ರವಿಚಂದ್ರನ್​ ಅಶ್ವಿನ್ ಪ್ರತಿನಿಧಿಸುವ ವಿದೇಶಿ ಟಿ20 ಫ್ರಾಂಚೈಸಿ ಬಹಿರಂಗ: ಪಾಕ್​ ಬೌಲರ್​ ಜತೆ ಅಶ್ವಿನ್ ಬೌಲಿಂಗ್​! Ravichandran Ashwin

Ravichandran Ashwin
Published on

Ravichandran Ashwin : ಅಂತಾರಾಷ್ಟ್ರೀಯ ಕ್ರಿಕೆಟ್​ ಮತ್ತು ಐಪಿಎಲ್​ಗೆ ನಿವೃತ್ತಿ ಘೋಷಣೆ ಮಾಡಿರುವ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ವಿದೇಶಿ ಲೀಗ್‌ಗಳಲ್ಲಿ ಬ್ಯುಸಿಯಾಗಲು ಯೋಜನೆ ಹಾಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇದೀಗ ಒಂದು ಸ್ಪಷ್ಟತೆ ಸಿಕ್ಕಿದೆ.

ಕ್ರಿಕ್‌ಬಜ್​ನ ವರದಿಯ ಪ್ರಕಾರ, ಅಶ್ವಿನ್ ಅವರು ಈ ವರ್ಷ ಅಂತಾರಾಷ್ಟ್ರೀಯ ಟಿ20 ಲೀಗ್ (ಐಎಲ್​ಟಿ20) ಮತ್ತು ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಆಡಲಿದ್ದಾರೆ. ಆರಂಭದಲ್ಲಿ ಅಶ್ವಿನ್ ಅವರು ಈ ಎರಡು ಲೀಗ್‌ಗಳಲ್ಲಿ ಒಂದರಲ್ಲಿ ಮಾತ್ರ ಆಡುತ್ತಾರೆ ಎಂಬ ವದಂತಿಗಳು ಇದ್ದವು. ಏಕೆಂದರೆ ಈ ಎರಡೂ ಲೀಗ್‌ಗಳ ವೇಳಾಪಟ್ಟಿಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಅಂತಾರರಾಷ್ಟ್ರೀಯ ಟಿ20 ಲೀಗ್ ಮುಂದಿನ ವರ್ಷ ಡಿಸೆಂಬರ್ 2 ರಿಂದ ಜನವರಿ 4 ರವರೆಗೆ ನಡೆಯಲಿದ್ದು, ಬಿಗ್ ಬ್ಯಾಷ್ ಲೀಗ್ ಮುಂದಿನ ವರ್ಷ ಡಿಸೆಂಬರ್ 14 ರಿಂದ ಜನವರಿ 25 ರವರೆಗೆ ನಡೆಯಲಿದೆ.

