Human Mind: ರಸ್ತೆಯಲ್ಲಿ ಇಬ್ಬರು ಜೋರಾಗಿ ಜಗಳವಾಡುತ್ತಿದ್ದರೆ ಸಾಕು, ಅಕ್ಕಪಕ್ಕದ ಜನರೆಲ್ಲಾ ಅಲ್ಲೇ ಬಂದು ಸೇರುತ್ತಾರೆ. ಕೆಲವರು ತಮ್ಮ ಕೆಲಸ ಬಿಟ್ಟು ಜಗಳ ನೋಡಲು ನಿಲ್ಲುತ್ತಾರೆ. ಜಗಳ ಜೋರಾದಷ್ಟೂ ನೋಡುಗರ ಕುತೂಹಲ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಕೆಲವರು ಜಗಳವಾಡುವವರ ಕೋಪ, ಅವಮಾನ ನೋಡಿ ಒಳಗೊಳಗೇ ಖುಷಿಪಡುತ್ತಾರೆ. ಅಸಲಿಗೆ ಬೇರೆಯವರ ಜಗಳ ನೋಡಲು ಜನ ಯಾಕೆ ಇಷ್ಟೊಂದು ಆಸಕ್ತಿ ತೋರಿಸುತ್ತಾರೆ? ಇದರ ಹಿಂದೆ ಇರೋ ಮನಸ್ಸಿನ ಆಟ ಏನು?
ಮನಃಶಾಸ್ತ್ರದಲ್ಲಿ ಇದಕ್ಕೆ 'ಶಾಡನ್ಫ್ರಾಯ್ಡೆ' (Schadenfreude) ಅಂತಾರೆ. ಅಂದರೆ ಬೇರೆಯವರು ಕಷ್ಟಕ್ಕೆ ಸಿಲುಕಿದಾಗ, ಸೋತಾಗ ಅಥವಾ ಅವಮಾನಕ್ಕೊಳಗಾದಾಗ ಅದನ್ನು ನೋಡಿ ಖುಷಿಪಡುವ ಮನಸ್ಥಿತಿ.
ಕೆಲವೊಮ್ಮೆ ಅಸೂಯೆ, ಕೀಳರಿಮೆ ಮತ್ತು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವ ಗುಣ ಇದಕ್ಕೆ ಕಾರಣವಾಗಬಹುದು. ತಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದುಕೊಂಡ ವ್ಯಕ್ತಿ ಮುಜುಗರಕ್ಕೊಳಗಾದಾಗ ಕೆಲವರಿಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ. ಆದರೆ ಎಲ್ಲರೂ ಇದೇ ಕಾರಣಕ್ಕೆ ಜಗಳ ನೋಡುತ್ತಾರೆ ಎಂದೇನಿಲ್ಲ.
ಇದಕ್ಕೆ ಮತ್ತೊಂದು ಕಾರಣ 'ಮಾರ್ಬಿಡ್ ಕ್ಯೂರಿಯಾಸಿಟಿ' (Morbid Curiosity). ಅಂದರೆ ಅಪಾಯಕಾರಿ, ಆಘಾತಕಾರಿ ಅಥವಾ ಅಹಿತಕರ ಘಟನೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ.
ಸಾಮಾನ್ಯವಾಗಿ ನಡೆಯುವ ಘಟನೆಗಳಿಗಿಂತ ಅನಿರೀಕ್ಷಿತ ಘಟನೆಗಳು ನಮ್ಮ ಗಮನವನ್ನು ಬೇಗ ಸೆಳೆಯುತ್ತವೆ. ಯಾರಾದರೂ ರಸ್ತೆಯಲ್ಲಿ ಜೋರಾಗಿ ಕೂಗಾಡುತ್ತಿದ್ದರೆ ತಕ್ಷಣ ನಮ್ಮ ಗಮನ ಅತ್ತ ಹೋಗುತ್ತದೆ. ಯಾರು ತಪ್ಪು ಮಾಡಿದ್ದಾರೆ? ಯಾಕೆ ಜಗಳವಾಡುತ್ತಿದ್ದಾರೆ? ಮುಂದೆ ಏನಾಗಬಹುದು? ಅನ್ನೋ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ.
