ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದೇ ಆದ್ರೆ ಈ ಜನರು ಮಾತ್ರ ಅದನ್ನು ತಿನ್ನುವುದು ತುಂಬಾನೇ ಅಪಾಯಕಾರಿ! Papaya

Papaya
Published on

Papaya : ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಏಕೆಂದರೆ, ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿ ವೇಗವಾಗಿ ದುರ್ಬಲಗೊಳ್ಳುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದನ್ನು ತಡೆಯಲು, ನೀವು ಉತ್ತಮ ಆಹಾರವನ್ನು ಸೇವಿಸಬೇಕು. ಅಲ್ಲದೆ, ನಿಮ್ಮ ಜೀವನಶೈಲಿಯನ್ನೂ ಬದಲಾಯಿಸಿಕೊಳ್ಳಬೇಕು ಮತ್ತು ಶೀತ ವಾತಾವರಣದಿಂದ ದೂರವಿರಬೇಕು.

ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಶೀತ ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಅದೇನೇ ಇರಲಿ, ತಣ್ಣನೆಯ ವಾತಾವರಣದಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬೇಕೆಂದರೆ ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಇದು ದೇಹವನ್ನು ಹೈಡ್ರೇಟ್ ಮಾಡುವ ಸೂಪರ್ ಫುಡ್ ಆಗಿದೆ. ತಣ್ಣನೆಯ ವಾತಾವರಣದಲ್ಲಿ ಇದನ್ನು ತಿನ್ನುವುದರಿಂದ ದೇಹದಲ್ಲಿನ ನೀರಿನ ಕೊರತೆಯನ್ನು ಸರಿಪಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 200 ಗ್ರಾಂ ಪಪ್ಪಾಯಿಯನ್ನು ತಿಂದರೆ ದೇಹಕ್ಕೆ ಸಂಪೂರ್ಣ ಪೋಷಣೆ ದೊರೆಯುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಹಣ್ಣು ಪೋಷಕಾಂಶಗಳ ಕೊರತೆಯನ್ನು ಸರಿಪಡಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

ಈ ಪಪ್ಪಾಯಿ ಆರೋಗ್ಯ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಇದು ಎಲ್ಲರಿಗೂ ಒಳ್ಳೆಯದಲ್ಲ. ಕೆಲವರಿಗೆ ಪಪ್ಪಾಯಿ ತಿಂದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಯಾರು ಪಪ್ಪಾಯಿಯನ್ನು ತಿನ್ನಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೂತ್ರಪಿಂಡದ ಸಮಸ್ಯೆ

ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ, ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಪಪ್ಪಾಯಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ಸ್​ ದೊಡ್ಡದಾಗಬಹುದು. ಇದು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಅಲ್ಲದೆ, ಚಿಕಿತ್ಸೆ ನೀಡಲು ತುಂಬಾ ಕಷ್ಟಕರವಾಗಿರುತ್ತದೆ.

ಅಲರ್ಜಿಯ ಲಕ್ಷಣಗಳು

ನಿಮ್ಮ ದೇಹದಲ್ಲಿ ಯಾವುದೇ ಅಲರ್ಜಿ ಇದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿಕೊಳ್ಳಬಾರದು. ಪಪ್ಪಾಯಿಯಲ್ಲಿ ಕಂಡುಬರುವ ಕೈಟಿನೇಸ್ ಕಿಣ್ವವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಿಣ್ವದಿಂದಾಗಿ, ನಿಮಗೆ ಉಸಿರಾಟದ ತೊಂದರೆ ಅಥವಾ ಕೆಮ್ಮು ಉಂಟಾಗಬಹುದು.

ಗರ್ಭಿಣಿಯರು ತಪ್ಪಿಸಬೇಕು

ಗರ್ಭಿಣಿಯರು ಪಪ್ಪಾಯಿ ತಿನ್ನಬಾರದು ಏಕೆಂದರೆ ಪಪ್ಪಾಯಿಯಲ್ಲಿ ಕಂಡುಬರುವ ಲ್ಯಾಟೆಕ್ಸ್, ಗರ್ಭಾವಸ್ಥೆಯಲ್ಲಿ ತೊಡಕುಗಳನ್ನು ಉಂಟುಮಾಡಬಹುದು. ತಿನ್ನಲೂ ಬಯಕೆಯಾದರೆ, ವೈದ್ಯರ ಸಲಹೆಯ ಮೇರೆಗೆ ಅದನ್ನು ತಿನ್ನುವುದು ಉತ್ತಮ.

ಹೈಪೊಗ್ಲಿಸಿಮಿಯಾ

ಪಪ್ಪಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಅತಿ ಕಡಿಮೆ ಇರುವವರು ಪಪ್ಪಾಯಿ ಸೇವನೆ ಮಾಡಬಾರದು. ಮಾಡಿದರೆ, ನಡುಕ ಮತ್ತು ಹೃದಯ ಬಡಿತದ ಹೆಚ್ಚಳಕ್ಕೆ ಕಾರಣವಾಗಬಹುದು.

ಅನಿಯಮಿತ ಹೃದಯ ಬಡಿತ

ಪಪ್ಪಾಯಿಯಲ್ಲಿ ಅಲ್ಪ ಪ್ರಮಾಣದ ಸೈನೋಜೆನಿಕ್ ಗ್ಲೈಕೋಸೈಡ್‌ಗಳಿದ್ದು, ಇದು ಅನಿಯಮಿತ ಹೃದಯ ಬಡಿತದಿಂದ ಬಳಲುತ್ತಿರುವವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

ರಕ್ತ ತೆಳುಗೊಳಿಸುವ ಔಷಧಿಗಳು

ಪಪ್ಪಾಯಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡಬಹುದು, ಆದ್ದರಿಂದ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಜನರು ಅದನ್ನು ತಿನ್ನುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net