ಮನೋಲ್ಲಾಸ| ಪರೋಪಕಾರ ಎಂಬ ಮಹಾಯಜ್ಞ

friendship
Published on
danny pirera
ಡ್ಯಾನಿ ಪಿರೇರಾ

ಅವರೊಬ್ಬ ಶ್ರದ್ಧಾವಂತ ದೈವಭಕ್ತ. ನಿತ್ಯ ಅಗ್ನಿಹೋತ್ರ, ಶಾಸ್ತ್ರೋಕ್ತವಾಗಿ ಅಗ್ನಿ ಉಪಾಸನೆ ಮತ್ತು ಬಹಳ ಶ್ರಮದಿಂದ ಸೋಮಯಾಗವನ್ನು ಮಾಡಿಕೊಂಡಿದ್ದರು. ಅದೊಂದು ದಿನ ಮಹಾರಾಜನ ಪ್ರತಿನಿಧಿಯೊಬ್ಬರು ಅವರ ಬಳಿ ಬಂದು- ‘ನಮ್ಮ ಮಹಾರಾಜರಿಗೆ ಮೃತ್ಯುಯೋಗವಿದೆ. ಅದಕ್ಕಾಗಿ ಸೂಕ್ತ ಪ್ರಾಯಶ್ಚಿತ್ತವಾಗಿ ಚಿನ್ನದ ಮೃತ್ಯುದೇವತೆಯನ್ನು ಮತ್ತು ಒಂದು ಮೂಟೆ ಎಳ್ಳನ್ನು ದಾನವಾಗಿ ನೀಡಬೇಕೆಂದು ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದಾರೆ. ಆದರೆ ದಾನ ಪಡೆಯಲು ಯಾವೊಬ್ಬ ಬ್ರಾಹ್ಮಣನೂ ಮುಂದೆ ಬರುತ್ತಿಲ್ಲ. ಹೀಗಾಗಿ ಮಹಾರಾಜರು ಚಿಂತಿತರಾಗಿದ್ದಾರೆ. ದಯಮಾಡಿ ತಾವು ಈ ದಾನವನ್ನು ಸ್ವೀಕರಿಸಿ ಉಪಕರಿಸಬೇಕು’ ಎಂದು ವಿನಂತಿಸಿದ.

ಭಕ್ತ ಇದಕ್ಕೆ ಒಪ್ಪಿದ. ನಿಗದಿಯಾದ ಆ ದಿನ ಪುರೋಹಿತರಿಂದ ಸಂಕಲ್ಪ ಹೇಳಿಸಿ ಮಹಾರಾಜ ಕೊಟ್ಟ ದಾನವನ್ನು ಪಡೆದ ಭಕ್ತ ಕೂಡಲೇ ಎಳ್ಳಿನ ಚೀಲವನ್ನು ಪುಷ್ಕರಣಿಗೆ ಸುರಿದು ಅದರೊಳಗಿದ್ದ ಮೀನುಗಳಿಗೆ ಎಳ್ಳಿನ ಊಟ ಮಾಡಿಸಿದ. ದಾನವಾಗಿ ಬಂದ ಸ್ವರ್ಣದ ಮೃತ್ಯುದೇವತೆಯ ಮೂರ್ತಿಯನ್ನು ಅಲ್ಲಿಗೆ ಬಂದ ಅಕ್ಕಸಾಲಿಗರಿಗೆ ಮಾರಿ ಬಂದ ಹಣವನ್ನೂ ನೆರೆದವರಿಗೆ ದಾನಮಾಡಿದಾಗ ಮಹಾರಾಜ ಆಶ್ಚರ್ಯಚಕಿತನಾದ.

