

ವಾಷಿಂಗ್ಟನ್: ಇಷ್ಟು ದಿನ 'ಕೃತಕ ಬುದ್ಧಿಮತ್ತೆ' ಅಥವಾ 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' (AI) ಎಂದು ಕರೆಯುತ್ತಿದ್ದ ತಂತ್ರಜ್ಞಾನಕ್ಕೆ ಅಮೆರಿಕ ಸರ್ಕಾರ ಹೊಸ ನಾಮಕರಣ ಮಾಡಿದೆ. ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೇ ಒಂದು ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಇನ್ಮುಂದೆ ಅಮೆರಿಕ ಸರ್ಕಾರದ ಅಧಿಕೃತ ದಾಖಲೆಗಳು ಹಾಗೂ ಸಂವಹನಗಳಲ್ಲಿ AI ಅನ್ನು 'ಸೂಪರ್ ಇಂಟೆಲಿಜೆನ್ಸ್' (SI) ಎಂದೇ ಕರೆಯಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಶ್ವೇತಭವನದಲ್ಲಿ ಜಾಗತಿಕ ತಂತ್ರಜ್ಞಾನ ದಿಗ್ಗಜರೊಂದಿಗೆ ನಡೆದ ಭೋಜನ ಕೂಟದಲ್ಲಿ ಟ್ರಂಪ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೆಲ ದಿನಗಳ ಹಿಂದೆ ತಾವು ಆಡಿದ್ದ ಮಾತಿನಂತೆ, ಈಗ ಇದನ್ನು ಅಧಿಕೃತಗೊಳಿಸಲು ಕಾರ್ಯಕಾರಿ ಆದೇಶಕ್ಕೂ ಸಹಿ ಹಾಕಿದ್ದಾರೆ.
ಯಾವುದಾದರೂ ತಂತ್ರಜ್ಞಾನದ ಮುಂದೆ 'ಕೃತಕ' (Artificial) ಎನ್ನುವ ಪದವನ್ನು ಬಳಸಿದಾಗ, ಅದು ನಿಜವಾಗಿರುವುದಕ್ಕಿಂತ ಕಡಿಮೆ ಸಾಮರ್ಥ್ಯವಿರುವಂತೆ ಅಥವಾ ಬೋಗಸ್ ವಸ್ತುವಿನಂತೆ ಭಾಸವಾಗುತ್ತದೆ ಎನ್ನುವುದು ಟ್ರಂಪ್ ವಾದವಾಗಿದೆ. ಆದರೆ, ಟೆಕ್ ಲೋಕದಲ್ಲಿ 'ಸೂಪರ್ ಇಂಟೆಲಿಜೆನ್ಸ್' ಎಂದರೆ ಮನುಷ್ಯನ ಬುದ್ಧಿಮತ್ತೆಗಿಂತಲೂ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿ ಮತ್ತು ಯೋಚಿಸಬಲ್ಲ ಕಾಲ್ಪನಿಕ ವ್ಯವಸ್ಥೆ ಎಂದರ್ಥ. ಸದ್ಯಕ್ಕೆ ಇದು ಅಮೆರಿಕ ಸರ್ಕಾರದ ಕಚೇರಿಗಳು ಮತ್ತು ನೀತಿ ನಿರೂಪಣಾ ದಾಖಲೆಗಳಿಗೆ ಮಾತ್ರ ಸೀಮಿತವಾಗಿದ್ದರೂ, ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ವಿಶೇಷ ಭೋಜನ ಕೂಟದಲ್ಲಿ ವಿಶ್ವದ ದೊಡ್ಡ ದೊಡ್ಡ ಟೆಕ್ ಕಂಪನಿಗಳ ಸಿಇಒಗಳು ಭಾಗವಹಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಟೆಸ್ಲಾ ಬಾಸ್ ಎಲಾನ್ ಮಸ್ಕ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ, ಗೂಗಲ್ ಸಿಇಒ ಸುಂದರ್ ಪಿಚೈ, ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹಾಗೂ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ದಿಗ್ಗಜರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಭೆಯಲ್ಲಿ ಕೇವಲ ಹೆಸರಿನ ಬದಲಾವಣೆ ಮಾತ್ರವಲ್ಲದೆ, AI ತಂತ್ರಜ್ಞಾನದ ಸುರಕ್ಷತೆ, ಡೇಟಾ ಸೆಂಟರ್‌ಗಳ ನಿರ್ವಹಣೆ ಹಾಗೂ ಭವಿಷ್ಯದ ಸವಾಲುಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಇಂದಿನ ದಿನಗಳಲ್ಲಿ AI ವೇಗವಾಗಿ ಬೆಳೆಯಲು ದೊಡ್ಡ ಮಟ್ಟದ ಡೇಟಾ ಸೆಂಟರ್‌ಗಳ ಅವಶ್ಯಕತೆಯಿದೆ. ಆದರೆ ಇದರಿಂದ ಸ್ಥಳೀಯ ಜನರಿಗೆ ತೊಂದರೆಯಾಗಬಾರದು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಕಂಪನಿಗಳು ಆಯಾ ಸ್ಥಳೀಯ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ಅಲ್ಲಿನ ಶಾಲೆಗಳು, ಶಿಕ್ಷಕರ ಕಲ್ಯಾಣ ಹಾಗೂ ಸ್ಥಳೀಯ ಅಭಿವೃದ್ಧಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಟ್ರಂಪ್ ಟೆಕ್ ಕಂಪನಿಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.
AI ತಂತ್ರಜ್ಞಾನವು ದುರುಪಯೋಗವಾಗದಂತೆ ತಡೆಯಲು ಮತ್ತು ಅದರ ಬೆಳವಣಿಗೆಯ ವೇಗಕ್ಕೆ ಯಾವುದೇ ತಡೆ ಬಾರದಂತೆ ನೋಡಿಕೊಳ್ಳಲು ಪ್ರಮುಖ ಟೆಕ್ ಕಂಪನಿಗಳು ಹೊಸ ಸ್ವಯಂಪ್ರೇರಿತ ಸುರಕ್ಷತಾ ಒಪ್ಪಂದಕ್ಕೆ (Voluntary Safety Framework) ಒಪ್ಪಿಗೆ ಸೂಚಿಸಿವೆ. ಸರ್ಕಾರಿ ಕಠಿಣ ಕಾನೂನುಗಳ ಬ್ರೇಕ್ ಇಲ್ಲದೆ, ಕಂಪನಿಗಳೇ ಸ್ವತಃ ಆಂತರಿಕ ನಿಯಂತ್ರಣಗಳನ್ನು ಹೊಂದುವ ಮೂಲಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಭೆಯಲ್ಲಿ ಒಮ್ಮತ ಮೂಡಿದೆ ಎನ್ನಲಾಗಿದೆ, (ಏಜೆನ್ಸೀಸ್).