ಬುದ್ಧಿಗೆ ಸಾಣೆ ಹಿಡಿಯಬೇಕು

Work Pressure
Published on
jayashree
ಜಯಶ್ರೀ ಜೆ. ಅಬ್ಬಿಗೇರಿ
ಮಾರ ಎಂಬ ಮರಗೆಲಸದವನಿದ್ದ. ಅವನು ಒಂದೇ ಸಂಸ್ಥೆಯಲ್ಲಿ ಐದು ವರ್ಷಗಳಿಂದ ದುಡಿಯುತ್ತಿದ್ದ. ಆದರೆ ಆತನಿಗೆ ಬಡ್ತಿ ಸಿಕ್ಕಿರಲಿಲ್ಲ. ಈ ನಡುವೆ ಬೈರ ಎಂಬ ಕೆಲಸಗಾರ ಅದೇ ಸಂಸ್ಥೆಗೆ ಸೇರಿಕೊಂಡ. ಆತನಿಗೆ ಒಂದೇ ವರ್ಷದಲ್ಲಿ ಬಡ್ತಿ ನೀಡಲಾಯಿತು. ಇದರಿಂದ ಬೇಸರಗೊಂಡ ಮಾರ, ಮಾಲೀಕನನ್ನು ಭೇಟಿಯಾಗಿ, ‘ಕೇವಲ ಒಂದು ವರ್ಷ ದುಡಿದ ಬೈರನಿಗೆ ಬಡ್ತಿ ನೀಡಿದ್ದು ಸರಿಯೇ?’ ಎಂದು ಕೇಳಿದ. ಅದಕ್ಕೆ ಮಾಲೀಕನೆಂದ, ‘ಐದು ವರ್ಷಗಳಲ್ಲಿ ನಿನ್ನ ಕೆಲಸದಲ್ಲಿ ಪ್ರಗತಿಯಿಲ್ಲ. ಸೇರಿದಾಗ ಎಷ್ಟು ಮರಗಳನ್ನು ಕತ್ತರಿಸುತ್ತಿದ್ದೆಯೋ ಈಗಲೂ ಅಷ್ಟೇ ಮರಗಳನ್ನು ಕತ್ತರಿಸುತ್ತಿರುವೆ. ಬೈರ ನಿನಗಿಂತ ಹೆಚ್ಚು ಮರ ಕತ್ತರಿಸಿದ್ದಾನೆ. ಸಂಸ್ಥೆಯ ಉತ್ಪಾದನೆ ಹೆಚ್ಚಿಸಲು ನೆರವಾಗಿದ್ದಾನೆ. ನಮಗೆ ಬೈರನಂತಹ ಕೆಲಸಗಾರರು ಬೇಕು. ಉತ್ಪಾದನಾ ಕ್ಷಮತೆ ಹೆಚ್ಚಿಸಿಕೊಂಡರೆ ನಿನಗೂ ಬಡ್ತಿ ನೀಡಲಾಗುವುದು’.

ಮಾರನಿಗೆ ಮಾಲೀಕ ಹೇಳಿದ್ದು ಸರಿಯೆನಿಸಿತು. ಅವನು ಮೊದಲಿಗಿಂತ ಹೆಚ್ಚು ಸಮಯ ದುಡಿಯತೊಡಗಿದ. ಆದರೆ ಅವನಿಗೆ ಬೈರನಂತೆ ಹೆಚ್ಚು ಮರಗಳನ್ನು ಕತ್ತರಿಸಲು ಸಾಧ್ಯವಾಗಲಿಲ್ಲ. ಮಾರ ಮತ್ತೆ ಮಾಲೀಕನ ಮುಂದೆ ಗೋಳು ತೋಡಿಕೊಂಡ. ಅದಕ್ಕೆ, ಮಾಲೀಕ, ‘ಬೈರ ಹೇಗೆ ಹೆಚ್ಚು ಮರಗಳನ್ನು ಕತ್ತರಿಸುತ್ತಾನೆ ಎಂದು ಆತನನ್ನೇ ಕೇಳಿ ತಿಳಿದುಕೊ’ ಎಂದ. ಮಾರ ನೇರವಾಗಿ ಬೈರನ ಹತ್ತಿರ ಹೋಗಿ, ‘ನೀನು ಸ್ವಲ್ಪ ಸಮಯದಲ್ಲಿ ಹೆಚ್ಚು ಮರ ಕತ್ತರಿಸುವೆ. ಇದರ ಹಿಂದಿನ ಗುಟ್ಟೇನು?’ ಎಂದು ಕೇಳಿದ. ಅದಕ್ಕೆ ಬೈರ, ‘ಪ್ರತಿ ಮರವನ್ನು ಕತ್ತರಿಸಿದ ಬಳಿಕ ನಾನು ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಂತರ ನನ್ನ ಕೊಡಲಿಯನ್ನು ಚೆನ್ನಾಗಿ ಹರಿತಗೊಳಿಸುತ್ತೇನೆ. ಅಂದ ಹಾಗೆ ನೀನು ನಿನ್ನ ಕೊಡಲಿಯನ್ನು ಹರಿತಗೊಳಿಸಿದ್ದು ಯಾವಾಗ?’ ಎಂದು ಮಾರನನ್ನು ಪ್ರಶ್ನಿಸಿದ. ಆಗ ಮಾರನಿಗೆ ಮೊಂಡಾದ ಕೊಡಲಿಯನ್ನು ಹರಿತ

