

Red Eye: ಹವಾಮಾನ ಬದಲಾದಂತೆ ನಮ್ಮ ಆರೋಗ್ಯದ ಮೇಲೆಯೂ ಕೂಡ ಅವು ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಮಳೆಗಾಲ ಬಂತೆಂದರೆ ಹಲವಾರು ಕಾಯಿಲೆಗಳು ಬರುಹುದು ಸಹಜ. ಹಾಗೆಯೇ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗ ಎಂದರೆ ಮದ್ರಾಸ್ ಐ. ಕಾಂಜಂಕ್ಟಿವೈಟಿಸ್ ಎಂದು ಕರೆಯುವ ಈ ಕಾಯಿಲೆ ಕಣ್ಣಿನ ಬಿಳಿ ಭಾಗ ಮತ್ತು ಒಳಗಿನ ಕಣ್ಣುರೆಪ್ಪೆಗಳನ್ನು ಆವರಿಸುವ ಪಾರದರ್ಶಕ ಪೊರೆಯ ಕಾಂಜಂಕ್ಟಿವಾ ಉರಿಯೂತವಾಗಿದೆ. ಇದು ಬ್ಯಾಕ್ಟೀರಿಯಾ , ಸೋಂಕುಗಳು ಹಾಗೂ ಅಲರ್ಜಿಯ ಪ್ರತಿಕ್ರಿಯೆಗಳಿಂದ ಬರುತ್ತವೆ. ಹಾಗಾದ್ರೆ ಈ ಕಾಯಿಲೆಯ ಬಗ್ಗೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳೇನು? ಬಂದರೆ ಏನು ಮಾಡಬೇಕು ಎನ್ನುವ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಲಕ್ಷಣಗಳು
ಇದರ ಸಾಮಾನ್ಯ ಲಕ್ಷಣಗಳೆಂದರೆ ಕೆಂಪು, ನೋವು, ನೀರು ಅಥವಾ ಕೀವು ತುಂಬಿದ ಸ್ರಾವ ಮತ್ತು ಕಣ್ಣುಗಳಲ್ಲಿ ಒರಟಾದ ಸಂವೇದನೆ. ಕೆಲವು ವ್ಯಕ್ತಿಗಳು ಮಸುಕಾದ ದೃಷ್ಟಿ ಅಥವಾ ಬೆಳಕಿನ ಸಂವೇದನೆಯನ್ನು ಸಹ ಅನುಭವಿಸಬಹುದು. ಹೆಚ್ಚಿನ ಕಾಂಜಂಕ್ಟಿವಿಟಿಸ್ ಪ್ರಕರಣಗಳು ಒಂದು ವಾರದೊಳಗೆ ತಾವಾಗಿಯೇ ಗುಣವಾಗುತ್ತವೆ, ಆದರೆ ಕಾರಣವನ್ನು ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಮುನ್ನೆಚ್ಚರಿಕೆ ಕ್ರಮ
1. ಮಳೆಗಾಲದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
2. ಈ ಕಾಯಿಲೆ ಬಂದ ರೋಗಿಗಳು ತಮ್ಮ ಕಣ್ಣುಗಳನ್ನು ಮುಟ್ಟುವುದು ಅಥವಾ ಉಜ್ಜಿಕೊಳ್ಳುವುದನ್ನು ತಪ್ಪಿಸುವುದು.
3. ನಿಯಮಿತವಾಗಿ ಕೈ ತೊಳೆಯುವುದು ಮತ್ತು ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಡೆಯುವುದು ಒಳ್ಳೆಯದು .
4. ಹೊರಾಂಗಣದಲ್ಲಿ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವುದು.
ಈ ಕಾಯಿಲೆಗೆ ಸ್ವಯಂ-ಔಷಧಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಯಾಕೆಂದರೆ ಇದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಮಳೆಗಾಲದಲ್ಲಿ ಜಾಗರೂಕರಾಗಿ ನಮ್ಮ ಕಣ್ಣುಗಳನ್ನು ರಕ್ಷಿಸಬಹುದು ಮತ್ತು ಕಾಂಜಂಕ್ಟಿವಿಟಿಸ್ ಹರಡುವುದನ್ನು ತಡೆಯಬಹುದು. (ಏಜೆನ್ಸೀಸ್)