ಮನೋಲ್ಲಾಸ: ಶ್ರೀ ಮತ್ತು ಶ್ರೀಮಾನ್ ಮಹತ್ವ

851623
Published on
ಬೇಲೂರು ರಾಮಮೂರ್ತಿ
ಅಂದಿನ ಗುರುಕುಲದಲ್ಲಿ ಗುರುಗಳು ಶಿಷ್ಯರನ್ನುದ್ದೇಶಿಸಿ, ‘ನಾವು ಯಾರನ್ನಾದರೂ ಸಂಬೋಧಿಸುವಾಗ ಶ್ರೀ ಅಥವಾ ಶ್ರೀಮಾನ್ ಎನ್ನುತ್ತೇವೆ. ಯಾರಿಗಾದರೂ ಸಂದೇಶ ಕಳಿಸುವಾಗ ಲಕೋಟೆಯಲ್ಲಿ ಅವರ ಹೆಸರಿನ ಮೊದಲು ಶ್ರೀ ಅಥವಾ ಶ್ರೀಮಾನ್ ಎಂದು ಬರೆಯುತ್ತೇವೆ. ಇದರ ಅರ್ಥ ಏನು?’ ಎಂದು ಕೇಳಿದರು. ಒಬ್ಬ ಶಿಷ್ಯ ‘ಅದು ಗೌರವಸೂಚಕ. ಹೆಸರಿನ ಮುಂದೆ ಗೌರವಸೂಚಕ ಪದ ಇರಬೇಕು ಎಂದು ನೀವೇ ಹೇಳಿದ್ರಲ್ಲ’ ಅಂದ. ಗುರುಗಳು ಸಂತಸದಿಂದ ತಲೆಯಾಡಿಸಿದರು. ಇನ್ನು ಯಾರಾದರೂ ಅಭಿಪ್ರಾಯ ತಿಳಿಸುವರೋ ಎಂದು ಕಾದು ನಂತರ ಹೇಳಿದರು. ‘ಶ್ರೀ ಎಂದರೆ ಸಂಪತ್ತು. ಇತರರಲ್ಲಿರುವ ವಿದ್ಯಾ ಸಂಪತ್ತನ್ನು ನಾವು ಗುರುತಿಸಿ ಗೌರವ ಸೂಚಿಸುವುದೇ ಶ್ರೀ ಎನ್ನುವುದು. ಸಂಪತ್ತು ಎಂದಾಕ್ಷಣ ದುಡ್ಡು ಒಂದೇ ಅಲ್ಲ. ಇತರರಲ್ಲಿರುವ ಕಿಂಚಿತ್ ಒಳ್ಳೆಯ ಗುಣವನ್ನೂ ಗುರುತಿಸುವ ಮನಸ್ಸು ನಮಗಿದೆ ಎಂದು ತೋರಿಸುವುದು ಇತರರನ್ನು ಶ್ರೀ ಜೊತೆಗೆ ಸಂಬೋಧಿಸಿದಾಗ. ಇನ್ನು ಶ್ರೀಮಾನ್ ಎಂದರೆ ಶ್ರೀಯಿಂದ ತುಂಬಿರುವ ಮಾನ್ಯರೇ ಎಂದಾಗುವುದು. ಯಾರಲ್ಲಿ ವಿದ್ಯಾಶ್ರೀ, ವಿನಯಶ್ರೀ, ಮುಂತಾದ ಸಂಪತ್ತುಗಳು ತುಂಬಿರುವುದೋ ಅವರನ್ನು ನಾವು ಮಾನ್ಯ ಮಾಡುವುದು ಹೀಗೆ. ಮುಖ್ಯವಾಗಿ ನಮ್ಮಲ್ಲಿ ಇತರರಲ್ಲಿ ರುವ ಒಳ್ಳೆಯ ಗುಣಗಳನ್ನು ಗುರುತಿಸುವ ಔದಾರ್ಯ ಇರಬೇಕು.

