ದೊಡ್ಡವರಿಗೂ ದೊಡ್ಡವರಿರುತ್ತಾರೆ!

Manollasa
Published on

| ಸುಮಾವೀಣಾ

‘ನಿಡಿಯರ್ಗಂ ನಿಡಿಯರೊಳರ್’ (ದೊಡ್ಡವರಿಗೂ ದೊಡ್ಡವರಿರುತ್ತಾರೆ)- ಸರ್ವಕಾಲಕ್ಕೂ ಅನ್ವಯವಾಗುವ ಈ ಮಾತು ಆದಿಕವಿ ಪಂಪನ ಕೃತಿ ‘ಪಂಪಭಾರತ’ದಲ್ಲಿ ಉಲ್ಲೇಖವಾಗಿದೆ. ‘ವ್ಯಕ್ತಿಗಿಂತ ವ್ಯಕ್ತಿ ಮಿಗಿಲು’, ‘ಮರಕ್ಕಿಂತ ಮರ ದೊಡ್ಡದು’, ‘ಬೆಟ್ಟಕ್ಕಿಂತ ಬೆಟ್ಟ ದೊಡ್ಡದು’ ಎಂಬ ಮಾತುಗಳನ್ನು ಇಲ್ಲಿ ಸಾಮಯಿಕವಾಗಿ ನೆನಪಿಸಿಕೊಳ್ಳಬಹುದು. ದೊಡ್ಡವರು, ಹಿರಿಯರು ಎಂದರೆ ವಯಸ್ಸಿನಲ್ಲೋ, ಬುದ್ಧಿಯಲ್ಲೋ, ಆಚಾರದಲ್ಲೋ, ಅಂತಸ್ತಿನಲ್ಲೋ, ಜನಬಳಕೆಯಲ್ಲೋ, ತೋಳ್ಬಲದಲ್ಲೋ ಎಂಬ ಚರ್ಚೆ ಬಂದೇ ಬರುತ್ತದೆ. ಹಣದ ಅಹಂನಿಂದ ಬೀಗುವವರನ್ನು ‘ಬಹಳ ದೊಡ್ಡಸ್ತಿಕೆಯವರು, ಗತ್ತು ಬಿಡಲ್ಲ, ಮಾತಾಡಲ್ಲ’ ಎಂದೇ ಪರಿಚಯಿಸಿಕೊಂಡಿರುತ್ತೇವೆ. ‘ದೊಡ್ಡವರ ಸಣ್ಣ ಗುಣ’ ಎಂಬ ಟೀಕೆಗಳನ್ನೂ ಕೆಲವೊಮ್ಮೆ ಕೇಳಿದ್ದೇವೆ.

ಬಹಳ ವರ್ಷಗಳ ಹಿಂದೆ ದೇವಗಿರಿ ಎಂಬ ಊರಿನಲ್ಲಿ ಶ್ವೇತವರ್ಮನೆಂಬ ರಾಜ ನಿಷ್ಠೆಯಿಂದ ರಾಜ್ಯಭಾರ ಮಾಡುತ್ತಿದ್ದ. ಆತನ ಜನಪ್ರಿಯತೆಯೂ ಅಷ್ಟೇ ಇತ್ತು. ಇಂಥ ಶ್ವೇತವರ್ಮ ಇದ್ದಕ್ಕಿದ್ದ ಹಾಗೆ ಜಡನಾಗಿ, ಲವಲವಿಕೆಯಿಲ್ಲದೆ ಚಿಂತಿಸುತ್ತ ಕುಳಿತುಬಿಟ್ಟ. ಚಿಂತಾಮಗ್ನ ರಾಜನನ್ನು ಕಂಡ ಮಂತ್ರಿ-‘ಮಹಾಪ್ರಭುಗಳೇ ನಿಮ್ಮ ನೆಮ್ಮದಿ ಕೆಡಿಸಿರುವ ಆ ಘನಚಿಂತೆ ಯಾವುದು?’ ಎಂದು ಕೇಳಿದ. ಆಗ ಮಹಾರಾಜ, ‘ನಮ್ಮ ರಾಜ್ಯದಲ್ಲಿ ಅಪ್ರಾಮಾಣಿಕರು, ಅಸತ್ಯವಂತರು, ವಿಶ್ವಾಸದ್ರೋಹಿಗಳು ಹೆಚ್ಚಾಗುತ್ತಿದ್ದಾರೆ. ಇವರ ನಡುವೆ ಯಾರಾದರೂ ಒಳ್ಳೆಯ ವ್ಯಕ್ತಿ ಸಿಗಬಹುದೇ?’ ಎಂದರೆ ಮಂತ್ರಿ ಆತ್ಮಪ್ರಶಂಸೆಯಿಂದ ‘ನಾನೇ ಇದ್ದೇನಲ್ಲ’ ಎಂದ. ರಾಜನು, ‘ನಿನಗಿಂತಲೂ ಒಳ್ಳೆಯವರು ಇಲ್ಲವೇ?’ ಎಂದಾಗ ಮಂತ್ರಿ-‘ಅಲ್ಲಿ 80 ವರ್ಷ ವಯಸ್ಸಿನ ವೃದ್ಧೆಯೊಬ್ಬರಿದ್ದಾರೆ. ತನ್ನ ಬಗ್ಗೆ ಚಿಂತಿಸದೆ, ಲೋಕದ ಜನರ ಕಾಳಜಿಯಿಂದ ಬಾವಿಯೊಂದನ್ನು ತೋಡಿಸುತ್ತಿದ್ದಾರೆ. ಈಕೆ ಶ್ರೇಷ್ಠ ಅನ್ನಿಸುತ್ತದೆ’ ಎಂದ. ಶ್ವೇತವರ್ಮನಿಗೆ ಸಂತಸವಾಗಿ-‘ದುಷ್ಟ ಜನರ ನಡುವೆಯೂ ಇಂಥ ಸಾಧಿ್ವೃದ್ಧೆಯ ಮನಸ್ಥಿತಿಯನ್ನು ಕಂಡಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ನೆಮ್ಮದಿಯಾಗುತ್ತದೆ’ ಎಂದ. ಇದನ್ನೂ ಓದಿ: ಮನೋಲ್ಲಾಸ: ಮೊದಲು ನಾವು ಬದಲಾಗೋಣ

