

Sleeping On Stomach: ಬೆಳಗ್ಗೆ ಪೂರ ಕೆಲಸ ಮಾಡಿ ಬಂದು, ರಾತ್ರಿ ವೇಳೆ ಹಾಸಿಗೆ ನೋಡುತ್ತಿದ್ದಂತೆ ಸುಖ ನಿದ್ರೆಗೆ ಜಾರುವ ಮಂದಿ ಅದೆಷ್ಟೋ. ನಿದ್ರೆ ಬರುವವರೆಗೂ ನಾವು ಎಲ್ಲಿ, ಹೇಗೆ ಮಲಗಿದ್ದೀವಿ ಅನ್ನೋದು ತಿಳಿಯುತ್ತೆ. ಆದರೆ, ಒಮ್ಮೆ ಗಾಢವಾದ ನಿದ್ರೆಗೆ ಹೋದ ಬಳಿಕ ಯಾವ ಭಂಗಿಯಲ್ಲಿ ಮಲಗಿದ್ದೇವೆ ಅನ್ನೋದನ್ನು ಎಷ್ಟು ಜನ ಯೋಚಿಸುತ್ತಾರೆ ಹೇಳಿ? ಹೀಗೆಯೇ ಮಲಗಬೇಕು, ಇದೇ ಭಂಗಿಯಲ್ಲಿ ಮಲಗಿದರೆ ಉತ್ತಮ ಎಂಬುದರ ಬಗ್ಗೆ ಕಿಂಚಿತ್ತು ತಲೆಕಡಿಸಿಕೊಳ್ಳುವುದಿಲ್ಲ. ಆದರೆ, ನೀವು ಮಲಗುವ ಭಂಗಿ ಏನೆಲ್ಲ ಸಮಸ್ಯೆಗೆ ಕಾರಣವಾಗುತ್ತೆ ಎಂಬುದರ ಅರಿವು ನಿಮಗಿದೆಯಾ?
ಕೆಲವು ರೀತಿಯ ಮಲಗುವ ಭಂಗಿಗಳು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಚಳಿಗಾಲದಲ್ಲಿ ಈ ರೀತಿಯ ನಿದ್ರೆಯಿಂದ ಆಗುವ ಪರಿಣಾಮಗಳು ಹೆಚ್ಚು. ಇದು ಮೂಳೆಗಳು, ಸ್ನಾಯುಗಳು ಮತ್ತು ಬೆನ್ನಿನಲ್ಲಿ ನೋವನ್ನು ಉಂಟುಮಾಡುತ್ತದೆ. ಮಲಗುವ ಅಭ್ಯಾಸಗಳು ಸಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂದು ಕಾಲು ಬಾಗಿಸಿ ಮತ್ತು ನಿಮ್ಮ ಮುಖವನ್ನು ಕೆಳಮುಖವಾಗಿ ಇರಿಸಿ, ಹೊಟ್ಟೆಯ ಮೇಲೆ ಒತ್ತಡ ಕೊಟ್ಟು ಮಲಗುವುದರಿಂದ ತೊಂದೆರೆ ಕಟ್ಟಿಟ್ಟಬುತ್ತಿ.
ಈ ಭಂಗಿಯಲ್ಲಿ ನಿದ್ರಿಸುವುದರಿಂದ ಬೆನ್ನುಮೂಳೆಯ ಮೇಲೆ ಗಂಟೆಗಳ ಕಾಲ ಒತ್ತಡ ಬೀರುತ್ತದೆ. ಸ್ನಾಯುಗಳು ಬಿಗಿಯಾಗುತ್ತವೆ ಮತ್ತು ನರಗಳು ಒತ್ತಡಕ್ಕೆ ಸಿಲುಕುತ್ತವೆ. ಈ ಸ್ಥಿತಿಯು ನಿಮ್ಮ ಕೆಳ ಬೆನ್ನಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಇದು ದೇಹದಲ್ಲಿನ ನೈಸರ್ಗಿಕ ವಕ್ರರೇಖೆಯನ್ನು ಕಳೆದುಕೊಳ್ಳುತ್ತದೆ. ಮಕಾಡೆ ಮಲಗುವ ಅಭ್ಯಾಸ ಕುತ್ತಿಗೆ, ಬೆನ್ನು, ಭುಜದ ನೋವು ಸೇರಿದಂತೆ ಉಸಿರಾಟದ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ, ನಿದ್ರೆ ಎಷ್ಟು ಮುಖ್ಯವೋ, ನಿದ್ರಿಸುವ ಭಂಗಿ ಬಗ್ಗೆ ಅರಿವಿರುವುದು ಅಷ್ಟೇ ಮುಖ್ಯ ಎಂಬುದು ನೆನಪಿರಲಿ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.