Psychopathic: ಮೊದಲ ಭೇಟಿಯಲ್ಲೇ ಕೆಲವರು ನಮ್ಮ ಮನಸ್ಸನ್ನು ಗೆದ್ದುಬಿಡುತ್ತಾರೆ. ಅವರ ಮಾತಿನ ಶೈಲಿ, ಆತ್ಮವಿಶ್ವಾಸ, ನಗು, ಹಾಸ್ಯಪ್ರಜ್ಞೆ ಎಲ್ಲವೂ ನಮ್ಮನ್ನು ಆಕರ್ಷಿಸುತ್ತದೆ. ಮತ್ತೆ ಅವರನ್ನು ಭೇಟಿಯಾಗಬೇಕು ಎಂಬ ಆಸೆಯೂ ಮೂಡುತ್ತದೆ. ಆದರೆ ಇಂತಹ ಆಕರ್ಷಣೆಯ ಹಿಂದೆ ವ್ಯಕ್ತಿತ್ವದ ಕೆಲವು ವಿಚಿತ್ರ ಗುಣಲಕ್ಷಣಗಳು ಅಡಗಿರಬಹುದು ಎಂಬ ಅಚ್ಚರಿಯ ಸಂಗತಿ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಸೈಕೋಪಾಥಿಕ್ ಗುಣಲಕ್ಷಣ ಹಾಗೂ ಇತರರಿಗೆ ನೋವುಂಟುಮಾಡುವ ಪ್ರವೃತ್ತಿ ಹೊಂದಿರುವ ವ್ಯಕ್ತಿಗಳೂ ಮೊದಲ ಭೇಟಿಯಲ್ಲೇ ಹೆಚ್ಚು ಆಕರ್ಷಣೆ ಗಳಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಜರ್ನಲ್ ಆಪ್ ರೀಸರ್ಚ್ ಇನ್ ಪರ್ಸ್ನಾಲಿಟಿ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ 129 ಮಂದಿ ಭಾಗವಹಿಸಿದ್ದು, ಎಂಟು ಸ್ಪೀಡ್ ಡೇಟಿಂಗ್ ಕಾರ್ಯಕ್ರಮಗಳಲ್ಲಿ ಒಟ್ಟು 561 ಮೂರು ನಿಮಿಷಗಳ ಭೇಟಿಗಳನ್ನು ನಡೆಸಲಾಯಿತು. ಪ್ರತಿ ಭೇಟಿಯ ಬಳಿಕ ಭಾಗವಹಿಸಿದವರು ಎದುರಿನ ವ್ಯಕ್ತಿಯ ವ್ಯಕ್ತಿತ್ವ, ದೈಹಿಕ ಆಕರ್ಷಣೆ, ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ದಯೆ ಹಾಗೂ ಆತ್ಮವಿಶ್ವಾಸವನ್ನು ಮೌಲ್ಯಮಾಪನ ಮಾಡಿದರು. ಅಲ್ಲದೆ, ಮತ್ತೆ ಆ ವ್ಯಕ್ತಿಯನ್ನು ಭೇಟಿಯಾಗಲು ಇಷ್ಟವಿದೆಯೇ ಎಂಬುದನ್ನೂ ದಾಖಲಿಸಿದರು.
ಡೇಟಿಂಗ್ ಆರಂಭಕ್ಕೂ ಮುನ್ನ ಭಾಗವಹಿಸಿದವರಿಗೆ ಸೈಕೋಪಾಥಿ ಮತ್ತು ಸ್ಯಾಡಿಸಂ ಗುಣಲಕ್ಷಣಗಳನ್ನು ಅಳೆಯುವ ಮಾನಸಿಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರು ಎರಡನೇ ಭೇಟಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುವುದು ಕಂಡುಬಂದಿದೆ. ಸೈಕೋಪಾಥಿ ಗುಣಲಕ್ಷಣಗಳಲ್ಲಿ ಒಂದು ಹಂತದ ಹೆಚ್ಚಳವು ಎರಡನೇ ಡೇಟಿಂಗ್ಗೆ ಆಯ್ಕೆಯಾಗುವ ಸಾಧ್ಯತೆಯನ್ನು ಶೇ. 24.6 ಹೆಚ್ಚಿಸಿದರೆ, ಸ್ಯಾಡಿಸಂ ಗುಣಲಕ್ಷಣಗಳಲ್ಲಿ ಹೆಚ್ಚಳವು ಶೇ. 28.4ರಷ್ಟು ಸಾಧ್ಯತೆಯನ್ನು ಹೆಚ್ಚಿಸಿತ್ತು. ಆದರೂ ದೈಹಿಕ ಆಕರ್ಷಣೆ ಎರಡನೇ ಭೇಟಿಗೆ ಆಯ್ಕೆಯಾಗುವಲ್ಲಿ ಇದಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ಪ್ರಭಾವ ಬೀರಿತ್ತು.
ಇಂತಹ ವ್ಯಕ್ತಿಗಳು ಮೊದಲ ಭೇಟಿಯಲ್ಲಿ ಆಕರ್ಷಕವಾಗಿ ಕಾಣಲು ಅವರ ಆತ್ಮವಿಶ್ವಾಸ, ಹಾಸ್ಯಪ್ರಜ್ಞೆ, ಮಾತಿನ ಚಾತುರ್ಯ ಹಾಗೂ ಆತಂಕವನ್ನು ಕಡಿಮೆ ಅನುಭವಿಸುವ ಗುಣಗಳು ಕಾರಣವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಮೂರು ನಿಮಿಷಗಳ ಭೇಟಿಯಲ್ಲಿ ಅವರ ನಕಾರಾತ್ಮಕ ಗುಣಗಳು ಹೊರಬರದೇ, ಧೈರ್ಯಶಾಲಿ, ಬೆರೆಯುವ ಸ್ವಭಾವ ಹಾಗೂ ಮೋಜಿನ ವ್ಯಕ್ತಿತ್ವವೇ ಎದುರಿನವರಿಗೆ ಹೆಚ್ಚು ಇಷ್ಟವಾಗಬಹುದು.
ಆದರೆ ಮೊದಲ ಭೇಟಿಯಲ್ಲಿ ಮೂಡುವ ಆಕರ್ಷಣೆ ದೀರ್ಘಕಾಲದ ಪ್ರೇಮ ಸಂಬಂಧಕ್ಕೆ ಖಾತರಿಯಲ್ಲ. ಇಂತಹ ವ್ಯಕ್ತಿತ್ವ ಗುಣಗಳನ್ನು ಹೊಂದಿರುವವರ ಸಂಬಂಧಗಳಲ್ಲಿ ಮುಂದೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮೊದಲ ಭೇಟಿಯಲ್ಲೇ ಯಾರಾದರೂ ಮನಸ್ಸು ಗೆದ್ದರೂ, ಅವರ ನಿಜವಾದ ಸ್ವಭಾವವನ್ನು ತಿಳಿಯಲು ಸಮಯ ಮತ್ತು ಅವರ ನಡವಳಿಕೆಯನ್ನು ಗಮನಿಸುವುದು ಮುಖ್ಯ ಎಂಬುದನ್ನು ಈ ಅಧ್ಯಯನ ಸೂಚಿಸುತ್ತದೆ. ( ಏಜೇನ್ಸಿಸ್)