ಇಬ್ಬರು ಜಗಳವಾಡುತ್ತಿದ್ದರೆ ಸುತ್ತಲೂ ಹತ್ತಾರು ಜನ ನಿಂತು ನೋಡುತ್ತಿರುತ್ತಾರೆ. ಆದರೆ ಬಿಡಿಸಲು ಮಾತ್ರ ಕೆಲವೇ ಜನ ಮುಂದೆ ಬರುತ್ತಾರೆ. ಇದನ್ನು ಮನಃಶಾಸ್ತ್ರದಲ್ಲಿ 'ಬೈಸ್ಟ್ಯಾಂಡರ್ ಎಫೆಕ್ಟ್' (Bystander Effect) ಅಂತಾರೆ.
ಅಂದರೆ ಒಂದು ಘಟನೆ ನಡೆಯುವಾಗ ಸುತ್ತಲೂ ಸಾಕಷ್ಟು ಜನರಿದ್ದರೂ ಯಾರೂ ಸಹಾಯಕ್ಕೆ ಬರದಿರುವುದು. ಬೇರೆಯವರು ಮಧ್ಯಪ್ರವೇಶಿಸಬಹುದು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುವುದರಿಂದ ತಮ್ಮ ಜವಾಬ್ದಾರಿಯ ಭಾವನೆ ಕಡಿಮೆಯಾಗಬಹುದು.
ಕೆಲವರಿಗೆ ದಿನನಿತ್ಯದ ಒಂದೇ ರೀತಿಯ ಜೀವನದಿಂದ ಬೇಸರ ಬಂದಿರುತ್ತೆ. ಅಂಥವರಿಗೆ ರಸ್ತೆಯಲ್ಲಿ ಯಾರಾದರೂ ಜಗಳವಾಡುತ್ತಿದ್ದರೆ ಅದೇ ಒಂದು ಮನರಂಜನೆಯಾಗಿಬಿಡುತ್ತೆ. ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಕೊನೆಗೆ ಏನಾಗುತ್ತೆ ಅನ್ನೋ ಕುತೂಹಲಕ್ಕೆ ಅಲ್ಲೇ ನಿಂತುಬಿಡ್ತಾರೆ. ಇದು ಧಾರಾವಾಹಿ, ರಿಯಾಲಿಟಿ ಶೋ ನೋಡುವ ಆಸಕ್ತಿಯಂತೆಯೇ ಇರುತ್ತೆ. ಆದ್ರೆ ಜಗಳ ನೋಡುವ ಕುತೂಹಲ ಬೇರೆ, ಬೇರೆಯವರ ನೋವು ನೋಡಿ ಖುಷಿಪಡುವ ಮನಸ್ಥಿತಿ ಬೇರೆ.
ಸಾರ್ವಜನಿಕವಾಗಿ ಇಬ್ಬರು ಜಗಳವಾಡುತ್ತಿದ್ದಾರೆ ಎಂದರೆ ಅದರ ಹಿಂದೆ ಕೌಟುಂಬಿಕ ಸಮಸ್ಯೆ, ಆರ್ಥಿಕ ಒತ್ತಡ ಅಥವಾ ವೈಯಕ್ತಿಕ ನೋವು ಇರಬಹುದು. ಆದರೆ ಹೊರಗಿನಿಂದ ನೋಡುವವರಿಗೆ ಜಗಳದ ದೃಶ್ಯ ಮಾತ್ರ ಕಾಣಿಸುತ್ತದೆ. ಇಂತಹ ಸಮಯದಲ್ಲಿ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುಣ ಬಹಳ ಮುಖ್ಯ. ಇದನ್ನೇ 'ಅನುಭೂತಿ' (Empathy) ಎನ್ನುತ್ತಾರೆ.
ಬೇರೆಯವರ ಜಗಳ ನೋಡಲು ಕುತೂಹಲವಾಗುವುದು ಸಹಜ. ಆದರೆ ಅವರ ನೋವು, ಅವಮಾನದಲ್ಲಿ ಖುಷಿ ಹುಡುಕುವ ಮನಸ್ಥಿತಿಯ ಬಗ್ಗೆ ಒಮ್ಮೆ ಯೋಚಿಸಬೇಕಿದೆ. ನಮಗೆ ಕೆಲ ನಿಮಿಷಗಳ ಮನರಂಜನೆಯಾಗಿ ಕಾಣುವ ಜಗಳ, ಅದರಲ್ಲಿ ಭಾಗಿಯಾಗಿರುವವರಿಗೆ ದೊಡ್ಡ ನೋವಾಗಿರಬಹುದು.