ಸತ್ತವರನ್ನು ಕನ್ನಡಿ ಮೂಲಕ ಸಂಪರ್ಕಿಸಲು ವಿಜ್ಞಾನಿಗಳ ಪ್ರಯೋಗ! 45 ನಿಮಿಷ ಕನ್ನಡಿ ನೋಡಿದವರಿಗೆ ಕಾದಿತ್ತು ಅಚ್ಚರಿ! Psychomanteum

ಸತ್ತ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ ಎಂಬ ಅನುಭವ ನಿಜಕ್ಕೂ ಉಂಟಾಗಬಹುದೇ? ಕಳೆದುಕೊಂಡ ಪ್ರೀತಿಪಾತ್ರರು ಮತ್ತೆ ನಮ್ಮ ಬಳಿ ಬಂದಂತೆ ಭಾಸವಾಗುವುದು ಕೇವಲ ಮನಸ್ಸಿನ ಕಲ್ಪನೆಯೇ ಅಥವಾ ಮೆದುಳಿನ ಯಾವುದಾದರೂ ವಿಚಿತ್ರ ಪ್ರಕ್ರಿಯೆಯೇ? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ವಿಜ್ಞಾನಿಗಳು ನಡೆಸಿದ ಪ್ರಯೋಗವೊಂದು ಈಗ ಗಮನ ಸೆಳೆದಿದೆ. ಸೈಕೋಮ್ಯಾಂಟಿಯಮ್ ಎಂಬ ವಿಶೇಷ ಕೊಠಡಿಯಲ್ಲಿ ವ್ಯಕ್ತಿಗಳನ್ನು ಕುಳ್ಳಿರಿಸಿ, ಕನ್ನಡಿಯನ್ನೇ ದೀರ್ಘಕಾಲ ನೋಡಿಸುವ ಮೂಲಕ ಅವರ ಅನುಭವಗಳನ್ನು ದಾಖಲಿಸಲಾಗಿದೆ. Psychomanteum
45 ನಿಮಿಷ ಕನ್ನಡಿ ನೋಡಿದವರಿಗೆ ಕಾದಿತ್ತು ಅಚ್ಚರಿ
45 ನಿಮಿಷ ಕನ್ನಡಿ ನೋಡಿದವರಿಗೆ ಕಾದಿತ್ತು ಅಚ್ಚರಿWEB
Published on: 

Psychomanteum: ಸತ್ತ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ ಎಂಬ ಅನುಭವ ನಿಜಕ್ಕೂ ಉಂಟಾಗಬಹುದೇ? ಕಳೆದುಕೊಂಡ ಪ್ರೀತಿಪಾತ್ರರು ಮತ್ತೆ ನಮ್ಮ ಬಳಿ ಬಂದಂತೆ ಭಾಸವಾಗುವುದು ಕೇವಲ ಮನಸ್ಸಿನ ಕಲ್ಪನೆಯೇ ಅಥವಾ ಮೆದುಳಿನ ಯಾವುದಾದರೂ ವಿಚಿತ್ರ ಪ್ರಕ್ರಿಯೆಯೇ? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ವಿಜ್ಞಾನಿಗಳು ನಡೆಸಿದ ಪ್ರಯೋಗವೊಂದು ಈಗ ಗಮನ ಸೆಳೆದಿದೆ. ಸೈಕೋಮ್ಯಾಂಟಿಯಮ್ ಎಂಬ ವಿಶೇಷ ಕೊಠಡಿಯಲ್ಲಿ ವ್ಯಕ್ತಿಗಳನ್ನು ಕುಳ್ಳಿರಿಸಿ, ಕನ್ನಡಿಯನ್ನೇ ದೀರ್ಘಕಾಲ ನೋಡಿಸುವ ಮೂಲಕ ಅವರ ಅನುಭವಗಳನ್ನು ದಾಖಲಿಸಲಾಗಿದೆ. ಪ್ರಯೋಗದಲ್ಲಿ ಕೆಲವರು ತಾವು ಕಳೆದುಕೊಂಡ ವ್ಯಕ್ತಿಯ ಇರುವಿಕೆಯನ್ನು ಸ್ಪಷ್ಟವಾಗಿ ಅನುಭವಿಸಿದ್ದಾಗಿ ಹೇಳಿದ್ದು, ಕೆಲವು ಘಟನೆಗಳು ಸಂಶೋಧಕರನ್ನೂ ಅಚ್ಚರಿಗೊಳಿಸಿವೆ.

ಕತ್ತಲ ಕೋಣೆಯಲ್ಲಿ ಏನಿತ್ತು?

