ಸಂಪೂರ್ಣ ಯಶಸ್ಸು: ಭಾರತದ ಜಿ20 ಅಧ್ಯಕ್ಷತೆಯನ್ನು ಹಾಡಿ ಹೊಗಳಿದ ಅಮೆರಿಕ

India US
Published on

ವಾಷಿಂಗ್ಟನ್​: ಭಾರತದಲ್ಲಿ ಸೆ. 9 ಮತ್ತು 10ರಂದು ಎರಡು ದಿನಗಳ ಕಾಲ ನಡೆದ ಜಿ-20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ಭಾರತದ ನಾಯಕತ್ವವನ್ನು ಜಿ 20 ಸದಸ್ಯ ರಾಷ್ಟ್ರಗಳು ಮೆಚ್ಚಿಕೊಂಡಿವೆ. ಇದೀಗ ಅಮೆರಿಕ ಸಹ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ಇದೊಂದು ಸಂಪೂರ್ಣ ಯಶಸ್ಸು ಎಂದಿದೆ.

ಎಂದಿನಂತೆ ಸೋಮವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಯುನೈಟೆಡ್​ ಸ್ಟೇಟ್ಸ್​ ರಾಜ್ಯ ಇಲಾಖೆಯ ವಕ್ತಾರ ಮ್ಯಾಥೀವ್​ ಮಿಲ್ಲರ್​, ಇದೊಂದು ಯಶಸ್ಸು ಎಂದು ನಾವು ಸಂಪೂರ್ಣವಾಗಿ ನಂಬುತ್ತೇವೆ. ಜಿ20 ಎಂಬುದು ಒಂದು ದೊಡ್ಡ ಸಂಘಟನೆ. ರಷ್ಯಾ ಮತ್ತು ಚೀನಾ ಕೂಡ ಜಿ20ಯ ಸದಸ್ಯರೆಂದು ಹೇಳಿದರು.

ಜಿ20 ಶೃಂಗಸಭೆ ಯಶಸ್ವಿಯಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮ್ಯಾಥೀವ್​ ಮಿಲ್ಲರ್​ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ರಷ್ಯಾ ಗೈರು ಹಾಜರಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮ್ಯಾಥೀವ್​ ಮಿಲ್ಲರ್​, ಜಿ20ಯಲ್ಲಿ ವಿವಿಧ ಮನೋಭಾವವಗಳನ್ನು ಹೊಂದಿರುವ ಸದಸ್ಯರಿದ್ದಾರೆ. ಆದರೆ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಲು ಕರೆ ನೀಡಲು ಸಂಸ್ಥೆಯು ಸಮರ್ಥವಾಗಿದೆ ಮತ್ತು ಆ ತತ್ವಗಳನ್ನು ಉಲ್ಲಂಘಿಸಬಾರದು ಎಂದು ಹೇಳುವುದು ಬಹಳ ಮುಖ್ಯವಾಗಿದೆ. ಏಕೆಂದರೆ, ಪ್ರಸ್ತುತ ರಷ್ಯಾ, ಯೂಕ್ರೇನ್ ಆಕ್ರಮಣದ ಮಧ್ಯಭಾಗದಲ್ಲಿದೆ ಎಂದು ಹೇಳಿದರು.

ಪರಮಾಣು ಅಸ್ತ್ರಗಳ ಬಳಕೆ ಅಥವಾ ಬೆದರಿಕೆಯು ಸ್ವೀಕಾರಾರ್ಹವಲ್ಲ ಎಂದು G20 ರಾಷ್ಟ್ರಗಳು ಯೂಕ್ರೇನ್ ಯುದ್ಧದ ಉಲ್ಲೇಖದ ಅಡಿಯಲ್ಲಿ ಶೃಂಗಸಭೆ ಸಮಯದಲ್ಲಿ ಘೋಷಣೆ ಮಾಡಿವೆ. ರಷ್ಯಾವನ್ನು ಉಲ್ಲೇಖಿಸದೆ, G20 ಸದಸ್ಯ ರಾಷ್ಟ್ರಗಳು ಬಾಲಿ ಘೋಷಣೆಯನ್ನು ಜಿ20 ಶೃಂಗಸಭೆಯ ವೇಳೆ ನೆನಪಿಸಿಕೊಂಡವು ಮತ್ತು ಎಲ್ಲ ರಾಜ್ಯಗಳು ಯುಎನ್ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಯೂಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ದೀರ್ಘಕಾಲದ ಶಾಂತಿಗಾಗಿ ಕರೆ ನೀಡಿದರು.

2024ನೇ ಸಾಲಿನ ಜಿ-20 ಶೃಂಗಸಭೆ ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 2023ನೇ ಸಾಲಿನ ಅಧ್ಯಕ್ಷತೆಯನ್ನು ಭಾರತ ವಹಿಸಿತ್ತು. ಸೆ.9 ಮತ್ತು 10ರಂದು ಎರಡು ದಿನಗಳ ಕಾಲ ಶೃಂಗಸಭೆ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ನಡೆಯಿತು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ-20 ಶೃಂಗಸಭೆಯ ಗವೆಲ್ ಅನ್ನು ಸೆ.10 ರಂದು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಅವರಿಗೆ ಹಸ್ತಾಂತರ ಮಾಡಿದರು. ಹೀಗಾಗಿ ಮುಂದಿನ ಜಿ20 ಅಧ್ಯಕ್ಷತೆಯನ್ನು ಬ್ರೆಜಿಲ್​ ವಹಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net