

ಮುಂದೊಂದು ದಿನ ಅದೇ ಆಶ್ರಮದಲ್ಲಿ ಕಲಿತು ಹೊರಹೋದ ಇಬ್ಬರು ಯುವಕರು ಬ್ಯಾಂಕ್ ದರೋಡೆ ಮಾಡಿ ಸಿಕ್ಕಿ ಬಿದ್ದು, ಆಶ್ರಮದ ಹೆಸರು ಕೆಡಿಸಿದರು. ಆಗ ಆಶ್ರಮದ ರೂವಾರಿಗಳು ಅಯ್ಯೋ.. ತಮ್ಮ ಮತ್ತು ಆಶ್ರಮದ ಹೆಸರು ಮಣ್ಣು ಪಾಲಾಯಿತೆಂದು ತುಂಬಾ ನೊಂದುಕೊಂಡು ಆಶ್ರಮವನ್ನು ಮುಚ್ಚಲು ನಿರ್ಧರಿಸಿದರು. ಇದನ್ನೆಲ್ಲ ಗಮನಿಸಿದ ಆ ಊರಿನ ಶ್ರೇಷ್ಠ ಸಂತರೊಬ್ಬರು ಅವರನ್ನು ಕರೆದು, ‘ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಆದರೆ, ನೀವು ಇಂದು ಜೀವನದ ಬಹುದೊಡ್ಡ ಪಾಠ ಕಲಿತಿರುವಿರಿ. ನಿಮ್ಮ ಪ್ರಿಯ ಶಿಷ್ಯಂದಿರ ಮಹತ್ಕಾರ್ಯದಿಂದ ನಿಮ್ಮ ಮನಸ್ಸು ನಲಿವಿನ ಮನೆ ಹೊಕ್ಕಿತು. ಅದೇ ನಿಮ್ಮದೇ ಇನ್ನೀರ್ವ ಶಿಷ್ಯರು ತಮ್ಮ ದುಷ್ಕೃತ್ಯಗಳಿಂದ ಕುಖ್ಯಾತಿ ಪಡೆದಾಗ ಮನಸ್ಸು ಅತೀವ ಖೇದಗೊಂಡಿತು.
ಇದರರ್ಥ ನಮ್ಮ ನೋವು-ನಲಿವಿಗೆ ನಾವು ಅಥವಾ ನಮ್ಮ ಮನಸ್ಸಿಗೆ ಅತೀ ಹತ್ತಿರದವರೇ ಕಾರಣ ಆಗಿರುತ್ತಾರೆ. ಆದಕಾರಣ ನಮ್ಮವರಿಂದ ನಮಗಾದ ಸುಖ ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನೆಡೆಯುವುದು ಸರಿಯಾದ ಮಾರ್ಗವೇ ಹೊರತು ಪಯಣ ನಿಲ್ಲಿಸುವುದಲ್ಲ’ ಎಂದು ಕಿವಿಮಾತು ಹೇಳಿದರು. ಈ ಹಿರಿಯರ ಮಾತು ಎಷ್ಟು ನಿಜ ಅಲ್ಲವೇ? ನಮ್ಮ ಜೀವಿತಾವಧಿಯಲ್ಲಿ ನೋವು ನಲಿವುಗಳೆರಡೂ ಇದ್ದೇ ಇರುತ್ತವೆ. ವಿಶೇಷವೆಂದರೆ ನಲಿವಿನ ಹೊನಲಿಗೆ ಹೇಗೆ ನಮ್ಮ ಮನಸ್ಸಿಗೆ ಹತ್ತಿರವಾದ ಸಂಗತಿಗೆ ವ್ಯಕ್ತಿ ಅಥವಾ ವಿಷಯಗಳು ಕಾರಣವಾಗುವವೋ ಹಾಗೆ ನೋವಿನ ಕೂಪ ಸೇರಲೂ ಅವೇ ಕಾರಣ ಆಗುತ್ತದೆ. ಹರುಷ ಮತ್ತು ಸಂಕಟಗಳ ಗಾಢವಾದ ಅನುಭವವಾಗುವುದು ನಮಗೆ ಅತೀ ಹತ್ತಿರವಾದುದರಿಂದ ಮಾತ್ರ. ಸಮಚಿತ್ತ ಮಾತ್ರ ಇದಕ್ಕಿರುವ ಪರಿಹಾರವೆಂದು ಜ್ಞಾನಿಗಳು ಹೇಳುತ್ತಾರೆ. ಇದನ್ನು ಅರಿತು ನಡೆದರೆ ಇಹ ಬದುಕಿನ ಲಯಕ್ಕೆ ಹಿಡಿತ ಬರುವುದರಲ್ಲಿ ಸಂಶಯವಿಲ್ಲ.
ಕಾವು ನೀಡುವ ಅಗ್ನಿ ಕಾಯವನು ಸುಡುವಂತೆ
ಊರ ಪೊರೆವ ನದಿ ಊರನೇ ಬಳಿಯುವಂತೆ
ವೈರುಧ್ಯದ ನಡೆಗಳು ಬಹಳವಿದೆ ಇಲ್ಲಿ
ಅಂತೆಯೇ ನೋವು ನಲಿವಿನ ಮೂಲ ನಮ್ಮಲ್ಲಿ
(ಲೇಖಕರು ಹವ್ಯಾಸಿ ಬರಹಗಾರರು)