

ಮಹಿಳೆಯ ದೇಹದಲ್ಲಿ ಜೈವಿಕವಾಗಿ ಕಂಡುಬರುವ ಹಂತಗಳು-ಋತುಸ್ರಾವ, ಗರ್ಭಧಾರಣೆ, ಋತುಬಂಧ, ಇವೆಲ್ಲಕ್ಕೂ ನಿದ್ರೆಯಲ್ಲಿ ಬರುವ ಸಮಸ್ಯೆಗಳಿಗೂ ಸಂಬಂಧವಿದೆ. ಅದರ ಜೊತೆಗೇ ಮಹಿಳೆ ನಿಭಾಯಿಸುವ ಆರೈಕೆಯ ಜವಾಬ್ದಾರಿ, ದಿನಚರಿ, ಬಹುಪಾತ್ರಗಳ ನಿರ್ವಹಣೆ ಇವು ಮಹಿಳೆಯರಲ್ಲಿ ನಿದ್ರಾ ಸಮಸ್ಯೆಗಳನ್ನು ತರಲು ಸಾಧ್ಯವಿದೆ.
ಡಾ.ಕೆ.ಎಸ್. ಪವಿತ್ರ, ಮನೋವೈದ್ಯೆ
ಐವತ್ತನ್ನೇ ವರ್ಷದ ಮಹಿಳೆಗೆ ಮನೆಯಲ್ಲಿ ಮಗಳ ಬಾಣಂತನ ಮಾಡುವ ಸಂಭ್ರಮ. ರಾತ್ರಿಯಿಡೀ ಅಳುವ ಮೊಮ್ಮಗುವನ್ನು ನಿಭಾಯಿಸುವ ಜವಾಬ್ದಾರಿ. ಬೆಳಗ್ಗೆ ಹೊಸ ಬಾಣಂತಿ-ಮಗು ಇಬ್ಬರಿಗೂ ನಿದ್ರೆ. ಹೊಸ ‘ಅಜ್ಜಿ’ಗೆ ರಾತ್ರಿಯೂ ನಿದ್ರೆ ಇಲ್ಲ, ಬೆಳಗ್ಗೆಯೂ ನಿದ್ರೆ ಇಲ್ಲ! ಏನು ಮಾಡಬೇಕು?
ಮತ್ತೊಬ್ಬ ಮಹಿಳೆ ಹೇಳಿದ್ದು - ‘‘ಡಾಕ್ಟ್ರೇ ನನಗೆ ಎರಡನೇ ಮಗು ಹುಟ್ಟಿದ ಮೇಲೆ ಕಡಿಮೆಯಾದ ನಿದ್ರೆ ಈಗಲೂ ಬಂದೇ ಇಲ್ಲ. ನನಗೆ ಮತ್ಱಾವ ಸಮಸ್ಯೇನೂ ಇಲ್ಲ. ಆದರೆ ನಿದ್ರೆ ಮಾತ್ರ ಬರೋದಿಲ್ಲ. ಬೇರೆಯವರೆಲ್ಲಾ ಹೇಳ್ತಾರೆ. ‘ನಾವು ನೋಡಿದಾಗ ನೀನು ನಿದ್ರೆ ಮಾಡಿರ್ತೀಯಾ’ ಅಂತ. ಆದರೆ ನನಗೆ ಮಾತ್ರ ಸುತ್ತಮುತ್ತಲಲ್ಲಿ ಏನಾಗ್ತಾ ಇದೆ ಅದೆಲ್ಲಾ ಗೊತ್ತಾಗ್ತಲೇ ಇರುತ್ತೆ ಅನ್ನಿಸುತ್ತೆ. ಆಳವಾದ-ಮನಸ್ಸಿಗೆ ತೃಪ್ತಿಯಾಗುವ-ಕಣ್ಣು ತುಂಬುವ ನಿದ್ರೆ ಬರೋದೇ ಇಲ್ಲ’’.
