

ಇದಕ್ಕಾಗಿ ಅವರು ಅತ್ಯಂತ ಮೇಧಾವಿಯೂ ತುಂಬ ಹಿರಿಯರೂ ಆದ ಪ್ರಧಾನಮಂತ್ರಿಗಳಲ್ಲಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ವಿನಂತಿಸಿದರು. ಒಮ್ಮೆ ಸಮಯ ನೋಡಿ ರಾಜನ ಬಳಿ ಬಂದು ಮಾತು ಆರಂಭಿಸಿದ ಪ್ರಧಾನಮಂತ್ರಿ, ‘ಇಡೀ ರಾಜ್ಯದ ನೆಲಕ್ಕೆ ನೆಲಹಾಸು ಹಾಸುವ ನಿಮ್ಮ ಯೋಜನೆ ಉತ್ತಮವಾದದ್ದೇ ಆಗಿದೆ. ನೀವು ಸ್ವತಃ ಕಷ್ಟ ಅನುಭವಿಸಿ, ಪ್ರಜೆಗಳಿಗೆ ಇಂತಹ ಕಷ್ಟ ಬರಬಾರದೆಂಬ ನಿಮ್ಮ ಕಳಕಳಿ ಶ್ಲಾಘನೀಯ. ಆದರೆ, ವ್ಯಾವಹಾರಿಕ ದೃಷ್ಟಿಯಿಂದ ಈ ಬಗ್ಗೆ ನನ್ನ ಬಳಿ ಇನ್ನೂ ಉತ್ತಮವಾದ ಒಂದು ಸಲಹೆಯಿದೆ. ತಾವು ಅಪ್ಪಣೆಯಿತ್ತರೆ ಅರಿಕೆ ಮಾಡುತ್ತೇನೆ’ ಎಂದರು. ರಾಜ ಅನುಮತಿಯಿತ್ತ. ‘ಯಾರಾದರೂ ಬರೀ ನೆಲದಲ್ಲಿ ನಡೆದರೆ ಅವರ ಕಾಲಿಗೆ ಚುಚ್ಚುವ, ಗಾಯವಾಗುವ ಸಾಧ್ಯತೆ ಇದೆ. ಆದರೆ, ಇದರ ನಿವಾರಣೆಗೋಸ್ಕರ ಇಡೀ ರಾಜ್ಯಕ್ಕೆ ನೆಲಹಾಸು ಹಾಕುವ ಬದಲು ತಮ್ಮ ತಮ್ಮ ಕಾಲಿಗೇ ಹೊಂದುವ ನೆಲಹಾಸು ಹಾಕಿದರೆ, ರಾಜ್ಯದ ಬೊಕ್ಕಸಕ್ಕೆ ಖರ್ಚೂ ಕಡಿಮೆ, ಕಾಲ ಹಾಗೂ ಶ್ರಮದ ಉಳಿತಾಯ ಕೂಡ. ಈ ಬಗ್ಗೆ ನಾವು ಯೋಚಿಸಿದರೆ ಉತ್ತಮ’ ಎಂದು ಪ್ರಧಾನಮಂತ್ರಿ ಅಭಿಪ್ರಾಯ ಮುಂದಿಟ್ಟರು. ರಾಜನಿಗೂ ಇದು ಸರಿ ಕಂಡಿತು. ಈ ಮೂಲಕ ಕಾಲಿಗೆ ಹೊಂದುವ ನೆಲಹಾಸಿನ (ಪಾದರಕ್ಷೆಯ) ಜನನವಾಯಿತು.
ನಾವು ಒಂದು ಸಮಸ್ಯೆಗೆ ಇಡೀ ವ್ಯವಸ್ಥೆಯ ಮಟ್ಟದಲ್ಲಿ ಪರಿಹಾರ ಹುಡುಕುವ ಬದಲು ನಮ್ಮ ನಮ್ಮ ನೆಲೆಯಲ್ಲಿ ಪರಿಹಾರ ಹುಡುಕಲು ಪ್ರಯತ್ನಿಸಿದರೆ ಅದು ವ್ಯಾವಹಾರಿಕವಾಗಿ ತುಂಬ ಪ್ರಯೋಜನಕಾರಿ. ನಾವು ಇನ್ನೊಬ್ಬರ ದೋಷಕ್ಕೆ ಮದ್ದು ಹುಡುಕುವ ಬದಲು ನಮ್ಮನ್ನು ನಾವೇ ಸುಧಾರಿಸಿಕೊಂಡರೆ ಸಮಸ್ಯೆ ನಿರಾಯಾಸವಾಗಿ ಪರಿಹಾರವಾಗಬಹುದು. ಅದಕ್ಕೆಂದೇ ಜಗಜ್ಯೋತಿ ಬಸವಣ್ಣನವರು, ಲೋಕದ ಡೊಂಕ ನೀವೇಕೆ ತಿದ್ದುವಿರಿ ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿದ್ದಾರೆ.
(ಲೇಖಕರು ಹವ್ಯಾಸಿ ಬರಹಗಾರರು)