವಾಗುವ ಭ್ರಾಮರೀ ಪ್ರಾಣಾಯಾಮದ ಅಭ್ಯಾಸವನ್ನು ಗಮನಿಸೋಣ.
ಚಾಪೆ ಅಥವಾ ಕಂಬಳಿ ಹಾಸಿಕೊಂಡು ಸ್ವಸ್ತಿಕಾಸನ, ಪದ್ಮಾಸನ, ಸುಖಾಸನ ಅಥವಾ ನಿಮಗೆ ಅನುಕೂಲವೆನಿಸುವ ಯಾವುದೇ ಆಸನದಲ್ಲಿ ಕುಳಿತುಕೊಳ್ಳಿ. ಎರಡೂ ಕೈಗಳ ಬೆರಳುಗಳನ್ನು ಚಿನ್ಮುದ್ರೆಯಲ್ಲಿ ಇರಿಸಿ. ಮೂಗಿನ ಎರಡೂ ಹೊಳ್ಳೆಗಳಿಂದ ದೀರ್ಘವಾಗಿ ಉಸಿರೆಳೆದುಕೊಳ್ಳಿ. ನಿಧಾನವಾಗಿ ‘ಹಮ್ ಎಂದು ದುಂಬಿಯ ಝೇಂಕಾರದಂತೆ ಸ್ವರ ಹೊರಡಿಸುತ್ತ ಉಸಿರನ್ನು ಹೊರಗೆ ಬಿಡಿ. ಹೀಗೆ ಐದರಿಂದ ಹತ್ತು ಸಲ ಅಭ್ಯಾಸ ಮಾಡಿ.
ಲಾಭಗಳು: ಹೆರಿಗೆ ದಿನಗಳು ಸಮೀಪಿಸುತ್ತಿರುವವರಿಗೆ ಇಂತಹ ರೇಚಕ ಕ್ರಿಯೆ ಪ್ರಯೋಜನಕಾರಿ. ಈ ಅಭ್ಯಾಸ ಮಾಡಿದಲ್ಲಿ ನಿಮ್ಮ ಧ್ವನಿ ಮಧುರವಾಗುತ್ತದೆ. ಸ್ವರ ಸ್ಪಷ್ಟವಾಗುತ್ತವೆ. ಸಂಗೀತ ಅಭ್ಯಾಸಿಗಳಿಗೆ ಉತ್ತಮ ವ್ಯಾಯಾಮ. ಈ ಪ್ರಾಣಾಯಾಮದಿಂದ ನಿದ್ರಾರಾಹಿತ್ಯ ದೂರವಾಗುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಮಿದುಳು ಚುರುಕಾಗುತ್ತದೆ. ಗ್ರಹಣಶಕ್ತಿ ಹೆಚ್ಚುತ್ತದೆ. ವಿವಿಧ ಪ್ರಕಾರದ ಯೋಗದ ತರಬೇತಿ ನೀಡುವಾಗ ಕೆಲವು ಶಿಕ್ಷಕರು ‘ಹಮ್ನ ಬದಲಿಗೆ ‘ಓಂ’ಕಾರವನ್ನು ಹೇಳಿಸುತ್ತಾರೆ. ಇದು ಕೂಡ ಪ್ರಯೋಜನಕಾರಿ.