ಮೇಲೆ ಹೇಳಿದಂತಹ ನಿದ್ರೆಯ ಸಮಸ್ಯೆಗಳು ಮಹಿಳೆಯರಿಗೇ ವಿಶೇಷವಾಗಿ ಸಂಬಂಧಿಸಿದವು. ಇವುಗಳನ್ನು ನೋಡಿದಾಗ ಸಹಜವಾಗಿ ಏಳುವ ಪ್ರಶ್ನೆ ‘‘ಮಹಿಳೆಯರಲ್ಲಿ ನಿದ್ರೆಯ ಸಮಸ್ಯೆಗಳು ಹೆಚ್ಚೇ?’ ಇದಕ್ಕೆ ವಿಜ್ಞಾನ ನೀಡುವ ಉತ್ತರ ‘ಹೌದು’ ಎಂದೇ. ಮಹಿಳೆಯರಿಗೇ ವಿಶಿಷ್ಟವಾದ, ಆದರೆ ವ್ಯಾಪಕವಾಗಿ ಕಂಡುಬರುವ ಹಲವು ಕೌಟುಂಬಿಕ-ಸಾಮಾಜಿಕ ಸನ್ನಿವೇಶಗಳನ್ನು ಬಹಳಷ್ಟು ಸಲ ಮಹಿಳೆಯರಾಗಲೀ, ಸಮಾಜದ ಇತರರಾಗಲಿ ಗಮನಿಸುವುದಿಲ್ಲ. ಈ ಅಂಶಗಳನ್ನು ನಿರ್ಲಕ್ಷಿಸದೆ, ಪ್ರಾಯೋಗಿಕವಾದ ಬದಲಾವಣೆಗಳನ್ನು ತಂದರೆ ಮಹಿಳೆಯ ನಿದ್ರೆ ಸರಿಯಾಗಿ, ಆಕೆಯ ಸಿಡಿಮಿಡಿ-ಕಿರಿಕಿರಿಗಳು ಸುಲಭವಾಗಿ ಮಾಯವಾಗಬಹುದು.
ಇವುಗಳಲ್ಲಿ ಮೊಟ್ಟ ಮೊದಲನೆಯದು ಬಹಳಷ್ಟು ಮಹಿಳೆಯರಲ್ಲಿ ಕಂಡುಬರುವ ನಿನ್ನೆಯ ಬಗೆಗೆ ಮತ್ತೆ ಮತ್ತೆ ಮೆಲುಕು ಹಾಕುವುದು, ಮತ್ತು ನಾಳೆಯ ಬಗ್ಗೆ ‘ಏನಾದೀತೋ’ ಎಂದು ಯೋಚಿಸುವುದು. ಸಂಬಂಧಗಳಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಮಹಿಳೆಗೆ ಇದು ಸಹಜವೇ. ಆದರೂ ಪ್ರಯತ್ನಪೂರ್ವಕವಾಗಿ ಇದನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಉದಾಹರಣೆಗೆ ಸಾಮಾನ್ಯವಾಗಿ ಮಹಿಳೆಯರು ಬೇರೆಯವರು ತಮ್ಮ ಮೇಲೆ ಮಾಡಿರಬಹುದಾದ ಟೀಕೆ/ವ್ಯಂಗ್ಯಗಳ ಬಗ್ಗೆ ನಿದ್ರೆಯೇ ತಮ್ಮೆಡೆಗೆ ಸುಳಿಯದಷ್ಟು ಯೋಚಿಸುತ್ತಾರೆ. ಅವರು ಹಾಗೆ ಟೀಕೆ ಮಾಡಬಹುದಾದಂತಹ ಅಂಶ, ತಾವೇನು ಮಾರುತ್ತರ ನೀಡಬಹುದಾಗಿತ್ತು, ಹೀಗೆ ಮೆಲುಕು ಹಾಕುವುದನ್ನು ಮುಂದುವರಿಸುತ್ತಾರೆ, ನಿದ್ರೆ ಕೆಡಿಸಿಕೊಳ್ಳುತ್ತಾರೆ. ‘ನಾಳೆಯ ತಿಂಡಿ ಏನು ಮಾಡಬೇಕು’ ಎಂಬ ಸಂಗತಿ ಯೋಚಿಸಿ ನಿದ್ರೆ ಕಳೆದುಕೊಳ್ಳುವವರೂ ಇದ್ದಾರೆ. ಇವರೆಲ್ಲರೂ ಮಾಡಬೇಕಾದ್ದು -‘‘ನಿನ್ನೆ ನಿನ್ನೆಗೆ ನಾಳೆ ನಾಳೆಗೆ’ ಎಂದು ನಿದ್ರೆ ಮಾಡುವಾಗ ಬೇರೆಲ್ಲವನ್ನೂ ಬದಿಗಿರಿಸಿ ನಿದ್ರೆಯನ್ನು ಆನಂದಿಸುವ ಪ್ರಯತ್ನಕ್ಕೆ ತೊಡಗುವುದು.
