

ಬೆಂಗಳೂರು: ಆನುವಂಶೀಯ ರಕ್ತ ಸಮಸ್ಯೆಯಾದ ಥಲಸ್ಸೇಮಿಯಾ ರೋಗಕ್ಕೆ 9ನೇ ವರ್ಷದಲ್ಲಿ ತುತ್ತಾಗಿದ್ದ ಬೆಂಗಳೂರು ಮೂಲದ 17 ವರ್ಷದ ಚಿರಾಗ್ ಎಂಬ ಬಾಲಕ, ನಿರಂತರ ಚಿಕಿತ್ಸೆಯಿಂದ ಇದೀಗ ಎಲ್ಲರಂತೆ ಜೀವನ ನಡೆಸಲು ಸಾಧ್ಯವಾಗಿದೆ.
ಮಗನನ್ನು ಗುಣಪಡಿಸಲು ಚಿರಾಗ್ ಪಾಲಕರು ಇನ್ನಿಲ್ಲದ ಪ್ರಯತ್ನಪಡುತ್ತಿದ್ದರು. ಇದಕ್ಕಾಗಿ ಸಹೋದರಿಯ ಸ್ಟೆಮ್ ಸೆಲ್ಗಳನ್ನು ಹೊಂದಿಸಲು ಯತ್ನಿಸಿದ್ದರೂ ಡಿಎನ್ಎ ಹೊಂದಾಣಿಕೆಯಾಗಿರಲಿಲ್ಲ. ಪರಿಣಾಮ, ಸುಮಾರು 10 ವರ್ಷ ದಾನಿಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಈ ನಡುವೆ "ಡಿಕೆಎಂಎಸ್ನ ಡೇಟಾಬೇಸ್'ನಲ್ಲಿ ಜರ್ಮನಿಯ ರೋಮನ್ ಎಂಬುವರ ಸೆಲ್ ಹೊಂದಾಣಿಕೆಯಾಗಿತ್ತು. ಸ್ಟೆಮ್ ಸೆಲ್ ದಾನ ಮಾಡುವ ಕುರಿತು ಸಂಪರ್ಕಿಸಿದಾಗ ಸ್ಪಂದಿಸಿದ್ದರು. ಬಳಿಕ 2018ರಲ್ಲಿ ಸ್ಟೆಮ್ ಸೆಲ್ಗಳನ್ನು ನೀಡಿದ್ದರು.
ಗುಣಮುಖ ಹೊಂದಿರುವ ಚಿರಾಗ್, ತನಗೆ ಸ್ಟೆಮ್ ಸೆಲ್ ನೀಡಿದವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ ಅಪರೂಪದ ಕ್ಷಣಕ್ಕೆ "ಡಿಕೆಎಂಎಸ್' ವತಿಯಿಂದ ವಿಶ್ವ ಥಲಸ್ಸೇಮಿಯಾ ದಿನದ ಅಂಗವಾಗಿ ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಾಯಾಯಿತು.
ಚಿರಾಗ್ ಮಾತನಾಡಿ, ಪ್ರಾರಂಭದಲ್ಲಿ ರೋಗದ ಬಗ್ಗೆ ಅರಿವಿರಲಿಲ್ಲ. ನಂತರದಲ್ಲಿ ಅಶಕ್ತನಾಗುತ್ತಿದ್ದಂತೆ ನಿತ್ಯ ವೈದ್ಯರನ್ನು ಭೇಟಿಯಾಗಬೇಕಾಗಿ ಬಂತು. ಎಲ್ಲರಂತೆ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಗುಣಮುಖ ಹೊಂದಿದ್ದು, ಸಂತಸವಾಗುತ್ತಿದೆ ಎಂದರು.
'ನನ್ನ ಸ್ಟೆಮ್ ಸೆಲ್ನಿಂದ ಚಿರಾಗ್ನ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿದೆ. ಸಾಧ್ಯವಾದಷ್ಟು ಜನರು ಅಗತ್ಯವಿರುವವರಿಗೆ ಸ್ಟೆಮ್ ಸೆಲ್ಗಳನ್ನು ದಾನ ಮಾಡುವ ಕಾರ್ಯಕ್ಕೆ ಮುಂದಾಗಿ' ಎಂದು ಸ್ಟೆಮ್ಸೆಲ್ ದಾನಿ ರೋಮನ್ ಮನವಿ ಮಾಡಿದರು.
ಡಿಕೆಎಂಎಸ್&ಬಿಎಂಎಸ್ಟಿ ಸಿಇಒ ಪ್ಯಾಟ್ರಿಕ್ ಪಾಲ್, ನಾರಾಯಣ ಹೆಲ್ತ್ ನಿರ್ದೇಶಕ, ರಕ್ತ ಹಾಗೂ ಅಸ್ಥಿಮಜ್ಜೆ ಕಸಿ ವಿಭಾಗದ ಡಾ. ಸುನೀಲ್ ಭಟ್ ಉಪಸ್ಥಿತರಿದ್ದರು.