ಮನೋಲ್ಲಾಸ: ಅಧಿಕಾರದ ದರ್ಪ ಬೇಡ…

Manoasf
Published on
ಡ್ಯಾನಿ ಪಿರೇರಾ, ಹಳ್ಳಿಮೈಸೂರು

ಹಿರಿಯರೊಬ್ಬರು ಹೇಳಿದ ಘಟನೆ. ಆತ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿ. ಅಧಿಕಾರದಲ್ಲಿದ್ದಾಗಿನ ದರ್ಪ ನಿವೃತ್ತಿಯ ನಂತರವೂ ಮುಂದುವರಿದಿತ್ತು. ಅಪಾರ್ಟ್​ವೆುಂಟ್ ಒಂದರಲ್ಲಿ ಸುಸಜ್ಜಿತ ಮನೆ ಕೊಂಡು ನೆಲೆ ನಿಂತ. ಪಾರ್ಕ್​ನಲ್ಲಿ ವಾಕಿಂಗ್ ಹೋಗುವಾಗಲೂ ಎಲ್ಲರೊಂದಿಗೆ ಅಂತರ ಕಾಯುತ್ತಿದ್ದ. ಅದೊಮ್ಮೆ ರ್ಪಾನ ಬೆಂಚೊಂದರಲ್ಲಿ ಕುಳಿತಾಗ ಒಬ್ಬ ವಯೋವೃದ್ಧರು ಬಂದು ಮಾತಿಗೆಳೆದರು. ಈತ ಬಿಗುಮಾನವೇ ತೋರಿದ. ಅದಾಗ್ಯೂ ಅವರಿಬ್ಬರ ಭೇಟಿ ನಿತ್ಯ ನಡೆಯುತ್ತಿತ್ತು. ನಿತ್ಯವೂ ಆ ನಿವೃತ್ತಾಧಿಕಾರಿಯ ಬಾಯಲ್ಲಿ ಸ್ವಪ್ರಶಂಸೆಯೇ ಮಾತುಗಳೇ. ಆ ವಯೋವೃದ್ಧರು ಪ್ರತಿಕ್ರಿಯಿಸುತ್ತಿರಲಿಲ್ಲ.

ತಾನು ಎಲ್ಲೋ ಇರಬೇಕಾಗಿದ್ದ ವ್ಯಕ್ತಿ. ಇಲ್ಲಿ ಸಾಮಾನ್ಯ ವ್ಯಕ್ತಿಗಳೊಂದಿಗೆ ಇರಬೇಕಾದದ್ದು ತನ್ನ ದುಸ್ಥಿತಿ ಎಂದು ಮರುಗುತ್ತಿದ್ದ. ಇದುವರೆಗೂ ಮಾತಾಡದ ಆ ವ್ಯಕ್ತಿ ಇಂದು ಮಾತಾಡಿದ. ‘ನೋಡಿ, ನಾವೆಷ್ಟೇ ಆಗ ದೊಡ್ಡವರಾಗಿದ್ದರೂ ಈಗ ನಾವು ಫ್ಯೂಸ್ ಹೋದ ಬಲ್ಬ್ಗಳಂತೆ! ಆಗ ನಮ್ಮ ಬೆಳಕು ನೂರು ವ್ಯಾಟ್ ಇತ್ತೆಂದರೂ ಪ್ರಯೋಜನವಿಲ್ಲ. ನಾನು ಹಿಂದೊಮ್ಮೆ ಎರಡು ಅವಧಿಯ ಲೋಕಸಭಾ ಸದಸ್ಯನಾಗಿದ್ದೆ. ಅದನ್ನು ನಾನು ಈಗ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅಲ್ಲಿ ನೋಡಿ, ಅವರು ಮೆಹ್ತಾಜೀ ಅವರು ಇಸ್ರೋ ಅಧ್ಯಕ್ಷರಾಗಿದ್ದವರು. ಅಲ್ಲಿ ನಡೆದುಕೊಂಡು ಬರುತ್ತಿರುವ ವರ್ವ ಅವರು ಭಾರತೀಯ ರೈಲ್ವೆ ನಿವೃತ್ತ ಜನರಲ್ ಮ್ಯಾನೇಜರ್. ಆ ಕಲ್ಲಿನ ಬೆಂಚಿನ ಮೇಲೆ ಕುಳಿತಿರುವ ಸರ್ದಾರ್​ಜೀ ಒಂದು ಕಾಲದಲ್ಲಿ ನಮ್ಮ ಸೈನ್ಯದ ಮೇಜರ್ ಜನರಲ್. ಈಗ ಅವರೂ ಫ್ಯೂಸ್ ಹೋದ ಬಲ್ಬ್ಗಳೇ. ಹಿಂದೆ 100 ವ್ಯಾಟ್ ಆಗಿದ್ದ ಕತೆ ಈಗ ಹೇಳಿಕೊಂಡರೆ ಪ್ರಯೋಜನವಿಲ್ಲ. ಇದು ನಿಮಗೂ ಅನ್ವಯವಾಗುತ್ತದೆ. ಚದುರಂಗದಾಟ ಮುಗಿದ ನಂತರ, ರಾಜ, ಮಂತ್ರಿ ಸಹಿತ ಎಲ್ಲ ಕಾಯಿಗಳು ಒಂದೇ ಡಬ್ಬಿ ಸೇರುತ್ತವೆ. ಅಧಿಕಾರ ಇದ್ದಾಗ ನಾನು ಜನರ ಸೇವಕ ಎಂಬ ಭಾವವಿದ್ದರೆ ಅಧಿಕಾರ ಹೋದ ಮೇಲೆ ಆ ಘನ ವ್ಯಕ್ತಿತ್ವದ ಕಾರಣಕ್ಕೆ ಗೌರವ ಸಿಗುತ್ತದೆ. ನಮ್ಮ ಹುದ್ದೆ, ಬಿರುದು ಬಾವಲಿಗಳು ಯಾವುದೂ ಶಾಶ್ವತವಲ್ಲ’ ಎಂದಾಗ ಮಾಜಿ ಅಧಿಕಾರಿ ನಿರುತ್ತರನಾದ.

ಅನೇಕ ಅಧಿಕಾರಸ್ಥರದ್ದು ಹೊಸ ಬದುಕಿಗೆ ಹೊಂದಿಕೊಳ್ಳಲಾಗದ ಡೋಲಾಯಮಾನ ಸ್ಥಿತಿ. ವೃತ್ತಿಯ ಕಾಲದಲ್ಲಿ ಸರಳ ಸಜ್ಜನಿಕೆಯನ್ನು ರೂಢಿಸಿಕೊಂಡು ದುಡಿದರೆ ನಿವೃತ್ತಿ ಜೀವನ ಸುಖಕರ. ಹಾಗಾಗಿ ಡಿವಿಜಿ ಹೇಳುತ್ತಾರೆ- ‘ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು | ಹರುಷಕದೆ ದಾರಿಯೆಲೊ-ಮಂಕುತಿಮ್ಮ ಎಂದು. ಅಂದರೆ ಕೈಗೆ ಸಿಗುವುದಿಲ್ಲ ಎನ್ನುವುದನ್ನು ಬಿಟ್ಟು ಕೈಯಲ್ಲೇ ಇರುವ ಭಾಗ್ಯವನ್ನು ತೃಪ್ತಿಯಿಂದ ಅನುಭವಿಸು. ಇದೇ ಹರುಷದ ದಾರಿ ಎಂದು.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net