ಈ ಪ್ರಯೋಗಕ್ಕಾಗಿ ಸಂಶೋಧಕರು ಸೈಕೋಮ್ಯಾಂಟಿಯಮ್ ಎಂಬ ಸಣ್ಣ ಕೊಠಡಿಯನ್ನು ಸಿದ್ಧಪಡಿಸಿದ್ದರು. ಅದರ ಗೋಡೆಗಳು ಮತ್ತು ಮೇಲ್ಛಾವಣಿಗೆ ಕಪ್ಪು ವೆಲ್ವೆಟ್ ಬಟ್ಟೆ ಹೊದಿಸಲಾಗಿತ್ತು. ಒಳಗೆ ವಿಶ್ರಾಂತಿಗಾಗಿ ಕುರ್ಚಿ, ಎದುರಿಗೆ ಮುಖ ಕಾಣದಂತೆ ನಿರ್ದಿಷ್ಟ ಕೋನದಲ್ಲಿ ಇರಿಸಲಾದ ಕನ್ನಡಿ ಹಾಗೂ ಹಿಂಭಾಗದಲ್ಲಿ ಮಂದ ಬೆಳಕಿನ ದೀಪವಿತ್ತು. ಕೊಠಡಿಯ ವಾತಾವರಣ ಹೊರಗಿನ ಬೆಳಕು ಮತ್ತು ಶಬ್ದಗಳಿಂದ ಸಾಧ್ಯವಾದಷ್ಟು ಪ್ರತ್ಯೇಕವಾಗಿರುವಂತೆ ಮಾಡಲಾಗಿತ್ತು.

ಒಟ್ಟು 30 ಜನರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ 15 ಮಂದಿ ಸಿನೆಸ್ಥೇಷಿಯಾ ಎಂಬ ವಿಶೇಷ ಸಂವೇದನಾ ಗುಣ ಹೊಂದಿದ್ದರು. ಈ ಸ್ಥಿತಿಯಲ್ಲಿ ಕೆಲವರಿಗೆ ಅಕ್ಷರಗಳನ್ನು ನೋಡಿದಾಗ ಬಣ್ಣಗಳು ನೆನಪಾಗುವುದು, ಶಬ್ದಗಳನ್ನು ಬಣ್ಣಗಳೊಂದಿಗೆ ಸಂಬಂಧಿಸುವುದು ಸೇರಿದಂತೆ ಒಂದಕ್ಕಿಂತ ಹೆಚ್ಚು ಸಂವೇದನೆಗಳು ಪರಸ್ಪರ ಬೆಸೆದುಕೊಂಡಿರುತ್ತವೆ. ಉಳಿದ 15 ಮಂದಿ ಇಂತಹ ಗುಣ ಹೊಂದಿರದವರಾಗಿದ್ದರು. ಇವರಲ್ಲಿ ಕೆಲವರು ಈ ಹಿಂದೆಯೇ ದೆವ್ವ ಅಥವಾ ಅತೀಂದ್ರಿಯ ಅನುಭವಗಳನ್ನು ಹೊಂದಿದ್ದಾಗಿ ಹೇಳಿದ್ದರು.

ಇದನ್ನೂ ಓದಿ :ಡೇಟಿಂಗ್‌ನಲ್ಲಿ ಸೈಕೋಪಾಥ್‌ಗಳದ್ದೇ ಹವಾ: ಅಧ್ಯಯನದಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ! Psychopathic

ಸತ್ತವರ ನೆನಪಿನಲ್ಲಿ 15 ನಿಮಿಷ, ಕನ್ನಡಿಯ ಮುಂದೆ 45 ನಿಮಿಷ

ಪ್ರಯೋಗ ಆರಂಭಕ್ಕೂ ಮೊದಲು ಭಾಗವಹಿಸಿದವರಿಗೆ ತಾವು ಕಳೆದುಕೊಂಡ ವ್ಯಕ್ತಿಯನ್ನು 15 ನಿಮಿಷಗಳ ಕಾಲ ನೆನಪಿಸಿಕೊಳ್ಳಲು ಸೂಚಿಸಲಾಗಿತ್ತು. ಆ ವ್ಯಕ್ತಿಯ ಮುಖ, ಧ್ವನಿ, ನಡವಳಿಕೆ, ವ್ಯಕ್ತಿತ್ವ ಹಾಗೂ ಅವರೊಂದಿಗಿನ ನೆನಪುಗಳನ್ನು ಮನಸ್ಸಿನಲ್ಲಿ ಮರುಕಳಿಸಿಕೊಳ್ಳಬೇಕಿತ್ತು. ಬೇಕಿದ್ದರೆ ಫೋಟೋ ಅಥವಾ ಆ ವ್ಯಕ್ತಿಗೆ ಸಂಬಂಧಿಸಿದ ವಸ್ತುಗಳನ್ನು ಕೂಡ ತಮ್ಮೊಂದಿಗೆ ತರಬಹುದಿತ್ತು.