ಆಗ ಆ ಭಕ್ತ ಹೇಳಿದ- ‘ಸ್ವಾಮಿ, ನನಗೆ ನಿನ್ನೆ ಕನಸಿನಲ್ಲಿ ಮೃತ್ಯುದೇವತೆಯ ದರ್ಶನವಾಯಿತು. ನಾನು ಸುಲಭವಾಗಿ ಮಹಾರಾಜರನ್ನು ಬಿಟ್ಟು ಹೋಗುವವಳಲ್ಲ. ನನಗೆ ನೀನು ಹಲವು ದಶಕಗಳಿಂದ ಮಾಡುತ್ತ ಬಂದಿರುವ ಅಗ್ನಿಹೋತ್ರದ ಪುಣ್ಯದ ಫಲ ಕೊಡಬೇಕೆಂದಾಗ ನಾನು ಸಾಧ್ಯವಿಲ್ಲವೆಂದೆ! ಹೋಗಲಿ, ಸೋಮಯಾಗದ ಫಲವಾದರೂ ಕೊಡು ಎಂದಿತು ಆ ದೇವತೆ. ಅದಕ್ಕೂ ನಾನು ಒಪ್ಪದಿದ್ದಾಗ, ನೀನು ಅಂದೊಮ್ಮೆ ನದಿಯೊಂದರಲ್ಲಿ ಮಿಂದು ಮಡಿಯುಟ್ಟು ಬರುವಾಗ ಮರದ ಬುಡದಲ್ಲಿ ಕುಳಿತು ಬೇಡುತ್ತಿದ್ದ ಹಸಿದ ಹೆಂಗಸೊಬ್ಬಳಿಗೆ ನೈವೇದ್ಯ ಮಾಡಿದ್ದ ಅನ್ನವನ್ನೇ ಕೊಟ್ಟಿದ್ದೆ. ಬಾಯಾರಿದ್ದ ಆಕೆಗೆ ನಿನ್ನ ತೀರ್ಥಪಾತ್ರೆಯಲ್ಲಿದ್ದ ನೀರನ್ನೇ ಕೊಟ್ಟಿದ್ದೆ. ಅದರ ಪುಣ್ಯದ ಫಲವಾದರೂ ಕೊಡು ಎಂದಾಗ, ಮರೆತೇ ಹೋಗಿದ್ದ ಆ ಘಟನೆಯ ನೆನಪಾಗಿ ಅದರ ಫಲವನ್ನು ಕೊಡಲು ನಾನು ಒಪ್ಪಿದೆ. ನಾನು ಐದು ದಶಕಗಳಿಂದ ಮಾಡಿದ್ದ ಶ್ರದ್ಧಾಕರ್ಮಕ್ಕೆ ಸಮನಾಗಿ ಆ ಹೆಂಗಸಿಗೆ ಕೊಟ್ಟ ಅನ್ನ, ನೀರು ಯಾವ ಪೂಜಾಕರ್ಮಕ್ಕೂ ಕಡಿಮೆಯಲ್ಲ ಎಂಬ ಸತ್ಯದ ಅರಿವು ನನಗಾಯ್ತು’ ಎಂದ ಆ ಭಕ್ತ ಮಹಾರಾಜರು ದೀರ್ಘಾಯುವಾಗಲಿ ಎಂದು ಹಾರೈಸಿ ಅಲ್ಲಿಂದ ನಡೆದೇ ಬಿಟ್ಟ.

ಹೌದು, ನಿಷ್ಕಪಟ, ಶಾಸ್ತ್ರಸಮ್ಮತ ಕರ್ಮಗಳನ್ನು ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಇದು ಸತ್ಯ. ಆದರೆ ಪರೋಪಕಾರ, ಸತ್ಪಾತ್ರರಿಗೆ ಮಾಡುವ ಸೇವೆ, ಸಹಾಯ ಮತ್ತು ದಾನ ಯಾವ ಯಜ್ಞಯಾಗಕ್ಕೂ ಕಡಿಮೆಯಲ್ಲ ಎನ್ನುವುದೇ ಇದರ ತಿರುಳು. ಕೇವಲ ಮೋಕ್ಷಪ್ರಾಪ್ತಿಯ ಉದ್ದೇಶಿತ ಪುಣ್ಯ ಸಂಪಾದನೆಯ ಆಲೋಚನೆ ಮಾಡದೆ ಅದರ ಲಾಭದ ಫಲ ದೀನ, ದುಃಖಿತರಿಗೂ ಸಿಗಬೇಕು ಎನ್ನುವ ಲೋಕಕಲ್ಯಾಣದ ಆಶಯ ಇಟ್ಟುಕೊಂಡು ಮಾಡುವ ಕಾರ್ಯ ಅದು ಭಗವಂತನಿಗೆ ಪ್ರಿಯವಾಗುತ್ತದೆ ಎಂಬುದು ಕಾಲಾತೀತ ಸತ್ಯ.

(ಲೇಖಕರು ಅಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net