

ISPL : ಆಧುನಿಕ ಸ್ಪರ್ಶ ಪಡೆದ ಗ್ರಾಮೀಣ ಕ್ರೀಡೆಗಳಾದ ಖೋಖೋ, ಕಬಡ್ಡಿ ಸ್ಪರ್ಧೆಗಳ ಯಶಸ್ಸಿನ ನಂತರ ಗಲ್ಲಿ ಕ್ರಿಕೆಟ್ ಸಹ ವೃತಿಪರ ಕ್ರೀಡೆಯಾಗಿ ಹೊರಹೊಮ್ಮಿದೆ. ಬಹುನಿರೀಕ್ಷಿತ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟಿ10 (ಐಎಸ್ಪಿಎಲ್) ಎರಡನೇ ಆವೃತ್ತಿಗೆ ಭಾನುವಾರ ಅದ್ದೂರಿ ಚಾಲನೆ ದೊರೆಯಲಿದೆ. ಥಾಣೆಯ ದಾದೋಜಿ ಕೊಂಡದೇವ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೈಗರ್ಸ್ ಆಫ್ ಕೋಲ್ಕತ ಹಾಗೂ ರನ್ನರ್ ಅಪ್ ಮಾಝಿ ಮುಂಬೈ ತಂಡಗಳು ಸೆಣಸಲಿವೆ.
| ಗುರುರಾಜ್ ಬಿ.ಎಸ್. ಮುಂಬೈ
ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ನೋಡಿ ಟೆನಿಸ್ ಬಾಲ್ನಲ್ಲಿ ಕ್ರಿಕೆಟ್ ಭವಿಷ್ಯದ ಕನಸು ಕಂಡಿದ್ದ ಆಟಗಾರರಿಗೆ ಈ ಟೂರ್ನಿ ವೇದಿಕೆ ಎನಿಸಿದೆ. ಹಳ್ಳಿ, ನಗರದ ರಸ್ತೆಗಳಿಂದ ಐಎಸ್ಪಿಎಲ್ ಮಾದರಿಯಲ್ಲಿ ದೊಡ್ಡ ಕ್ರೀಡಾಂಗಣಕ್ಕೆ ಕಾಲಿಟ್ಟ ಗಲ್ಲಿ ಕ್ರಿಕೆಟ್ ಮೊದಲ ಆವೃತ್ತಿ ಭರ್ಜರಿ ಯಶಸ್ಸು ಕಂಡಿತ್ತು. ದಿಗ್ಗಜ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಬಿಸಿಸಿಐನ ಮಾಜಿ ಖಜಾಂಚಿ ಆಶಿಶ್ ಶೆಲಾರ್, ಮಿನಲ್ ಅಮೋಲ್ ಕಾಳೆ ಲೀಗ್ನ ಕೋರ್ ಕಮಿಟಿ ಸದಸ್ಯರಾಗಿದ್ದಾರೆ.
21 ದಿನ ಒಟ್ಟು 34 ಪಂದ್ಯಗಳು ನಡೆಯಲಿವೆ. ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೆವಿಎನ್, ಬೆಂಗಳೂರು ಸ್ಟ್ರೈಕರ್ಸ್ ತಂಡದ ಮಾಲೀಕರಾಗಿದ್ದಾರೆ. ಆಯ್ಕೆ ಟ್ರಯಲ್ಸ್ನಲ್ಲಿ ಆಯ್ಕೆಯಾದ ಆಟಗಾರರನ್ನು ಐಪಿಎಲ್ ಹರಾಜು ಪ್ರಕ್ರಿಯೆ ಮಾದರಿಯಲ್ಲಿ ಆರು ತಂಡಗಳು ಖರೀದಿಸಿವೆ. ಮುಂಬೈ ತಂಡದ ಅಭಿಷೇಕ್ ದಲ್ಲೋರ್ ( 20.50 ಲಕ್ಷ ರೂ.) ಟೂರ್ನಿಯ ದುಬಾರಿ ಆಟಗಾರ ಎನಿಸಿದರೆ, ಶ್ರೀನಗರ ತಂಡದ ಶಾರೀಕ್ ಯಾಸೀರ್ (15 ವರ್ಷ) ಕಿರಿಯ ಆಟಗಾರ ಎನಿಸಿದ್ದಾರೆ.
ತಲಾ 10 ಓವರ್ಗಳ ಪಂದ್ಯದ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಗಳು ಲೀಗ್ನಲ್ಲಿ ಎರಡು ಬಾರಿ ಎದುರಾಗಲಿವೆ. ಲೀಗ್ ಪಂದ್ಯದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಪ್ಲೇಆಫ್ಗೇರಲಿವೆ. ಫೆ.12ಕ್ಕೆ ಮೊದಲ ಕ್ವಾಲಿಫೈಯರ್, 13ಕ್ಕೆ ಎಲಿಮಿನೇಟರ್, 14ಕ್ಕೆ ಎರಡನೇ ಕ್ವಾಲಿಫೈಯರ್ ಹಾಗೂ 15ಕ್ಕೆ ಫೈನಲ್ ಪಂದ್ಯ ನಿಗಯಾಗಿದೆ.
ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ಜತೆಗೆ ಕೆಲ ಚಿತ್ರ ನಿರ್ಮಾಣ ಸಂಸ್ಥೆಗಳು ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ. ಹೃತಿಕ್ ರೋಷನ್, ಕೆವಿಎನ್ ಪ್ರೋಡಕ್ಷನ್ಸ್ (ಕೆವಿಎನ್ ಬೆಂಗಳೂರು ಸ್ಟ್ರೈಕರ್ಸ್), ಅಮಿತಾಭ್ ಬಚ್ಚನ್ (ಮಾಝಿ ಮುಂಬೈ), ಅಕ್ಷಯ್ ಕುಮಾರ್ (ಶ್ರೀನಗರ್ ಕೀ ವೀರ್), ಸೈಫ್ ಅಲಿ ಹಾಗೂ ಕರೀನಾ ಕಪೂರ್ ಖಾನ್ (ಟೈಗರ್ಸ್ ಆಫ್ ಕೋಲ್ಕತ), ರಾಮ್ ಚರಣ್ (ಫಾಲ್ಕನ್ ರೈಡರ್ಸ್ ಹೈದರಾಬಾದ್) ಹಾಗೂ ಸೂರ್ಯ (ಚೆನ್ನೈ ಸಿಂಗಮ್ಸ್) ಟೂರ್ನಿಯಲ್ಲಿ ಭಾಗವಹಿಸುವ ತಂಡಗಳನ್ನು ಖರೀದಿಸಿದ್ದಾರೆ.
ಚಾಂಪಿಯನ್ಸ್: 1 ಕೋಟಿ
ರನ್ನರ್ ಅಪ್: 50 ಲಕ್ಷ ರೂ.
ಮಾಝಿ ಮುಂಬೈ-ಟೈಗರ್ಸ್ ಆಫ್ ಕೋಲ್ಕತ
ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್