ಮುಖದ ಅಂದಗೆಡಿಸುವ ಮೊಡವೆಗಳಿಗೆ ಹೇಳಿ ಗುಡ್​ಬೈ: ಕಾಂತಿಯುತ ತ್ವಚೆಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್…

Acne Kiss
Published on

ಚೆನ್ನಾಗಿ ಕಾಣಬೇಕು ಅಂತ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ, ಹದಿಹರೆಯದವರನ್ನು ಹೆಚ್ಚಾಗಿ ಕಾಡುವ ಸಾಮಾನ್ಯ ಸಮಸ್ಯೆ ಅಂದರೆ ಅದು ಮೊಡವೆಗಳು. ಈ ಮೊಡವೆಗಳು ಕೆಲವರ ಆತ್ಮವಿಶ್ವಾಸವನ್ನೇ ಕಸಿದುಕೊಂಡು ಬಿಡುತ್ತದೆ. ಇನ್ನೊಬ್ಬರ ಮುಂದೆ ಮುಖ ತೋರಿಸಿ ಮಾತನಾಡಲು ಕೂಡ ಹಿಂಜರಿಯುವಂತೆ ಮಾಡುತ್ತದೆ. ಹೀಗಾಗಿ ಅನೇಕರು ಮೊಡವೆ ಬಗ್ಗೆ ಚಿಂತಿಸುತ್ತಾ ಬಹಳ ನೊಂದುಕೊಳ್ಳುತ್ತಾರೆ. ಆದರೆ, ಮೊಡವೆ ತುಂಬಾ ದೊಡ್ಡ ಸಮಸ್ಯೆಯೇನಲ್ಲ, ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ಸುಲಭವಾಗಿ ಅದನ್ನು ಹೋಗಲಾಡಿಸಬಹುದು. ಯಾವ ರೀತಿ ಹೋಗಲಾಡಿಸಬಹುದು ಎಂಬುದಕ್ಕೆ ಕೆಲವೊಂದು ಉಪಯುಕ್ತ ಸಲಹೆಗಳು ಇಲ್ಲಿವೆ.

ಪರಿಹಾರಕ್ಕಾಗಿ ಯಾವ್ಯಾವುದೋ ಕ್ರೀಂ, ಫೇಸ್​ ಪ್ಯಾಕ್​, ಜೆಲ್​ ಮುಂತಾದವುಗಳನ್ನು ಆರ್ಡರ್ ಮಾಡಿ, ಮುಖಕ್ಕೆ ಹಚ್ಚಿ ಫಜೀತಿಗೊಳಗಾದ ಅದೆಷ್ಟೋ ಉದಾಹರಣೆಗಳಿವೆ. ಆದರೆ, ಹಿತ್ತಿಲ ಗಿಡ ಮದ್ದಲ್ಲ ಅನ್ನೋ ಹಾಗೆ ಅನೇಕರಿಗೆ ತಮ್ಮ ಮನೆಯಲ್ಲಿ ಲಭ್ಯವಿರುವ ವಸ್ತುಗಳೇ ಉತ್ತಮ ಪರಿಹಾರ ಎಂಬ ಸಾಮಾನ್ಯ ಅರಿವು ಕೂಡ ಇರುವುದಿಲ್ಲ. ಮನೆಯಲ್ಲೇ ಲಭ್ಯವಿರುವ ಪದಾರ್ಥಗಳಿಂದ ಮೊಡವೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಅದರ ಕುರಿತು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಕಡಲೆ ಹಿಟ್ಟು

ಕಡಲೆ ಹಿಟ್ಟು ಮೊಡವೆಗಳಿಗೆ ಸೂಕ್ತವಾದ ಮನೆಮದ್ದು. ವಿಶೇಷವಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವ ಯಾರಿಗಾದರೂ, ಇದು ತುಂಬಾ ಉಪಕಾರಿ. ಜಿಡ್ಡನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖವನ್ನು ಚೆನ್ನಾಗಿ ತೊಳೆದ ಬಳಿಕ ಅಗತ್ಯವಿರುವಷ್ಟು ಕಡಲೆ ಹಿಟ್ಟನ್ನು ನೀರಿನೊಂದಿಗೆ ಕಲಸಿ, ನಂತರ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಇದು ಆಯಿಲ್ ಸ್ಕಿನ್​ ಇರುವವರಿಗೆ ತುಂಬಾ ಪ್ರಯೋಜನಕಾರಿ.

