

ಬೆಂಗಳೂರು: ಮನುಷ್ಯನ ತಲೆಯಲ್ಲಿ ಕೂದಲು ಇರಲಿ-ಇಲ್ಲದಿರಲಿ ಆ ಕುರಿತ ಒಂದು ಯೋಚನೆ ತಲೆಯೊಳಗೆ ಇದ್ದೇ ಇರುತ್ತದೆ. ಏಕೆಂದರೆ ಕೇಶ ಇದ್ದವರಿಗೆ ಕೂದಲು ಉದುರೀತು ಎಂಬ ಆತಂಕ, ಕೇಶವಿಲ್ಲದವರಿಗೆ ಕೂದಲು ಉದುರಿತಲ್ಲ ಎಂಬ ಚಿಂತೆ. ಆದರೆ ಕೇಶದ ಕುರಿತ ಕ್ಲೇಶ ಕಡಿಮೆ ಮಾಡಿಕೊಳ್ಳಲು ಸುಲಭದ ಉಪಾಯ ಇಲ್ಲಿದೆ. ಉತ್ತಮ ಕೇಶರಾಶಿಗಾಗಿ ಈ ಐದು ವಿಟಮಿನ್ಗಳನ್ನು ಸೇವಿಸಿದರೆ ಒಳಿತು ಎಂದು ಹೇಳಲಾಗುತ್ತಿದೆ.
ದೇಹಕ್ಕೆ ಬೇಕಾದ ಆಹಾರಾಂಶಗಳನ್ನು ಸರಿಯಾಗಿ ಒದಗಿಸಿದರೆ ಕೇಶದ ಬೆಳವಣಿಗೆ ಆರೋಗ್ಯಕ್ಕೂ ಒಳ್ಳೆಯದು. ಅಂದರೆ ಪರಿಣತರ ಪ್ರಕಾರ ಕೇಶಾರೋಗ್ಯಕ್ಕೆ ವಿಟಮಿನ್ ಅತ್ಯಗತ್ಯ. ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಸೂಕ್ತಪ್ರಮಾಣದ ವಿಟಮಿನ್ ಇರುವಂತೆ ನೋಡಿಕೊಂಡರೆ ಕೇಶದ ಬೆಳವಣಿಗೆ ಹಾಗೂ ಆರೋಗ್ಯ ಎರಡೂ ಚೆನ್ನಾಗಿರುತ್ತದೆ ಎಂಬುದು ಪರಿಣತರ ಅಭಿಪ್ರಾಯ.
ವಿಟಮಿನ್ಗಳ ವಿವರ ಇಂತಿದೆ..
ವಿಟಮಿನ್ ಎ ಎಪಿಥೀಲಿಯಲ್ ಟಿಶ್ಯೂಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ತ್ವಚೆಯ ಗ್ರಂಥಿಗಳಲ್ಲಿ ಸೀಬಮ್ ಆಯಿಲ್ ಉತ್ಪಾದನೆಯನ್ನೂ ಈ ವಿಟಮಿನ್ ಉತ್ತೇಜಿಸುತ್ತದೆ. ಈ ಸೀಬಮ್ ನೆತ್ತಿಯ ತೇವಾಂಶ ಕಾಪಾಡಿ ಆರೋಗ್ಯವಾಗಿರಿಸಿ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ. ಆದರೆ ಅತಿಯಾದ ವಿಟಮಿನ್ ಎ ಸೇವನೆ ಕೇಶಕ್ಕೆ ಸಂಬಂಧಿತ ಅಲೊಪೀಸಿಯಾ ಎಂಬ ಸಮಸ್ಯೆಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ದಿನಕ್ಕೆಷ್ಟು ಒಳಿತು?: ದಿನವೊಂದಕ್ಕೆ ಪುರುಷರು 0.9 ಮಿಲಿಗ್ರಾಂ ಮತ್ತು ಮಹಿಳೆಯರು 0.7 ಮಿಲಿಗ್ರಾಂ ವಿಟಮಿನ್ ಎ ಪಡೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ.
ಯಾವ ಆಹಾರ ಒಳ್ಳೆಯದು?: ವಿಟಮಿನ್ ಎ ಸಲುವಾಗಿ ಹಾಲು ಹಾಗೂ ಲಸ್ಸಿ, ಪನೀರ್ ಉತ್ತಮ. ಒಂದು ಕಪ್ ಹಾಲು 112 ಎಂಸಿಜಿ ವಿಟಮಿನ್ ಎ ಒದಗಿಸಬಲ್ಲದು ಎಂದು ಯುಎಸ್ಡಿಎ ಡೇಟಾ ತಿಳಿಸಿದೆ.