ಎರಡನೆಯ ಸಂಗತಿ ಮಹಿಳೆಯರಲ್ಲಿ ಕಂಡುಬರುವ ಅತಿ ಶಿಸ್ತು. ಇತರರನ್ನು ವಿಶೇಷವಾಗಿ ಗಂಡ-ಮಕ್ಕಳನ್ನು ಕೆಲಸಕ್ಕೆ ತೊಡಗಿಸದಿರುವ ಸ್ವಭಾವ. ಬಾಯಿಯಲ್ಲಿ ‘‘ಇವರ್ಯಾರೂ ಸಹಾಯ ಮಾಡುವುದಿಲ್ಲ, ನಾನೊಬ್ಬಳೇ ಕೆಲಸ ಮಾಡಬೇಕು’ ಎಂದು ದೂರಿದರೂ, ಹೆಚ್ಚಿನ ಮಹಿಳೆಯರಿಗೆ ಗಂಡ-ಮಕ್ಕಳು ಮಾಡುವ ಕೆಲಸಗಳು ‘ಸರಿ ಬರುವುದಿಲ್ಲ’ ಎನ್ನುವುದೇ ಸತ್ಯಕ್ಕೆ ಹತ್ತಿರ! ಗಂಡ-ಮಕ್ಕಳು ಮಾಡುವ ಅರೆಬರೆ ಕೆಲಸಗಳನ್ನು ಹೆಚ್ಚಿನ ಮಹಿಳೆಯರು ಒಪ್ಪುವುದಿಲ್ಲ. ಪರಿಣಾಮ ಅವರು ಮಾಡುವುದನ್ನು ಕೈ ಬಿಡುತ್ತಾರೆ. ಇದರ ಅಂತಿಮ ಫಲ, ಮಹಿಳೆ ತನ್ನ ಕೆಲಸಗಳನ್ನೆಲ್ಲಾ ‘ಅಚ್ಚುಕಟ್ಟಾಗಿ’ ಮಾಡಿ ಹಾಸಿಗೆಯಲ್ಲಿ ವಿರಮಿಸುವ ಹೊತ್ತಿಗೆ ಇತರರು ಮಲಗಿ ಅರ್ಧರಾತ್ರಿಯಾಗಿರುತ್ತದೆ. ನಿದ್ರೆ ತಡವಾಗಿ ಬರುವ ತನ್ನ ಸ್ಥಿತಿಯನ್ನು ಮಹಿಳೆ ಬಣ್ಣಿಸುವ ರೀತಿ - ‘‘ಬೇರೆಯವರೆಲ್ಲಾ ತಲೆಯಿಟ್ಟ ತಕ್ಷಣ ಹೇಗೆ ಆರಾಮವಾಗಿ ನಿದ್ರೆ ಮಾಡ್ತಾರೆ! ನಾನು ಮಾತ್ರ ಹೊರಳಾಡುತ್ತ ನಿದ್ರೆಗೆ ಅಂತ ಕಾಯುತ್ತಾ ಇರಬೇಕು. ಆ ಹಿಂಸೆ ಯಾರಿಗೂ ಬೇಡ’. ಇಂಥ ಮಹಿಳೆಯರು ಮೊದಲು ಕೆಲಸದ ಬಗೆಗೆ ತಮ್ಮ ‘ಪರಿಪೂರ್ಣತೆ’ಯನ್ನು ಸ್ವಲ್ಪ ಕಡಿಮೆ ಮಾಡಿ ಒಂದು ಹಂತಕ್ಕೆ ಸೀಮಿತವಾಗಿಸಬೇಕು. ಪತಿ-ಮಕ್ಕಳು ಕೆಲಸಕ್ಕೆ ಸಹಾಯ ಮಾಡಲು ಮುಂದಾದಾಗ ಅದನ್ನು ಸ್ವೀಕರಿಸಿ, ಅವರು ಕಲಿಯಲು ಸಮಯ ಅವಶ್ಯಕ ಎಂಬುದನ್ನು ಗಮನಿಸಬೇಕು.
