ಮೊಬೈಲ್​ ಇಲ್ಲದೆ ಒಂದು ನಿಮಿಷವೂ ಸುಮ್ಮನಿರಲು ಸಾಧ್ಯವಾಗುತ್ತಿಲ್ಲವೇ? ಹಾಗಾದ್ರೆ ಈ ಕಾಯಿಲೆ ಬಂದಿರಬಹುದು! Nomophobia

Nomophobia
Published on

Nomophobia : ಪ್ರಸ್ತುತ ಯುಗದಲ್ಲಿ ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆಯು ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ನಮ್ಮಲ್ಲಿ ಅನೇಕರು ಬೆಳಗ್ಗೆ ಎದ್ದ ತಕ್ಷಣ ತಮ್ಮ ಮೊಬೈಲ್​ ಎಲ್ಲಿದೆ ಅಂತಾ ಹುಡುಕಾಡುತ್ತಾರೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್​ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್​ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್​ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ. ಅಂಗೈ ಗಾತ್ರದ ಒಂದು ಸಣ್ಣ ಮೊಬೈಲ್ ಇಂದು​ ಜಗತ್ತಿನ ನೆಮ್ಮದಿಯನ್ನೇ ನಾಶ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಅಂದಹಾಗೆ, ಫೋನ್ ಬಳಸುವ ಜನರು ವಿಭಿನ್ನ ಮನಸ್ಥಿತಿಯನ್ನು ಹೊಂದಿರುತ್ತಾರೆ. ಕೆಲವರು ಅಗತ್ಯವಿದ್ದಾಗ ಮಾತ್ರ ತಮ್ಮ ಫೋನ್‌ಗಳನ್ನು ಬಳಸಿದರೆ, ಇನ್ನು ಕೆಲವರು ಅನಗತ್ಯವಾಗಿ ಸಮಯ ವ್ಯರ್ಥ ಮಾಡಲು ಮೊಬೈಲ್​​ಗಳನ್ನು ಬಳಸುತ್ತಾರೆ. ಕೆಲವೊಂದಿಷ್ಟು ಮಂದಿಯಂತೂ ಫೋನ್‌ಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬಂತೆ ವರ್ತಿಸುತ್ತಾರೆ. ಕೆಲವರು ತಮ್ಮ ಫೋನ್‌ಗಳಿಲ್ಲದೆ ಕೇವಲ ಹತ್ತು ನಿಮಿಷಗಳನ್ನು ಸಹ ಕಳೆಯಲು ಸಾಧ್ಯವಿಲ್ಲ. ಈ ರೀತಿಯ ಫೋನ್ ವ್ಯಸನವನ್ನು ನೋಮೋಫೋಬಿಯಾ ಎಂದು ಕರೆಯಲಾಗುತ್ತದೆ. ಇದರಿಂದಾಗುವ ಹಾನಿಗಳು ಏನೆಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನೋಮೋಫೋಬಿಯಾ ಎಂದರೇನು?

ನೋಮೋಫೋಬಿಯಾ ಎಂದರೆ ಮೊಬೈಲ್ ಫೋನ್‌ಗಳಿಂದ ದೂರವಿರುವ ಭಯ. ಇದು ಒಂದು ಮಾನಸಿಕ ಸ್ಥಿತಿಯಾಗಿದೆ. ಇದು ಒಂದು ರೀತಿಯ ಆತಂಕದ ಕಾಯಿಲೆಯೂ ಹೌದು. ಈ ಸ್ಥಿತಿಯಿರುವ ಜನರು ತಮ್ಮ ಫೋನ್‌ಗಳ ಬ್ಯಾಟರಿ ಖಾಲಿಯಾದಾಗ, ಸೆಲ್ಯುಲಾರ್ ಕವರೇಜ್ ಅಂದರೆ ನೆಟ್​ವರ್ಕ್​ ಇಲ್ಲದಿದ್ದಾಗ ಅಥವಾ ತಮ್ಮ ಫೋನ್‌ಗಳನ್ನು ಕಳೆದುಕೊಂಡಾಗ ತೀವ್ರ ಆತಂಕವನ್ನು ಅನುಭವಿಸುತ್ತಾರೆ.

ಈ ಪದ ಎಲ್ಲಿಂದ ಬಂತು?

2008 ರಲ್ಲಿ ಯುಕೆ ಪೋಸ್ಟ್ ಆಫೀಸ್ ನಡೆಸಿದ ಅಧ್ಯಯನದಲ್ಲಿ ನೊಮೊಫೋಬಿಯಾವನ್ನು ಮೊದಲು ಬಳಸಲಾಯಿತು. 2100 ಕ್ಕೂ ಹೆಚ್ಚು ವಯಸ್ಕರ ಮಾದರಿಯನ್ನು ತೆಗೆದುಕೊಂಡ ಈ ಅಧ್ಯಯನವು ಶೇ. 53 ರಷ್ಟು ಜನರು ಈ ಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು ಕಂಡುಹಿಡಿದಿದೆ. ಅವರ ಭಯವು ಎಷ್ಟರ ಮಟ್ಟಿಗೆ ಇತ್ತೆಂದರೆ ಅವರ ಫೋನ್ ಅನ್ನು ಸ್ವಿಚ್​ ಆಫ್ ಮಾಡಲು ಕೂಡ ಅಸಾಧ್ಯವಾಗಿತ್ತು.

