ಮುಖದಲ್ಲಿನ ಈ ಬದಲಾವಣೆ ಅಪಾಯದ ಮುನ್ಸೂಚನೆ; ನಿರ್ಲಕ್ಷಿಸುವುದು ಬೇಡ.. ಎಚ್ಚರವಹಿಸಿ

Untitled-design-7
Published on

ಅದೆಷ್ಟೋ ಮಂದಿ ತಮಗೆ ಗೊತ್ತಿಲ್ಲದೆಯೇ ಗಂಭೀರ ಕಾಯಿಲೆಗಳಿಗೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ರೋಗಗಳನ್ನು ತಡೆಗಟ್ಟಲು ಮತ್ತು ಕಾಯಿಲೆಗಳಿಂದ ದೂರ ಇರಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಸರಿಯಾದ ಸಮಯಕ್ಕೆ ತಿನ್ನುವುದು, ವ್ಯಾಯಾಮ ಮಾಡುವುದು, ಸಿಗರೇಟ್, ಮದ್ಯಪಾನದಂತಹ ವ್ಯಸನಗಳಿಂದ ದೂರವಿರುವುದರಿಂದ ನಮ್ಮನ್ನು ನಾವು ಫಿಟ್ ಆಗಿ ಇಟ್ಟುಕೊಳ್ಳಬಹುದು.

ಇತ್ತೀಚೆಗೆ ಅತಿ ಹೆಚ್ಚು ಕಾಡುತ್ತಿರುವುದು ಕೊಲೆಸ್ಟ್ರಾಲ್ ಸಮಸ್ಯೆಯಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. ಇದು ಮಾತ್ರವಲ್ಲದೆ ಹೃದಯಾಘಾತ ಮತ್ತು ಬ್ರೈನ್​​ಸ್ಟ್ರೋಕ್ ಅಪಾಯ ಸಹ ಹೆಚ್ಚಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಹಾಗಾದರೆ ಅದನ್ನು ಪತ್ತೆ ಹಚ್ಚುವುದು ಹೇಗೆ..? ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಆಗುವ ಬದಲಾವಣೆ:

  • ಕಣ್ಣಿನ ಸುತ್ತ ಹಳದಿ ಕಲೆಗಳು: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಕಣ್ಣುಗಳ ಸುತ್ತ ತಿಳಿ ಹಳದಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನ ರೆಪ್ಪೆಗಳ ಮೇಲೆ ತಿಳಿ ಹಳದಿ ಬಣ್ಣ ಗೋಚರಿಸುತ್ತವೆ. ಕೆನ್ನೆ ಮತ್ತು ಹಣೆಯ ಮೇಲೆ ಹಳದಿ ದದ್ದುಗಳು ರೂಪುಗೊಳ್ಳುತ್ತವೆ. ಈ ರೋಗಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
  • ಒಣ ಚರ್ಮ ಮತ್ತು ತುರಿಕೆ: ಮುಖದ ಚರ್ಮವು ಡ್ರೈ ಎಂದು ಎನಿಸುತ್ತದ್ದರೆ ಅಥವಾ ಮುಖದಲ್ಲಿ ತುರಿಕೆ ಆಗುತ್ತಿದ್ದರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎಂದು ಅರ್ಥಮಾಡಿಕೊಳ್ಳಿ.
  • ತೋಳುಗಳು ಮತ್ತು ಕಾಲುಗಳಲ್ಲಿ  ನೋವು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕೈ-ಕಾಲುಗಳಲ್ಲಿ ವಿಪರೀತ ನೋವು ಕಂಡುಬರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅಪಧಮನಿಗಳು ಕಿರಿದಾಗಲು ಪ್ರಾರಂಭಿಸುತ್ತವೆ. ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಕೈ-ಕಾಲುಗಳಲ್ಲಿ ವಿಪರೀತ ನೋವಿಗೆ ಕಾರಣವಾಗಬಹುದು.
  • ವಿಪರೀತ ಬೆವರುವುದು: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಳದಂತೆಲ್ಲಾ ಅದು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುವುದರಿಂದ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಹೃದಯ ಮತ್ತು ದೇಹದ ಉಷ್ಣತೆಯ ಮೇಲೆ ಒತ್ತಡವನ್ನು ಕಡಿಮೆ ಮಾಡಲು ನಾವು ಹೆಚ್ಚು ಬೆವರುತ್ತೇವೆ. ಯಾವುದೇ ಕಾರಣವಿಲ್ಲದೆ ನೀವು ಅತಿಯಾಗಿ ಬೆವರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
  • ಎದೆ ನೋವು ಮತ್ತು ಉಸಿರಾಟದ ತೊಂದರೆ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಡ್ರಾಲ್ ಸಂಗ್ರಹವಾಗುವುದರಿಂದ ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ. ಇದರಿಂದಾಗಿ ಎದೆನೋವು ಕಾಣಿಸಿಕೊಳ್ಳಬಹುದು. ಅಪಧಮನಿಗಳು ಮುಚ್ಚಲ್ಪಟ್ಟರೆ ಹೃದಯಾಘಾತವೂ ಸಂಭವಿಸಬಹುದು. ಇದು ಮೆದುಳಿನ ಮೇಲೆಯೂ ಪರಿಣಾಮ ಬೀರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ನಿಯಂತ್ರಿಸುವುದು ಹೇಗೆ..? ಕೊಲೆಸ್ಟ್ರಾಲ್ ನಿಯಂತ್ರಿಸಲು ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮೊದಲ ಮಾರ್ಗವಾಗಿದೆ. ಆಹಾರದಲ್ಲಿನ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವುದು ಮತ್ತು ಕರಿದ ಆಹಾರಗಳಿಂದ ದೂರ ಇರುವುದು ಒಳ್ಳೆಯದು. ನೀವು ಸೇವಿಸುವ ಆಹಾರದಲ್ಲಿ ಕರಗುವ ಫೈಬರ್ ಪ್ರಮಾಣವನ್ನು ಹೆಚ್ಚಿಸಿ. ಪ್ರತಿದಿನ ವ್ಯಾಯಾಮ ಮಾಡಿ ಮತ್ತು ನಿಮ್ಮ ತೂಕ ಹೆಚ್ಚಾಗಲು ಯಾವುದೇ ಕಾರಣಕ್ಕೂ ಬಿಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net