ಆದರೆ, ಈ ಎರಡೂ ಲೀಗ್‌ಗಳಲ್ಲಿ ಆಡಲು ನಿರ್ಧರಿಸಿರುವ ಅಶ್ವಿನ್, ಮೊದಲು ಐಎಲ್‌ಟಿ20 ಆಡಲಿದ್ದಾರೆ ಮತ್ತು ನಂತರ ಲಭ್ಯತೆಗೆ ಅನುಗುಣವಾಗಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಶ್ವಿನ್‌ಗೆ ಭಾರಿ ಬೇಡಿಕೆಯಿದ್ದು, ನಾಲ್ಕು ಫ್ರಾಂಚೈಸಿಗಳು ಅವರಿಗಾಗಿ ಪೈಪೋಟಿ ನಡೆಸುತ್ತಿವೆ. ಅವರಿಗೆ ಈಗಾಗಲೇ ಸಿಡ್ನಿ ಸಿಕ್ಸರ್ಸ್, ಸಿಡ್ನಿ ಥಂಡರ್, ಹೋಬಾರ್ಟ್ ಹರಿಕೇನ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಫ್ರಾಂಚೈಸಿಗಳಿಂದ ಆಫರ್‌ಗಳು ಬಂದಿವೆ. ಆದರೆ, ಸಿಡ್ನಿ ಥಂಡರ್ ತಂಡಕ್ಕೆ ಸೇರಲು ರವಿಚಂದ್ರನ್ ಅಶ್ವಿನ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಶ್ವಿನ್​ ಅವರು ಬಿಬಿಎಲ್​ನಲ್ಲಿ ಭಾಗವಹಿಸಿದ್ದೇ ಆದಲ್ಲಿ ಆಸ್ಟ್ರೇಲಿಯನ್ ಟಿ20 ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಮೊದಲ ಉನ್ನತ ಮಟ್ಟದ ಭಾರತೀಯ ಆಟಗಾರನಾಗಿ ಇತಿಹಾಸ ಬರೆಯಲಿದ್ದಾರೆ. ಅಶ್ವಿನ್ ಅವರ ಒಪ್ಪಂದದ ಬಗ್ಗೆ ಸಿಡ್ನಿ ಥಂಡರ್ ಈ ವಾರದ ಕೊನೆಯಲ್ಲಿ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ಐಎಲ್‌ಟಿ 20 ಟೂರ್ನಮೆಂಟ್‌ನಲ್ಲಿ ಅವರ ಬದ್ಧತೆಗಳು ಮುಗಿದ ನಂತರ, ಅನುಭವಿ ಸ್ಪಿನ್ನರ್ ಜನವರಿ 4ರ ನಂತರ ಥಂಡರ್ ಪರ ಆಡಲು ಲಭ್ಯವಿರುತ್ತಾರೆ ಎಂದು ಆಸ್ಟ್ರೇಲಿಯಾದ ಕೋಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟಾಡ್ ಗ್ರೀನ್‌ಬರ್ಗ್ ಈ ತಿಂಗಳ ಆರಂಭದಲ್ಲಿ ಅಶ್ವಿನ್ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ಬಗ್ಗೆ ಚರ್ಚಿಸಿದರು. ಅಶ್ವಿನ್ ಅವರು ಐಪಿಎಲ್‌ನಿಂದ ನಿವೃತ್ತರಾದ ನಂತರ ಈ ಅವಕಾಶ ಅವರಿಗೆ ಸಿಕ್ಕಿದೆ. ಈ ಒಪ್ಪಂದವು ಬಿಗ್ ಬ್ಯಾಷ್ ಲೀಗ್‌ಗೆ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಏಕೆಂದರೆ, ಭಾರತೀಯ ಆಟಗಾರರು ರಾಷ್ಟ್ರೀಯ ತಂಡ ಅಥವಾ ಐಪಿಎಲ್‌ನಲ್ಲಿ ಸಕ್ರಿಯರಾಗಿರುವಾಗ ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುತ್ತದೆ. ಆದರೆ, ಇದೀಗ ಅಶ್ವಿನ್​ ಅವರಿಗೆ ಯಾವುದೇ ಅತಡೆಗಳು ಇಲ್ಲದಿರುವುದರಿಂದ ಬಿಬಿಎಲ್​ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಬಿಬಿಎಲ್​ನಲ್ಲಿ ಅಶ್ವಿನ್ ಅವರ ಉಪಸ್ಥಿತಿಯು ಆಸ್ಟ್ರೇಲಿಯಾದ ಭಾರತೀಯ ವಲಸಿಗ ಸಮುದಾಯವನ್ನು ಆಕರ್ಷಿಸುವ ಮತ್ತು ಟಿವಿ ರೇಟಿಂಗ್ ಅನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ.

ಇನ್ನು ಈ ವರ್ಷದ ಬಿಬಿಎಲ್ ವಿದೇಶಿ ಆಟಗಾರರ ಡ್ರಾಫ್ಟ್‌ಗೆ ಅಶ್ವಿನ್ ನೋಂದಾಯಿಸದ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗಾಗಿ ವಿಶೇಷ ವಿನಾಯಿತಿ ನೀಡಬೇಕಾಗುತ್ತದೆ. 2022 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಜೊತೆಗಿನ ಕೊನೆಯ ಕ್ಷಣದ ಒಪ್ಪಂದಕ್ಕೆ ಮಾರ್ಟಿನ್ ಗುಪ್ಟಿಲ್ ಅವರಿಗೆ ನೀಡಲಾದ ವಿನಾಯಿತಿಯಂತೆಯೇ ಅಶ್ವಿನ್​ಗೆ ವಿನಾಯಿತಿ ನೀಡಬೇಕಾಗುತ್ತದೆ.