ಈ ಸಮಸ್ಯೆಯ ಲಕ್ಷಣಗಳು ಯಾವುವು?

* ಫೋನ್ ಅನ್ನು ಸ್ವಿಚ್​ ಆಫ್ ಮಾಡಲು ಸಾಧ್ಯವಾಗದಿರುವುದು

* ಮಿಸ್ಡ್ ಕಾಲ್‌ಗಳು, ಸಂದೇಶಗಳು ಅಥವಾ ಇಮೇಲ್‌ಗಳನ್ನು ನೋಡಲು ಫೋನ್ ಅನ್ನು ಪದೇಪದೆ ಪರಿಶೀಲಿಸುವುದು

* ಇಂಟರ್ನೆಟ್‌ ಕಡಿತಗೊಂಡಾಗ ಅದರ ಬಗ್ಗೆ ಹೆಚ್ಚು ಚಿಂತಿಸುವುದು

* ಫೋನ್​ ಇಲ್ಲದೇ ಇದ್ದಾಗ ಉಸಿರಾಟದ ತೊಂದರೆಗಳು, ಹೆಚ್ಚಿದ ಹೃದಯ ಬಡಿತ ಮತ್ತು ಅತಿಯಾದ ಬೆವರುವಿಕೆ ಅನುಭವಿಸಬಹುದು ಕೂಡ ರೋಗದ ಲಕ್ಷಗಳಾಗಿವೆ

* ತೀವ್ರತರವಾದ ಪ್ರಕರಣಗಳಲ್ಲಿ, ಇದು ಪ್ಯಾನಿಕ್ ಅಟ್ಯಾಕ್‌ಗಳಿಗೆ ಕಾರಣವಾಗಬಹುದು

ನೋಮೋಫೋಬಿಯಾಕ್ಕೆ ಕಾರಣವೇನು?

ಅಗತ್ಯಕ್ಕಿಂತ ಹೆಚ್ಚು ಫೋನ್ ಬಳಸುವುದೇ ಈ ರೋಗಕ್ಕೆ ಮುಖ್ಯ ಕಾರಣ. ನಮ್ಮ ಅಗತ್ಯಗಳಿಗೆ ಫೋನ್ ಬೇಕು ನಿಜ ಆದರೆ, ಫೋನ್​ ನಮ್ಮ ಜಗತ್ತು ಆಗಬಾರದು. ಊಟ ಮಾಡುವಾಗ, ಕೆಲಸ ಮಾಡುವಾಗ, ನಿದ್ರೆಗೆ ಜಾರುವ ಮುನ್ನ, ಶೌಚಾಲಯದಲ್ಲಿ ಕುಳಿತಿರುವಾಗ, ಪ್ರಯಾಣ ಮಾಡುವಾಗ, ಎಲ್ಲಾ ಕಡೆ ಫೋನ್​ನಲ್ಲೇ ಮುಳುಗಿರುತ್ತಾರೆ. ಅಕ್ಷರಶಃ ವಾಸ್ತವ ಜಗತ್ತಿನಿಂದ ಬೇರ್ಪಟ್ಟು ಕಲ್ಪನಾಲೋಕದಲ್ಲಿ ಸಂಚರಿಸುತ್ತಾರೆ. ಆದರೆ, ಇದು ಒಳ್ಳೆಯ ಮಾರ್ಗವಲ್ಲ. ನಾವು ಫೋನ್ ಅನ್ನು ಹೆಚ್ಚು ಅವಲಂಬಿಸಬಾರದು.

ಹೇಗೆ ನಿಯಂತ್ರಿಸಬಹುದು?

ನೀವು ನೋಮೋಫೋಬಿಯಾದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಮತ್ತು ಅದು ನಿಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದರೆ, ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡುವುದು ಒಳ್ಳೆಯದು. ಈ ಸ್ಥಿತಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದಾಗ್ಯೂ, ನಿಮ್ಮ ಚಿಕಿತ್ಸಕರು ನಿಮ್ಮ ರೋಗಲಕ್ಷಣಗಳನ್ನು ಪರಿಹರಿಸಲು ಸಹಾಯ ಮಾಡಲು ಎಕ್ಸ್‌ಪೋಸರ್ ಥೆರಪಿ, ಅರಿವಿನ ವರ್ತನೆಯ ಚಿಕಿತ್ಸೆ ಅಥವಾ ಎರಡನ್ನೂ ಶಿಫಾರಸು ಮಾಡಬಹುದು.

ಒಟ್ಟಾರೆ ನಿಮ್ಮ ಫೋನ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಫೋನ್ ಇಲ್ಲದೆ ಒಂದು ದಿನ ಕಳೆಯಲು ನನ್ನಿಂದ ಸಾಧ್ಯವಿದೆ ಎಂಬುದನ್ನು ಪಣತೊಡಿ. ನೀವು ಎಷ್ಟು ಯಶಸ್ವಿಯಾಗಿದ್ದೀರಿ ಎಂದು ಒಮ್ಮೆ ಪರಿಶೀಲಿಸಿ ನೋಡಿ. ನಿಮ್ಮ ಫೋನ್‌ನಿಂದ ದೂರವಾಗಿ ಏನಾದರೂ ಹೊಸದನ್ನು ಪ್ರಯತ್ನಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net