ಬಯೊಟಿನ್ ಅಥವಾ ವಿಟಮಿನ್ ಬಿ7 ಎಂದೂ ಕರೆಯಲಾಗುವ ವಿಟಮಿನ್ ಬಿ ದೇಹದೊಳಗಿನ ಜೀವಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ವಿಟಮಿನ್ ಕೊರತೆ ಕೂದಲು ಉದುರುವಿಕೆ ಜೊತೆಗೆ ಕೇಶ-ತ್ವಚೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಬಿ ಪ್ರೊಟೀನ್ ಉತ್ಪಾದನೆಯನ್ನು ವೃದ್ಧಿಸಿ, ಕೆರಾಟಿನ್ ಉತ್ಪಾದನೆಯನ್ನೂ ಉತ್ತೇಜಿಸಿ ಆ ಮೂಲಕ ಕೂದಲಿನ ಬೇರುಗಳನ್ನು ಬಲಗೊಳಿಸುತ್ತದೆ ಎನ್ನಲಾಗಿದೆ.
ದಿನಕ್ಕೆಷ್ಟು ಸೂಕ್ತ?: ಹದಿಹರೆಯದವರು ಹಾಗೂ ವಯಸ್ಕರು ದಿನಕ್ಕೆ 30ರಿಂದ 100 ಮೈಕ್ರೋಗ್ರಾಮ್ಸ್(ಎಂಸಿಜಿ) ಮತ್ತು ಮಕ್ಕಳು 25 ಎಂಸಿಜಿ ವಿಟಮಿನ್ ಬಿ ತೆಗೆದುಕೊಳ್ಳಬಹುದು.
ಯಾವ ಆಹಾರ ಒಳಿತು?: ಬಾಳೆಹಣ್ಣಿನಲ್ಲಿ ವಿಟಮಿನ್ ಬಿ ಹೇರಳವಾಗಿದೆ. ಒಂದು ಚಿಕ್ಕ ಬಾಳೆಹಣ್ಣಿನಲ್ಲಿ 0.2 ಎಂಸಿಜಿ ಬಯೊಟಿನ್ ಲಭ್ಯ. ಬಾಳೆಹಣ್ಣನ್ನು ಹಾಗೇ ಅಥವಾ ರಸಾಯನ ಮಾಡಿಕೊಂಡು ಸೇವಿಸಬಹುದು.
ಅಸ್ಕಾರ್ಬಿಕ್ ಆ್ಯಸಿಡ್ (ವಿಟಮಿನ್ ಸಿ) ಆ್ಯಂಟಿ ಆಕ್ಸಿಡೆಂಟ್ ಥರ ಕೆಲಸ ಮಾಡುತ್ತಿದ್ದು, ಅದು ಟಾಕ್ಸಿನ್ ಅಂಶಗಳನ್ನು ಹೊರಹಾಕಿ ರಕ್ತ ಹಾಗೂ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಆ ಮೂಲಕ ಕೊಲಾಜೆನ್ ಉತ್ಪಾದನೆಗೂ ಕಾರಣವಾಗುತ್ತದೆ. ಇದು ಕೇಶರಚನೆಗೆ ಬಹುಮುಖ್ಯ ಅಂಶ, ಮಾತ್ರವಲ್ಲ ಇದು ನೆತ್ತಿಗೆ ರಕ್ತ ಸಂಚಾರವನ್ನೂ ಸರಾಗಗೊಳಿಸುತ್ತದೆ.
ಎಷ್ಟು ಬೇಕು?: ಮಹಿಳೆಯರು ದಿನಕ್ಕೆ 75 ಮಿಲಿಗ್ರಾಂ ಹಾಗೂ ಪುರುಷರು ದಿನಕ್ಕೆ 19 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳಬಹುದು.
ವಿಟಮಿನ್ ಸಿ ಹೇರಳ ಇರುವ ಆಹಾರ: ಒಂದು ಲಿಂಬೆಹಣ್ಣಿನಿಂದ 31 ಮಿಲಿಗ್ರಾಂ ವಿಟಮಿನ್ ಸಿ ಲಭ್ಯವಿದ್ದು, ಈ ಮೂಲಕ ದೇಹಕ್ಕೆ ಅಗತ್ಯವಿರುವ ಅರ್ಧದಷ್ಟು ವಿಟಮಿನ್ ಸಿ ಸಿಕ್ಕಂತಾಗುತ್ತದೆ. ಒಂದು ಗ್ಲಾಸ್ ಶರಬತ್ನೊಂದಿಗೆ ದಿನವನ್ನು ಆರಂಭಿಸುವುದರಿಂದ ವಿಟಮಿನ್ ಸಿ ಪಡೆಯಬಹುದು.