ನಿಂಬೆ ರಸ

ನಿಂಬೆ ರಸವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲ ಸಮೃದ್ಧವಾಗಿದ್ದು, ನಿಮ್ಮ ಚರ್ಮದ ಹೊಳಪಿಗೆ ಸಹಾಯ ಮಾಡುತ್ತದೆ. ಹತ್ತಿಯನ್ನು ಬಳಸಿ, ಮೊಡವೆ ಮೇಲೆ ನೇರವಾಗಿ ಹಚ್ಚಿ, 5 ರಿಂದ 10 ನಿಮಿಷಗಳ ನಂತರ ನೀರಿನಲ್ಲಿ ತೊಳೆಯಿರಿ.

ರೋಸ್ ವಾಟರ್

ರೋಸ್ ವಾಟರ್ ಮೊಡವೆ ಗಾತ್ರವನ್ನು ಕಡಿಮೆ ಮಾಡಲು ಸಹಕಾರಿ. ಸಾಧಾರಣವಾಗಿ ಮೊಡವೆಗಳು ಕೆಂಪು ಬಣ್ಣದಲ್ಲಿರುತ್ತದೆ. ರೋಸ್​ವಾಟರ್ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಶಾಂತಗೊಳಿಸುತ್ತದೆ. ಬೆಳಿಗ್ಗೆ ಮತ್ತು ರಾತ್ರಿ, ಟೋನರ್ ಬದಲಿಗೆ ರೋಸ್​ವಾಟರನ್ನು ನಿಮ್ಮ ಮುಖಕ್ಕೆ ಹಚ್ಚುವುದರ ಮೂಲಕ ಒಳ್ಳೆಯ ರಿಸಲ್ಟ್ ಪಡೆಯಬಹುದು.

ಪುದೀನಾ ರಸ ಮತ್ತು ಮೊಸರು

ತಾಜಾ ಪುದೀನಾ ರಸವನ್ನು ಪ್ರತಿದಿನ ರಾತ್ರಿ ಮುಖಕ್ಕೆ ಹಚ್ಚಿದರೆ ಚರ್ಮವು ಅತಿಯಾಗಿ ಒಣಗದೆ ಮೊಡವೆಗಳನ್ನು ಹೋಗಲಾಡಿಸುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಸಣ್ಣ ಬ್ರಷ್ ಅನ್ನು ಬಳಸಿ, 1⁄4 ಕಪ್ ಮೊಸರನ್ನು ನಿಮ್ಮ ಮುಖದ ಮೇಲೆ ಹಚ್ಚಿ. 10 ನಿಮಿಷಗಳ ಕಾಲ ಅಥವಾ ಒಣಗುವವರೆಗೆ ಬಿಡಿ. ನಂತರ ಮುಖವನ್ನು ತೊಳೆಯಿರಿ. ಇದಲ್ಲದೆ, ನಿಯಮಿತವಾಗಿ ಮೊಸರು ತಿನ್ನುವುದು ಕೂಡ ಆರೋಗ್ಯಕರ ಚರ್ಮವನ್ನು ಹೊಂದಲು ಕಾರಣವಾಗುತ್ತದೆ.

ಅಲೋವೆರಾ

ಅಲೋವೆರಾವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಮೊಡವೆಯ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಪ್ರತಿದಿನ ಹಚ್ಚಿದರೆ ಮೊಡವೆಗಳಿಂದ ಉಂಟಾದ ಯಾವುದೇ ಕಲೆಗಳನ್ನು ಮಾಯ ಮಾಡಲು ಇದು ಸಹಾಯಕವಾಗಿದೆ.

ಪಪ್ಪಾಯಿ

ಪಪ್ಪಾಯಿ ಹಣ್ಣು ಮೊಡವೆಗಳನ್ನು ತೊಡೆದುಹಾಕಲು ಉಪಕಾರಿ. ಮೊಡವೆಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ಅನೇಕ ಗುಣಗಳನ್ನು ಪಪ್ಪಾಯಿ ಹೊಂದಿದೆ. ಇದು ಆ್ಯಂಟಿ-ಆಕ್ಸಿಡೆಂಟ್‌ಗಳು, ವಿಟಮಿನ್ ಎ ಮತ್ತು ಸಿ ಅನ್ನು ಹೊಂದಿರುತ್ತದೆ, ಇದು ಮೊಡವೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಪಪ್ಪಾಯಿಯನ್ನು ಸ್ಮಾಶ್ ಮಾಡಿ ಮುಖಕ್ಕೆ ಹಚ್ಚಿ ಮತ್ತು 10 ನಿಮಿಷಗಳ ನಂತರ ತೊಳೆಯಿರಿ. ಇದು ತ್ವಚೆಯ ಹೊಳಪಿಗೆ ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net