ಮೂರನೆಯ ಮುಖ್ಯ ಅಂಶವೆಂದರೆ ಮಹಿಳೆಯರಲ್ಲಿ ಹಲವು ರೀತಿಯ ಆರೋಗ್ಯದ ಸಮಸ್ಯೆಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಬೆಳಗ್ಗೆಯಿಡೀ ನೋವುಗಳನ್ನು ಲಕ್ಷಿಸದೆ ಕೆಲಸ ಮಾಡಿಬಿಡುವ ಮಹಿಳೆಗೆ ರಾತ್ರಿ ಮಲಗಿದ ಮೇಲೆ ದೇಹದಲ್ಲಿರುವ ಕೀಲು-ನರಗಳೆಲ್ಲವೂ ಕೂಗಿದಂತಾಗಬಹುದು. ಆಗ ಒಮ್ಮೆಲೇ ಏಳುವ ನೋವುಗಳು, ಕಾಲು ಉರಿ, ತಲೆ ಉರಿ, ಕಾಲು ಕೈ ‘ಜುಂ’ ಎನ್ನುವುದು ನಿದ್ರೆ ಮಾಡದಂತೆ ಮಾಡಬಹುದು. ಮಹಿಳೆಗಿರುವ ಯಾವುದೇ ಆರೋಗ್ಯ ಸಮಸ್ಯೆಗಳಲ್ಲಿ ನಿದ್ರಾಹೀನತೆ ಒಂದು ಮುಖ್ಯ ಲಕ್ಷಣ ಎನ್ನುವುದು ಗಮನಾರ್ಹ. ಮಂಡಿನೋವು-ತಲೆ ನೋವು-ಪಾದ ಉರಿ-ಬೆನ್ನು ನೋವು - ಈ ಎಲ್ಲದರಲ್ಲೂ ಮಹಿಳೆ ಸೇರಿಸುವ ಮಾತು ‘‘ಉರಿ/ನೋವು ಎಷ್ಟೆಂದರೆ ನಾನು ನಿದ್ರೆ ಮಾಡದೇ ದಿನಗಳೇ ಆಗಿ ಹೋದವು ಡಾಕ್ಟ್ರೇ’.
ನಿದ್ರಾಹೀನತೆಯ ಬಗ್ಗೆ ಮಹಿಳೆಯರಿಗೇ ಅನ್ವಯವಾಗುವಂತೆ ವಿಶೇಷವಾಗಿ ಗಮನಿಸಬೇಕಾದ್ದು ಏಕೆ?! ಆಧುನಿಕ ಅಧ್ಯಯನಗಳು ಒಟ್ಟು ಆರೋಗ್ಯಕ್ಕೆ ನಿದ್ರೆ ಒಂದು ಪ್ರಮುಖ ಅಂಶವೆಂದು ಗುರುತಿಸಿವೆ. ಅಂದರೆ ನಿದ್ರಾಹೀನತೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ಸೋಂಕು ರೋಗಗಳು, ಕ್ಯಾನ್ಸರ್-ಹೃದಯ ಸಂಬಂಧಿ ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇವು ಮಹಿಳೆಯರಲ್ಲಿ ಜೈವಿಕ ಕಾರಣಗಳಿಂದ ಮತ್ತಷ್ಟು ಹೆಚ್ಚು. ಜೊತೆಗೇ ಕೌಟುಂಬಿಕವಾಗಿ- ಸಾಮಾಜಿಕವಾಗಿ ಕೆಲವು ಬದಲಾವಣೆಗಳನ್ನು ನಮ್ಮದಾಗಿಸಿಕೊಂಡರೆ ಮಾತ್ರ- ಶಸ್ತ್ರ ಚಿಕಿತ್ಸೆಗಳಿಲ್ಲದೆ, ಆರೋಗ್ಯದ ಹಲವು ಸಮಸ್ಯೆಗಳನ್ನು ಮಹಿಳೆಯರಲ್ಲಿ ಸುಲಭವಾಗಿ ತಡೆಯಬಹುದು, ಇಲ್ಲವಾಗುವಂತೆ ಮಾಡಬಹುದು. ಇದಕ್ಕೆ ಸ್ವತಃ ಮಹಿಳೆ ತನ್ನ ಸ್ವಕಲ್ಪಿತ ಧೋರಣೆ-ಪರಿಪೂರ್ಣತೆಗಳಿಂದ ಕಿಂಚಿತ್ತಾದರೂ ಹೊರಬರುವ ಪ್ರಯತ್ನ ಮಾಡುವುದು ಅತ್ಯವಶ್ಯ.