ನಂತರ ಮಂದ ಬೆಳಕಿನ ಕೋಣೆಯಲ್ಲಿ ಕನ್ನಡಿಯ ಮುಂದೆ ಸತತ 45 ನಿಮಿಷ ಕುಳಿತು ನೋಡಬೇಕಿತ್ತು. ಹೊರಗಿನ ಶಬ್ದಗಳು ಗಮನಕ್ಕೆ ಬಾರದಂತೆ ಪಿಂಕ್ ನಾಯ್ಸ್ ಎಂಬ ಹಿನ್ನೆಲೆ ಧ್ವನಿಯನ್ನು ಬಳಸಲಾಗಿತ್ತು. ಯಾರಾದರೂ ತಮ್ಮ ಸುತ್ತ ವ್ಯಕ್ತಿಯ ಇರುವಿಕೆಯನ್ನು ಅನುಭವಿಸಿದರೆ ಅಥವಾ ತೀವ್ರ ದೃಶ್ಯ ಕಲ್ಪನೆ ಮೂಡಿದರೆ, ತಕ್ಷಣ ಬಟನ್ ಒತ್ತುವಂತೆ ಸೂಚಿಸಲಾಗಿತ್ತು. ಪ್ರಯೋಗ ಮುಗಿದ ಬಳಿಕ ತಮ್ಮ ಅನುಭವ ಎಷ್ಟು ಸ್ಪಷ್ಟವಾಗಿತ್ತು, ನಿಜವಾಗಿ ನಡೆದಂತೆ ಭಾಸವಾಗಿತ್ತೇ, ಆ ಅನುಭವ ತಮ್ಮ ಸುತ್ತ ಎಷ್ಟು ಜಾಗವನ್ನು ಆವರಿಸಿದಂತೆ ಅನಿಸಿತು ಎಂಬುದನ್ನು ಭಾಗವಹಿಸಿದವರು ದಾಖಲಿಸಿದರು.

ಅಚ್ಚರಿಯ ಸಂಗತಿಯೆಂದರೆ, 30 ಜನರಲ್ಲಿ 24 ಮಂದಿ ತಮ್ಮ ಬಳಿ ಯಾರೋ ಇದ್ದಂತೆ ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಕೆಲವರಿಗೆ ಸತ್ತ ವ್ಯಕ್ತಿಯ ಧ್ವನಿ ಕೇಳಿದಂತೆ, ಕೆಲವರಿಗೆ ವಾಸನೆ ಬಂದಂತೆ, ಮತ್ತೆ ಕೆಲವರಿಗೆ ದೇಹದ ಮೇಲೆ ಸ್ಪರ್ಶವಾದಂತೆ ಭಾಸವಾಗಿತ್ತು. ಒಬ್ಬ ಮಹಿಳೆ ತನ್ನ ಮೃತ ಪ್ರೀತಿಪಾತ್ರರು ಕೂದಲನ್ನು ಸವರಿದ ಅನುಭವವಾಯಿತು ಎಂದು ಹೇಳಿದ್ದು, ಈ ಘಟನೆ ತನಗೆ ಭಾವನಾತ್ಮಕವಾಗಿ ಬಹಳ ಮಹತ್ವದ್ದಾಗಿತ್ತು ಎಂದು ವಿವರಿಸಿದ್ದಾಳೆ.

ದೆವ್ವ ಕಂಡವರಿಗೂ, ವಿಶೇಷ ಸಂವೇದನೆ ಹೊಂದಿದವರಿಗೂ ಒಂದೇ ಅನುಭವ

ಸಿನೆಸ್ಥೇಷಿಯಾ ಹೊಂದಿರುವವರು ಇತರರಿಗಿಂತ ಹೆಚ್ಚು ವಿಚಿತ್ರ ಅನುಭವಗಳನ್ನು ವರದಿ ಮಾಡಬಹುದು ಎಂದು ಸಂಶೋಧಕರು ನಿರೀಕ್ಷಿಸಿದ್ದರು. ಆದರೆ ಪ್ರಯೋಗದಲ್ಲಿ ಈ ಎರಡು ಗುಂಪುಗಳ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ. ಬದಲಾಗಿ, ಹೆಚ್ಚು ಕಲ್ಪನಾಶಕ್ತಿಯನ್ನು ಹೊಂದಿರುವವರು ತಮ್ಮ ಅನುಭವಗಳು ಹೆಚ್ಚು ಸ್ಪಷ್ಟವಾಗಿದ್ದವು ಮತ್ತು ನಿಜವಾಗಿಯೂ ನಡೆದಂತೆ ಭಾಸವಾಗಿದ್ದವು ಎಂದು ಹೇಳಿದ್ದಾರೆ. ಆದರೆ ಕಲ್ಪನಾಶಕ್ತಿಯೇ ಈ ಅನುಭವಗಳಿಗೆ ಕಾರಣ ಎಂದು ವಿಜ್ಞಾನಿಗಳು ಖಚಿತಪಡಿಸಿಲ್ಲ.

