AC Side Effects: ಎಸಿಯಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಹಾಗದರೆ ನೀವಿದನ್ನು ಓದಲೇಬೇಕು…

Air conditioning
Published on

ಹವಾನಿಯಂತ್ರಣ ಅಥವಾ ಏರ್​ ಕಂಡೀಷನಿಂಗ್​​ ಮಾನವ ಜೀವನದ ಭಾಗವಾಗಿದೆ. ಇಂದಿನ ದಿನಗಳಲ್ಲಿ ಅನೇಕರು ಕಚೇರಿ, ಕಾರು ಸೇರಿದಂತೆ ಅನೇಕ ಸ್ಥಳಗಳಲ್ಲಿ ಎಸಿ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಆದರೆ, ಆರೋಗ್ಯ ತಜ್ಞರು ಹೇಳುವ ಪ್ರಕಾರ ಎಸಿ ದೇಹಕ್ಕೆ ತಂಪಾದ ಗಾಳಿಯನ್ನು ಒದಗಿಸಿದರೂ, ಹೆಚ್ಚು ಹವಾನಿಯಂತ್ರಣವನ್ನು ಉಸಿರಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಚಿಕ್ಕ ಮಕ್ಕಳು ಚರ್ಮದ ಸಮಸ್ಯೆಗಳ ಜೊತೆಗೆ ಉಸಿರಾಟದ ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ತಜ್ಞರು ನಂಬುತ್ತಾರೆ. ಹೀಗಾಗಿ ಎಸಿಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ನಾವೀಗ ತಿಳಿಯೋಣ.

ದೇಹದ ನೋವುಗಳು: ಆರೋಗ್ಯ ತಜ್ಞರ ಪ್ರಕಾರ, ಹವಾನಿಯಂತ್ರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ದೇಹದ ನೋವು ಹಾಗೂ ದೇಹದ ಸೆಳೆತದ ಅನುಭವದ ಸಾಧ್ಯತೆಗಳಿವೆ. ಕೆಲವರಲ್ಲಿ ಕೀಲು ನೋವು ಬರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೀಲು ನೋವಿನಿಂದ ಬಳಲುತ್ತಿರುವವರು ಹವಾನಿಯಂತ್ರಣದಲ್ಲಿ ದೀರ್ಘಕಾಲ ಉಳಿಯುವುದನ್ನು ತಪ್ಪಿಸಬೇಕು. ಇದರ ಜೊತೆಗೆ, ದಿ ಕಂಫರ್ಟ್ ಅಕಾಡೆಮಿಯ ಸಂಶೋಧನೆಯ ಪ್ರಕಾರ ಕೆಳ ಬೆನ್ನುನೋವಿನ ಅಪಾಯವಿದೆ.

ನಿರ್ಜಲೀಕರಣ: ಎಸಿಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಆಗಾಗ ಬಾಯಾರಿಕೆ ಸಮಸ್ಯೆಯೂ ಕಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅಲ್ಲದೆ, ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣದ ಸಾಧ್ಯತೆಗಳಿವೆ. ಇದರೊಂದಿಗೆ ಕೆಲವರಿಗೆ ತಲೆನೋವು ಕೂಡ ಬರಬಹುದು. ಹಾಗಾಗಿ ಪದೇ ಪದೇ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಎಸಿಗಳಿಂದ ದೂರವಿರುವುದು ಉತ್ತಮ.

ಚರ್ಮದ ಶುಷ್ಕತೆಯನ್ನು ಹೆಚ್ಚಿಸುತ್ತದೆ: ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಎಸಿಯಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇಲ್ಲದಿದ್ದರೆ, ಗಾಳಿಯಲ್ಲಿ ತೇವಾಂಶದ ಮಟ್ಟವು ಕಡಿಮೆಯಾಗುತ್ತದೆ ಮತ್ತು ಚರ್ಮವು ಶುಷ್ಕವಾಗುವ ಸಾಧ್ಯತೆಗಳಿವೆ. ಈಗಾಗಲೇ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಹವಾನಿಯಂತ್ರಿತ ಪ್ರದೇಶದಲ್ಲಿ ಇರಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಉಳಿದಂತೆ ಉಸಿರಾಟದ ತೊಂದರೆಗಳು, ಅಸ್ತಮಾ ಮತ್ತು ಅಲರ್ಜಿ, ಆಲಸ್ಯ ಹಾಗೂ ತಲೆನೋವು ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಸಾಧ್ಯವಾದಷ್ಟು ಎಸಿಯನ್ನು ನಿರ್ಲಕ್ಷಿಸುವುದು ಉತ್ತಮವಾಗಿದೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net