

ಬೆಂಗಳೂರು: ಯೋಗದ ಧನಾತ್ಮಕ ಪರಿಣಾಮಗಳು ಅನುಭವಕ್ಕೆ ಬಂದಿದ್ದರಿಂದಲೇ ಯೋಗ ಉಳಿದುಕೊಂಡು ಬಂದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಅವರು, ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಭಾನುವಾರ ಆನ್ಲೈನ್ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ನೂರು ವರ್ಷ ನಗುನಗುತ್ತ, ಶಕ್ತಿಯುತವಾಗಿ, ಆರೋಗ್ಯವಂತರಾಗಿ ಬಾಳಬೇಕು ಎಂಬುದು ನಮ್ಮ ವೇದಗಳ ಆಶಯ. ವಿಶ್ವದ ಮೂಲೆಮೂಲೆಗಳಲ್ಲಿ ಯೋಗದ ಅಭ್ಯಾಸ ನಡೆಯುತ್ತಿದೆ. ಎಲ್ಲ ಆಕ್ರಮಣಗಳ ವಿರುದ್ಧ ಜಯ ಸಾಧಿಸಿದ ಭಾರತದಲ್ಲಿ ಗುರು- ಶಿಷ್ಯ ಪರಂಪರೆ ಮೂಲಕ ಯೋಗವನ್ನು ಸಂರಕ್ಷಿಸಿಕೊಂಡು ಬಂದ ಎಲ್ಲ ಯೋಗ ಗುರುಗಳಿಗೆ ನಾವೆಲ್ಲ ಕೃತಜ್ಞರಾಗಿರಬೇಕು ಎಂದರು.
ಸಾವಿರಾರು ಮಂದಿ ವೀಕ್ಷಣೆ ರಾಷ್ಟ್ರೋತ್ಥಾನ ಪರಿಷತ್ನ ಫೇಸ್ಬುಕ್ ಪುಟದಲ್ಲಿ ಬೆಳಗ್ಗೆ 6.30ರಿಂದ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು. ರಾಜ್ಯಾದ್ಯಂತ ರಾಷ್ಟ್ರೆೊತ್ಥಾನ ಪರಿಷತ್ ಯೋಗ ಕೇಂದ್ರಗಳ ಯೋಗಾಸಕ್ತರು, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು, ಸಾರ್ವಜನಿಕರು ವೀಕ್ಷಣೆ ಮಾಡಿದರು. 10 ಸಾವಿರಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಯಿತು.
‘ಮನೆಮನೆಯಲ್ಲಿ ಯೋಗ, ಕುಟುಂಬದವರೊಂದಿಗೆ ಯೋಗ’ ಎಂಬ ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಯೋಗದ ಪ್ರಾರಂಭ ದಲ್ಲಿ ಓಂಕಾರ ಉಚ್ಛರಿಸುದನ್ನೂ ಕಡೆಗಣಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್, ನಮ್ಮ ಸಂಸ್ಕೃತಿ ಯನ್ನು ಆಧಾರವಾಗಿಸಿ ಯೋಗ ಪಸರಿಸುತ್ತಿರುವುದು ಹೆಮ್ಮೆಯ ವಿಚಾರ. ಯೋಗಾಭ್ಯಾಸದಿಂದ ಜೀವನದ ಗುಣಮಟ್ಟದಲ್ಲಿ ಉಂಟಾದ ಪರಿಣಾಮಗಳ ಅನುಭವ ದಲ್ಲೇ ಜನರಲ್ಲಿ ಯೋಗದ ವ್ಯಾಪ್ತಿ ಹೆಚ್ಚುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಶೀತಜ್ವರವಿದ್ದ 103 ಜನರಿಗೆ ಕರೊನಾ ಪಾಸಿಟಿವ್
ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಮಾತನಾಡಿ, ವ್ಯಕ್ತಿತ್ವ ನಿರ್ವಣಕ್ಕೆ ಯೋಗ ಬುನಾದಿಯಾಗಿದೆ. ಜೀವನಶೈಲಿಯ ಬದಲಾವಣೆ ಇದಕ್ಕೆ ಅತ್ಯವಶ್ಯಕ. ನಿರಂತರ ಯೋಗಾಭ್ಯಾಸದಿಂದ, ಕಾಯಿಲೆಗಳು ಬಾರದಂತೆ ತಡೆಯಬಹುದು ಎಂದು ವಿಜ್ಞಾನಿಗಳೂ ಹೇಳಿದ್ದಾರೆ. ಕರೊನಾದಂತಹ ಸೋಂಕುಗಳನ್ನೂ ಎದುರಿಸಲು ಸಹಕಾರಿ. ಪ್ರಾಣಾಯಾಮದಿಂದ ಉಸಿರಾಟ ಕ್ರಮಬದ್ಧಗೊಂಡು ಏಕಾಗ್ರತೆಗೆ ಸಹಕಾರಿಯಾಗುತ್ತದೆ ಎಂದರು. ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ ಸದಸ್ಯ ನಾರಾಯಣ್ ಉಪಸ್ಥಿತರಿದ್ದರು. ರಾಷ್ಟ್ರೋತ್ಥಾನ ಯೋಗ ಸಂಶೋಧನಾ ಕೇಂದ್ರ ನಿರ್ದೇಶಕ ನಾಗೇಂದ್ರ ಕಾಮತ್ ಯೋಗ, ಪ್ರಾಣಾಯಾಮ ನಡೆಸಿಕೊಟ್ಟರು.