ಪ್ರಯೋಗದ ವೇಳೆ ಕನ್ನಡಿಯ ಬಳಿ ಕಾಣಿಸಿಕೊಂಡ ಸಣ್ಣ ಬೆಳಕಿನ ಚುಕ್ಕೆಗಳು ಹಾಗೂ ವಿದ್ಯುತ್ಕಾಂತೀಯ ಬದಲಾವಣೆಗಳನ್ನೂ ಸಂಶೋಧಕರು ಗಮನಿಸಿದ್ದರು. ಕ್ಯಾಮೆರಾದಲ್ಲಿ ದಾಖಲಾದ ಚುಕ್ಕೆಗಳನ್ನು ಪರಿಶೀಲಿಸಿದಾಗ, ಅವು ವ್ಯಕ್ತಿಗಳು ಇಲ್ಲದ ಸಮಯದಲ್ಲೂ ಕಾಣಿಸಿಕೊಂಡಿರುವುದು ತಿಳಿದುಬಂದಿದೆ. ಧೂಳಿನ ಕಣಗಳು, ಗಾಳಿಯಲ್ಲಿ ತೇಲುವ ಕಣಗಳು ಅಥವಾ ಕನ್ನಡಿಯ ಸಣ್ಣ ಚಲನೆಗಳು ಇವುಗಳಿಗೆ ಕಾರಣವಾಗಿರಬಹುದು ಎಂದು ಪರಿಶೀಲಿಸಲಾಯಿತು. ಕೆಲವು ಚುಕ್ಕೆಗಳು ಕಾಣಿಸಿಕೊಂಡ ಸೆಷನ್‌ಗಳಲ್ಲಿ ವಿಚಿತ್ರ ಅನುಭವಗಳು ಹೆಚ್ಚಾಗಿ ವರದಿಯಾಗಿದ್ದರೂ, ಈ ಸಂಬಂಧ ಇನ್ನಷ್ಟು ಅಧ್ಯಯನದ ಅಗತ್ಯವಿದೆ.

ಈ ಸಂಶೋಧನೆ ಸತ್ತವರೊಂದಿಗೆ ಸಂಪರ್ಕ ಸಾಧ್ಯ ಎಂಬುದನ್ನು ಸಾಬೀತುಪಡಿಸಿಲ್ಲ. ಬದಲಾಗಿ, ನಮ್ಮ ನೆನಪುಗಳು, ಭಾವನೆಗಳು, ಕಲ್ಪನಾಶಕ್ತಿ ಹಾಗೂ ಸುತ್ತಮುತ್ತಲಿನ ವಾತಾವರಣ ಸೇರಿ ಯಾರೋ ನಮ್ಮ ಬಳಿ ಇದ್ದಾರೆ ಎಂಬ ತೀವ್ರ ಅನುಭವವನ್ನು ಸೃಷ್ಟಿಸಬಹುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.

ಈ ಅಧ್ಯಯನವನ್ನು Journal of Anomalous Experience and Cognition ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಸಣ್ಣ ಪ್ರಮಾಣದ ಪ್ರಯೋಗವಾಗಿರುವುದರಿಂದ, ಇದರ ಫಲಿತಾಂಶಗಳನ್ನು ದೃಢಪಡಿಸಲು ದೊಡ್ಡ ಮಟ್ಟದ ಸಂಶೋಧನೆಗಳ ಅಗತ್ಯವಿದೆ. ಆದರೂ 45 ನಿಮಿಷ ಕನ್ನಡಿಯನ್ನೇ ನೋಡಿದಾಗ 30 ಜನರಲ್ಲಿ 24 ಮಂದಿಗೆ ಯಾರೋ ತಮ್ಮ ಸುತ್ತ ಇದ್ದಾರೆ ಎಂಬ ಅನುಭವವಾಗಿದ್ದು, ಮಾನವನ ಮನಸ್ಸು ಮತ್ತು ಗ್ರಹಿಕೆ ಎಷ್ಟು ವಿಚಿತ್ರವಾಗಿ ಕಾರ್ಯನಿರ್ವಹಿಸಬಹುದು ಎಂಬ ಕುತೂಹಲವನ್ನು ಹುಟ್ಟಿಸಿದೆ.