ಇನ್ನು ಅಶ್ವಿನ್ ಅವರು ಥಂಡರ್ ತಂಡಕ್ಕೆ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಹೇಗೆಂದರೆ, ಐಪಿಎಲ್‌ನಲ್ಲಿ 30.22 ಸರಾಸರಿಯಲ್ಲಿ 187 ವಿಕೆಟ್‌ಗಳನ್ನು ಪಡೆದು ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಅಶ್ವಿನ್​ ಭಾಜನರಾಗಿದ್ದಾರೆ. ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್, ಪಾಕಿಸ್ತಾನದ ಶದಾಬ್ ಖಾನ್ ಮತ್ತು ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ ಈಗಾಗಲೇ ಬಲಿಷ್ಠ ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ ಥಂಡರ್ ತಂಡವನ್ನು ಅಶ್ವಿನ್​ ಅವರು ಸೇರಲಿದ್ದಾರೆ. ಕ್ರಿಸ್ ಗ್ರೀನ್, ಟಾಮ್ ಆಂಡ್ರ್ಯೂಸ್ ಮತ್ತು ತನ್ವೀರ್ ಸಂಘ ಅವರೊಂದಿಗೆ ಅಶ್ವಿನ್​ ಸೇರ್ಪಡೆಗೊಳ್ಳುವುದರಿಂದ ಥಂಡರ್ ತಂಡದ ಸ್ಪಿನ್ ಬೌಲಿಂಗ್ ದಾಳಿ ವಿಶೇಷವಾಗಿ ಪ್ರಬಲವಾಗಲಿದೆ. ಸಿಡ್ನಿ ಶೋಗ್ರೌಂಡ್‌ನಲ್ಲಿ ಈ ಸ್ಪಿನ್​ ಸಂಯೋಜನೆಯು ವಿಶೇಷವಾಗಿ ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.

ಬಿಬಿಎಲ್ ಆಫರ್‌ಗಳ ನಂತರ, ಅಂತಾರಾಷ್ಟ್ರೀಯ ಟಿ20 ಲೀಗ್‌ನಲ್ಲೂ ಅಶ್ವಿನ್ ಅವರಿಗೆ ಹೆಚ್ಚಿನ ಬೇಡಿಕೆ ಇತ್ತು. ಮುಂಬರುವ ಋತುವಿನಲ್ಲಿ ಐಎಲ್‌ಟಿ20ಯಲ್ಲಿ ನೇರ ಪ್ರವೇಶ ಆಯ್ಕೆ ಇಲ್ಲದ ಕಾರಣ, ಅಕ್ಟೋಬರ್ 1 ರಂದು ನಡೆಯಲಿರುವ ಹರಾಜಿನಲ್ಲಿ ಭಾಗವಹಿಸಲು ಅಶ್ವಿನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಲೀಗ್‌ನಲ್ಲಿ ಯಾರಿಗೂ ನಿಗದಿಯಾಗಿಲ್ಲದ ಮೂಲ ಬೆಲೆಯನ್ನು ಅಶ್ವಿನ್‌ಗೆ ನಿಗದಿಪಡಿಸಲಾಗಿದೆ. ಅಶ್ವಿನ್‌ ಅವರ ಹರಾಜು ಭಾರತೀಯ ಕರೆನ್ಸಿಯಲ್ಲಿ 1.06 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಋತುವಿನಲ್ಲಿ ಯಾವುದೇ ಆಟಗಾರನಿಗೆ ಇಷ್ಟೊಂದು ಮೂಲ ಬೆಲೆ ಸಿಕ್ಕಿಲ್ಲ. ಇಷ್ಟು ಹೆಚ್ಚಿನ ಮೂಲ ಬೆಲೆಯೊಂದಿಗೆ, ಹರಾಜಿನಲ್ಲಿ ಅಶ್ವಿನ್​ ಅವರಿಗೆ ಹೆಚ್ಚಿನ ಬೆಲೆ ಸಿಗುವ ಅವಕಾಶವಿದೆ. ಈ ಲೀಗ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆ ಪಡೆದ ದಾಖಲೆ ಪಾಕಿಸ್ತಾನಿ ಆಟಗಾರ ಶಾಹೀನ್ ಅಫ್ರಿದಿ ಹೆಸರಿನಲ್ಲಿದೆ. ಆಫ್ರಿದಿಯನ್ನು ಡೆಸರ್ಟ್ ವೈಪರ್ಸ್ ತಂಡ 3.3 ಕೋಟಿ ರೂ.ಗೆ ಖರೀದಿಸಿತು. ಈ ಋತುವಿನ ಹರಾಜಿನಲ್ಲಿ ಅಶ್ವಿನ್ ಅವರು ಆಫ್ರಿದಿಯ ದಾಖಲೆಯನ್ನು ಮುರಿಯುವುದು ಖಚಿತ ಎನ್ನಲಾಗುತ್ತಿದೆ. ಐಎಲ್‌ಟಿ 20ಯು ಐಪಿಎಲ್ ನಂತರ ಅತಿ ಹೆಚ್ಚು ಸಂಭಾವನೆ ನೀಡುವ ಲೀಗ್ ಎಂದು ಪ್ರಸಿದ್ಧವಾಗಿದೆ.

ಇದೇ ಸಂದರ್ಭದಲ್ಲಿ ಅಶ್ವಿನ್ ತಮ್ಮ ILT20 ಮತ್ತು BBL ಬದ್ಧತೆಗಳ ನಂತರ USA ನಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಮತ್ತು UK ನಲ್ಲಿ ಹಂಡ್ರೆಡ್ ಲೀಗ್‌ಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net