

ಆ ದಾರಿಯಲ್ಲಿ ಬಂದ ಇನ್ನೊಬ್ಬ ರೈತ ‘ಯಾಕಪ್ಪಾ ಹೀಗೆ ಕೂತಿದೀಯ, ಏನಾಯಿತು?’ ಅಂತ ಕೇಳಿದ. ಆಗ ಆ ರೈತ ಪಕ್ಕದ ಹೊಲವನ್ನು ತೋರಿಸಿ, ‘ಅಲ್ಲಿ ನೋಡು. ಅವನ ಹೊಲದಲ್ಲಿ ಬೆಳೆ ಎಷ್ಟು ಚೆನ್ನಾಗಿ, ಸಮೃದ್ಧವಾಗಿ ಬೆಳೆದಿದೆ. ಆದರೆ ನನ್ನ ಹೊಲದಲ್ಲಿ ಏನೂ ಬೆಳೆದಿಲ್ಲ’ ಅಂದ. ಆಗ ಪ್ರಶ್ನೆ ಮಾಡಿದ ರೈತ ಈ ರೈತನ ಹೊಲ ನೋಡಿದರೆ ಅಲ್ಲಿ ಉತ್ತು ಬಿತ್ತು ಮಾಡಿದ ಯಾವ ಲಕ್ಷಣವೂ ಕಾಣಲಿಲ್ಲ. ಉತ್ತು ಬಿತ್ತು ಮಾಡದೇ ಹೋದರೆ ಯಾವ ಬೆಳೆ ತಾನೇ ಬಂದೀತು. ಆಗ ರೈತ ‘ಏನಪ್ಪಾ ಅವನು ತನ್ನ ಹೊಲದಲ್ಲಿ ಸಮಯಕ್ಕೆ ಸರಿಯಾಗಿ ಬೀಜ ಬಿತ್ತಿ, ನೀರು ಹರಿಸಿ, ಕಳೆ ಕಿತ್ತು, ಹಕ್ಕಿಗಳನ್ನು ಕಾದು ಬೆವರು ಸುರಿಸಿ ದುಡಿದು ಕಷ್ಟಪಟ್ಟಿದ್ದಕ್ಕೆ ಅವನ ಹೊಲದಲ್ಲಿ ಚಿನ್ನದಂಥ ಬೆಳೆ ಬಂದಿದೆ. ಆದರೆ ನಿನ್ನ ಹೊಲ ನೋಡಿದರೆ ನೀನು ಉತ್ತ ಹಾಗೂ ಇಲ್ಲ, ಬಿತ್ತ ಹಾಗೂ ಇಲ್ಲ. ಇನ್ನು ಬೆಳೆ ಹೇಗೆ ಬಂದೀತು. ದುಡಿಯದೇ ಪ್ರತಿಫಲ ನೋಡುತ್ತ ಕೂತಿರುವ ನಿನ್ನ ಸ್ಥಿತಿ ನೋಡಿದರೆ ನಗು ಬರುತ್ತದೆ. ಮೊದಲು ಕಷ್ಟಪಟ್ಟು ದುಡಿಯಲು ಆರಂಭಿಸು. ಸಮಯಕ್ಕೆ ಸರಿಯಾಗಿ ಹೊಲ ಹಸನುಗೊಳಿಸು, ಬೀಜ ಬಿತ್ತು, ನೀರು ಹರಿಸು, ಕಳೆ ಕೀಳು, ಆಗ ನಿನ್ನ ದುಡಿಮೆಗೆ ತಕ್ಕ ಪ್ರತಿಫಲ ಬಂದೇ ಬರುತ್ತದೆ’ ಎಂದು ತಿಳಿವಳಿಕೆ ಹೇಳಿ ಹೊರಟುಹೋದ.
ಆ ರೈತ ಹೋದ ಮೇಲೆ ತಲೆ ಮೇಲೆ ಕೈ ಹೊತ್ತು ಕೂತಿದ್ದವನು ಹೌದಲ್ಲ, ಅವನು ಹೇಳಿದ ಮಾತು ಎಷ್ಟು ನಿಜ ಅಂದುಕೊಂಡ. ನಾವು ಬಹಳಷ್ಟು ಕಾಲ ಇನ್ನೊಬ್ಬರಿಗೆ ಬಂದ ಯಶಸ್ಸನ್ನು ಕಂಡು ನಮಗೇಕೆ ಅಂಥ ಯಶಸ್ಸು ಬರಲಿಲ್ಲ ಅಂತ ಚಿಂತೆ ಮಾಡ್ತೀವಿ. ಆದರೆ ಇನ್ನೊಬ್ಬರ ಯಶಸ್ಸಿನ ಹಿಂದೆ ಬಹಳ ಪರಿಶ್ರಮ ಇರುತ್ತೆ ಎನ್ನುವುದನ್ನು ಅರಿಯುವುದಿಲ್ಲ. ಯಾವ ಪರಿಶ್ರಮವೂ ಒಳ್ಳೆಯ ಫಲಿತಾಂಶ ಕೊಡದೇ ಹೋಗುವುದಿಲ್ಲ. ಆದರೆ ಪರಿಶ್ರಮ ಪಟ್ಟು ತಾಳ್ಮೆಯಿಂದ ಕಾಯಬೇಕು ಅಷ್ಟೆ. ಯಶಸ್ಸು ಸುಖಾಸುಮ್ಮನೆ ಸಿಗುವಂಥದ್ದಲ್ಲ.
(ಲೇಖಕರು ಸಾಹಿತಿ)