ಗೊಳಿಸಬೇಕೆಂಬುದು ತಿಳಿಯಿತು.

ಮಾರನಂತೆ ನಾವೂ ಹರಿತಗೊಳಿಸದ ಕೊಡಲಿಯನ್ನು ಬಳಸುತ್ತಿದ್ದೇವೆಂದು ಅನಿಸುವುದಿಲ್ಲವೇ? ಬೆಂಜಮಿನ್ ಫ್ರಾಂಕ್ಲಿನ್ ಮಾತಿನಂತೆ, ‘ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದನ್ನು ಕಲಿಯಲು ಇಷ್ಟವಿಲ್ಲದಿರುವುದಕ್ಕಿಂತ ಅಜ್ಞಾನಿಯಾಗಿರುವುದು ಅಷ್ಟೊಂದು ನಾಚಿಕೆಯ ಸಂಗತಿಯಲ್ಲ’. ನಮಗೆಲ್ಲ ಹೆಚ್ಚು ವೇತನ ಬೇಕು, ಆದರೆ ಬುದ್ಧಿಗೆ ಸಾಣೆ ಹಿಡಿಯುವುದು ಬೇಡ. ಇದಕ್ಕೆ ಪುಷ್ಟಿ ನೀಡುವಂತೆ ವಿನ್ಸ್ ಲೋಂಬಾರ್ಡಿ ಹೀಗೆ ಹೇಳಿದ್ದಾರೆ, ‘ಪ್ರತಿಯೊಬ್ಬರೂ ಗೆಲ್ಲಲು ಬಯಸುತ್ತಾರೆ.

ಆದರೆ ಕೆಲವರು ಮಾತ್ರ ಗೆಲ್ಲಲು ಸಿದ್ಧತೆ ಮಾಡುವ ಇಚ್ಛೆ ತೋರುತ್ತಾರೆ. ಹೀಗಾಗಿ ನಾವೆಲ್ಲ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ’. ‘ನಾನು ನನ್ನ ಜೀವಿತದ ಅವಧಿಯಲ್ಲಿ ಕೇವಲ ಶೇಕಡ 25ರಷ್ಟು ಬೌದ್ಧಿಕ ಸಾಮರ್ಥ್ಯ ಬಳಸಿರಬಹುದು’ ಎಂದಿದ್ದರು ವಿಜ್ಞಾನಿ ಅಲ್ಬರ್ಟ್ ಐನ್​ಸ್ಟೀನ್. ಇದರರ್ಥ ನಮ್ಮಲ್ಲಿರುವ ಅಗಾಧವಾದ ಚೈತನ್ಯ, ಸೃಜನಶೀಲತೆ ಉಪಯೋಗಿಸದೆಯೇ ವ್ಯರ್ಥವಾಗುತ್ತಿದೆ. ಸವೆದು ಸಾಯುವುದಕ್ಕಿಂತ ಬುದ್ಧಿಗೆ ಸಾಣೆ ಹಿಡಿಯುವುದು ಮೇಲಲ್ಲವೇ?

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net