ಹೌದು! ಯಾರು ಸ್ವಾರ್ಥ ಮರೆತು ಜನಕಲ್ಯಾಣದ ಬಗ್ಗೆ ಯೋಚಿಸುತ್ತಾರೋ, ತಮ್ಮಂತೆ ಪರರು ಎಂದು ವ್ಯಕ್ತಿಗತವಾದ ಗೌರವವನ್ನು ಕೊಡುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು. ಹಣ, ಹೆಸರಿನ ಹಿಂದೆ ಹೋಗುವವರಲ್ಲ ದೊಡ್ಡಜನಗಳು. ಸಮಾಜದ ಜನರ ಬಗ್ಗೆ ಕಾಳಜಿ ಇರುವವರು ದೊಡ್ಡಜನಗಳು. ಸ್ವಹಿತ ಮರೆತು, ಪರರಹಿತ, ಲೋಕದ ಕಾಳಜಿ ಮಾಡುವವರು ಹಿರಿಯರು. ಇಂಥ ಹಿರಿಯರು ಮುನ್ನೆಲೆಗೆ ಬರುವುದೇ ಇಲ್ಲ. ಅವರ ಪಾಡಿಗೆ ಅವರು ಸಮಾಜೋದ್ಧಾರದ ಕೆಲಸ ಮಾಡುತ್ತಿರುತ್ತಾರೆ. ತಮ್ಮಂಥ ಜನರೇನಾದರೂ ಸಿಕ್ಕರೆ ಅವರಿಗೆ ತಲೆಬಾಗುತ್ತಾರೆ. ಇಂಥ ವ್ಯಕ್ತಿಗಳು ನಮ್ಮ-ನಿಮ್ಮ ನಡುವೆ ಖಂಡಿತಾ ಇದ್ದಾರೆ. ಯಾವುದೇ ಹಮ್ಮುಬಿಮ್ಮು ಇಲ್ಲದೆ ಸದಾ ಕಾರ್ಯಪ್ರವೃತ್ತರಾಗಿ ಇರುತ್ತಾರೆ. ಬಹುಶಃ ಇಂಥ ಜನರ ಸಂಖ್ಯೆ ಪಂಪನ ಕಾಲದಲ್ಲಿ ಬಹಳವಿತ್ತೇನೋ ಹಾಗಾಗಿ ‘ನಿಡಿಯರ್ಗಂ ನಿಡಿಯರೊಳರ್’ ಎಂಬ ಸಾರ್ವಕಾಲಿಕ ಮಾತನ್ನು ದಾಖಲಿಸಿದ್ದಾನೆ. ಪಂಪನ ಕಾಲಕ್ಕಿಂತ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆದರೆ ಶ್ರೇಷ್ಠತೆಯ ಪ್ರಾಮುಖ್ಯ ಎಲ್ಲೂ ಮುಕ್ಕಾಗಿಲ್ಲ. ಗುಣದ ಹಿರಿತನವನ್ನು ಕೆಲವರಾದರೂ ಹಾಗೆ ಉಳಿಸಿಕೊಂಡಿದ್ದಾರೆ.

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net