ಇನ್ನು ಶ್ರೀಮಾನ್ ಎನ್ನುವುದಕ್ಕೆ ಬಹುಮುಖ್ಯವಾದ ಇನ್ನೊಂದು ಅರ್ಥವೂ ಇದೆ. ಇಡೀ ವಿಶ್ವದ ಒಡೆತನ ಹೊಂದಿರುವ ಭಗವಂತ ಅತ್ಯಂತ ಶ್ರೀಮಂತ. ಹೀಗಾಗಿ ಅವನು ಶ್ರೀಮಾನ್. ನಮ್ಮ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಬಾಯಿ, ಮೂಗು, ಕಿವಿ ಮುಂತಾದುವು ಸಹ ಒಂದೊಂದೂ ಶ್ರೀಗಳು ಎಂದು ಐತರೇಯ ಉಪನಿಷತ್ತು ಹೇಳುತ್ತದೆ. ಏಕೆಂದರೆ ಈ ಎಲ್ಲಾ ಇಂದ್ರಿಯಗಳೂ ನಮ್ಮ ತಲೆಯ ಭಾಗದಲ್ಲೇ ಇವೆ. ಮನುಷ್ಯ ಆಧ್ಯಾತ್ಮಿಕವಾಗಿ ಏನನ್ನಾದರೂ ಸಾಧಿಸಿದ್ದಾನೆ ಮತ್ತು ಸ್ವಲ್ಪ ಜ್ಞಾನವನ್ನು ಸಂಪಾದನೆ ಮಾಡಿದ್ದಾನೆ ಎಂದರೆ ಅದು ಅವನ ಕಣ್ಣು ಮತ್ತು ಕಿವಿಗಳಿಂದ ಮಾತ್ರ. ಧರ್ಮಗ್ರಂಥಗಳನ್ನು ಓದುವುದು ಮತ್ತು ಕೇಳುವುದು ಇವೇ ಆ ಕ್ರಿಯೆಗಳು.

ಕಣ್ಣು ಮತ್ತು ಕಿವಿಗಳನ್ನು ದೇಹದ ಸೂರ್ಯ ಚಂದ್ರರು ಎನ್ನುತ್ತಾರೆ. ಇನ್ನೊಂದು ಬಹುಮುಖ್ಯವಾದ ಅಂಶ ಎಂದರೆ ನಮ್ಮ ನಾಲಿಗೆ. ಇದನ್ನು ನಮ್ಮ ಹಿರಿಯರು ‘ಅಗ್ನಿಸ್ವರೂಪ’ ಎನ್ನುತ್ತಾರೆ. ಬಾಯಿ ಮತ್ತು ಅದರಿಂದ ಬರುವ ಮಾತು ಎರಡೂ ಪರಮಾತ್ಮ ನಮಗೆ ಕೊಟ್ಟಿರುವ ಅಪೂರ್ವ ಸಂಪತ್ತು. ಹೀಗಾಗಿ ನಾವು ಬಾಯಿಯ ಬಳಕೆಯನ್ನು ಸದಾ ಸದುಪಯೋಗ ಮಾಡಿಕೊಳ್ಳಬೇಕು. ಬಾಯಿಂದ ಯಾವುದೇ ಮಾತು ಹೊರಡುವ ಮುನ್ನ ನೋಡಿದ್ದನ್ನು ಅನುಭವಿಸಲು ಮತ್ತು ಕೇಳಿದ್ದನ್ನು ಗ್ರಹಿಸಲು ಮನಸ್ಸು ಬೇಕು. ಜೊತೆಗೆ ಈ ಎಲ್ಲಾ ಇಂದ್ರಿಯಗಳನ್ನೂ ಚಲನಾತ್ಮಕವಾಗಿಟ್ಟುಕೊಳ್ಳಲು ಪ್ರಾಣಶಕ್ತಿ ಬೇಕು. ಹೀಗಾಗಿ ಪಂಚೇಂದ್ರಿಯಗಳು ನಮ್ಮಲ್ಲಿರುವ ಅತ್ಯಂತ ಶ್ರೀಮಂತ ಅಂಗಗಳು. ಇದನ್ನು ನಮಗೆ ದಯಪಾಲಿಸಿದವನು ಕರುಣಾಮಯಿ ಭಗವಂತ ಅಂದರೆ ಶ್ರೀಮಾನ್. ನಮ್ಮ ಅನುದಿನದ ಕಾಯಕಗಳಲ್ಲಿ ಇಂಥ ಶ್ರೀಮಾನ್ ಸದಾ ನೆನಪಿನಲ್ಲಿರಬೇಕು’ ಎಂದು ಗುರುಗಳು ಅಂದಿನ ಪಾಠವನ್ನು ಮುಕ್ತಾಯ ಮಾಡಿದರು.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net