ಹೊಸ ಹಾಗೂ ಹಳೆಯ ಹೇರ್ ಫಾಲಿಕಲ್ಸ್ಗಳ ಉತ್ತೇಜನದಲ್ಲಿ ವಿಟಮಿನ್ ಡಿ ಪಾತ್ರ ಪ್ರಮುಖವಾದುದು. ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರದಿದ್ದರೆ ಹೊಸ ಕೇಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ವಿಟಮಿನ್ ಡಿ ಕೊರತೆ ಕೂದಲು ಉದುರುವಿಕೆಗೂ ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳಿವೆ.
ಯಾವ ಪ್ರಮಾಣದಲ್ಲಿ ಸೂಕ್ತ?: ಪುರುಷರು ಹಾಗೂ ಮಹಿಳೆಯರು ಒಂದು ದಿನಕ್ಕೆ 0.025 ಎಂಸಿಜಿ ವಿಟಮಿನ್ ಡಿ ತೆಗೆದುಕೊಳ್ಳುವುದು ಸೂಕ್ತ.
ಎಲ್ಲಿಂದ ಪಡೆಯಬಹುದು?: ವಿಟಮಿನ್ ಡಿ ಪ್ರಮುಖವಾಗಿ ಸೂರ್ಯನಿಂದ ಸಿಗುವಂಥದ್ದು. ದಿನಕ್ಕೆ ಒಂದಷ್ಟು ಸಮಯ ಸೂರ್ಯನ ಕಿರಣಗಳಿಗೆ ನೇರವಾಗಿ ಮೈಯೊಡ್ಡುವುದರಿಂದ ವಿಟಮಿನ್ ಡಿ ಪಡೆಯಬಹುದು.
ಇದು ಆ್ಯಂಟಿ ಆಕ್ಸಿಡೆಂಟ್ಸ್ ಹೊಂದಿದ್ದು, ರಕ್ತ ಹಾಗೂ ಆಮ್ಲಜನಕ ಸಂಚಾರವನ್ನು ವೃದ್ಧಿಸುವ ಮೂಲಕ ಕೇಶದ ಬೆಳವಣಿಗೆಗೆ ಸಹಕರಿಸುತ್ತದೆ. ವಿಟಮಿನ್ ಇನಲ್ಲಿ ಕಂಡು ಬರುವ ಟೊಕೊಫೆರಾಲ್ ಎಂಬ ರಾಸಾಯನಿಕದ ಕೊರತೆ ಕೇಶ ಉದುರಿದ ಹಲವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ನಂತರ ಸುಮಾರು ಎಂಟು ತಿಂಗಳಮಟ್ಟಿಗೆ ಈ ರಾಸಾಯನಿಕದ ಪೂರೈಕೆಯಿಂದ ಕೂದಲು ಬೆಳವಣಿಗೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ದಿನಕ್ಕೆಷ್ಟು ಬೇಕು?: ದಿನವೊಂದಕ್ಕೆ ಪುರುಷರು ಮತ್ತು ಮಹಿಳೆಯರು 10 ಮಿಲಿಗ್ರಾಂ ವಿಟಮಿನ್ ಇ ತೆಗೆದುಕೊಂಡರೆ ಸಾಕು.
ಯಾವ ಆಹಾರ ಒಳ್ಳೆಯದು?: ವಿಟಮಿನ್ ಈ ಬಾದಾಮಿಯಲ್ಲಿ ಹೇರಳವಾಗಿದೆ. ಒಂದು ಮುಷ್ಟಿಯಷ್ಟು ಬಾದಾಮಿಯಲ್ಲಿ 7.7 ಮಿಲಿಗ್ರಾಂ ವಿಟಮಿನ್ ಇ ಸಿಗಬಲ್ಲದು. ಇದರಿಂದ ದೈನಂದಿನ ಅಗತ್ಯದ ಮುಕ್ಕಾಲು ಭಾಗ ಸಿಕ್ಕಂತಾಗುತ್ತದೆ. ದಿನದ ಆಹಾರದಲ್ಲಿ ಬಾದಾಮಿಯನ್ನು ಬಳಸುವುದರಿಂದ ವಿಟಮಿನ್ ಇ ಸುಲಭದಲ್ಲಿ ಪಡೆಯಬಹುದು.
ಇವೆಲ್ಲವೂ ಕೆಲವು ಅಧ್ಯಯನಗಳಿಂದ ಕಂಡುಬಂದಿರುವ ಅಂಶಗಳಾಗಿದ್ದು, ಇದರ ಫಲಿತಾಂಶ ಎಲ್ಲರ ಮೇಲೂ ಒಂದೇ ಸಮನಾಗಿ ಇರುವುದಿಲ್ಲ ಹಾಗೂ ಕೆಲವರಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಪರಿಣತರ ಸಲಹೆ ಪಡೆದೇ ಇವುಗಳನ್ನು ಪಾಲಿಸುವುದು ಸೂಕ್ತ.