ಆರೋಗ್ಯಕರವಾದ -ಆಳವಾದ ನಿದ್ರೆಗಾಗಿ ಹೀಗೆ ಯೋಚಿಸಿ-ಯೋಜಿಸಿ -ಪಾಲಿಸಿ. ಪ್ರತಿದಿನ ರಾತ್ರಿ 8 ಗಂಟೆಗಳ ನಿದ್ರೆ ‘ಲಕ್ಸುರಿ’ ಯಲ್ಲ. ಅದು ನಿಮ್ಮ ಅವಶ್ಯಕತೆ ಮತ್ತು ಹಕ್ಕು. ‘ರಾತ್ರಿ ಎಲ್ಲ ಕೆಲಸ ಮುಗಿಸಿಯೇ ನಿದ್ರೆ’ ಎಂಬ ಹಠ ಬೇಡವೇ ಬೇಡ. ‘ನಿರ್ದಿಷ್ಟ ವೇಳೆಗೆ ನಿದ್ರೆ’ ಎನ್ನುವುದೇ ಸರಿ. ಹಸಿವಿನಲ್ಲಿ ಏರುಪೇರು ಹೇಗೆ ಸಾಧ್ಯವೋ ಹಾಗೆಯೇ ನಿದ್ರೆಯಲ್ಲಿಯೂ ಏರುಪೇರು ಸಾಧ್ಯ. ಆದರೆ ಎರಡು ವಾರಗಳ ಕಾಲ ಸತತವಾಗಿ ನಿದ್ರೆ ನಿಮಗೆ ಸರಿಯಾಗಿ ಬರುತ್ತಿಲ್ಲ ಎಂದಾದರೆ ನೀವು ನಿಮ್ಮ ಒತ್ತಡದ ಬಗ್ಗೆ, ಖಿನ್ನತೆ ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಮನೋವೈದ್ಯರನ್ನು ಕಂಡು ಸಲಹೆ ಪಡೆಯಬೇಕು.
ನಿದ್ರಾ ಸ್ವಚ್ಛತೆಯ ನಿಯಮಗಳು
1) ಸ್ವಚ್ಛವಾದ ಮಲಗುವ ಪರಿಸರ; ಕಡಿಮೆ ತಾಪಮಾನ-ತಂಪು ಎನ್ನುವ ಉಷ್ಣತೆ; ಕತ್ತಲು; ಬೆಳಕು-ಶಬ್ದ ಉಂಟುಮಾಡುವ ಸಾಧನಗಳಿಂದ ದೂರ; ರಾತ್ರಿಯ ಸರಳವಾದ ಊಟ; ನಾಳಿನ ಆತಂಕಗಳನ್ನು ಪಕ್ಕಕ್ಕಿಡುವುದು
2) ಬೆಳಗ್ಗೆ ಅಥವಾ ಸಾಯಂಕಾಲ ನಿದ್ರಾ ಸಮಯಕ್ಕೆ ಸಾಕಷ್ಟು ಮೊದಲು ಕನಿಷ್ಠ 30 ನಿಮಿಷಗಳ ರಭಸವಾದ, ಏದುಸಿರು ಬರುವ ದೈಹಿಕ ವ್ಯಾಯಾಮ ನಿದ್ರೆಗೆ ಸಹಕಾರಿ.
3) ನಿದ್ರೆ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ-ಕೆಲಸಕ್ಕೆ ತಡವಾಗುತ್ತದೆ ಎಂಬ ಆತಂಕ ಬೇಡ. ನಿದ್ರೆ ಸರಿಯಾಗಿ ಮಾಡುವುದು ಕೆಲಸವನ್ನು ಮಾಡುವ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ.