

ಎಚ್.ವಿ.ದೀಪಕ್ ನರಸಿಂಹ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರೀತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
ಸ್ಕಂದ, ಕುಮಾರ ಕಾರ್ತಿಕೇಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ. ಅಗ್ನಿಯ ದೇವತೆ ಎಂದೂ ಹೇಳುತ್ತಾರೆ. ಈ ದಿನ ಸಾಧಕನ ಮನಸ್ಸು ‘ವಿಶುದ್ಧ’ ಚಕ್ರದಲ್ಲಿ ನೆಲೆಸುತ್ತದೆ. ದೇವಿಯ ತೊಡೆಯಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಕುಳಿತಿರುತ್ತಾನೆ. ದೇವಿಯ ಎರಡು ಕೈಗಳಲ್ಲಿ ಕಮಲದ ಹೂವಿದ್ದು, ಶರೀರ ಬಿಳಿಯ ಬಣ್ಣದ್ದಾಗಿದೆ. ಐದನೇ ಚಕ್ರದ ಮಟ್ಟದಲ್ಲಿ ಸ್ವಯಂಜ್ಞಾನವು ಒಬ್ಬರ ಬೆಳವಣಿಗೆಯ ಪ್ರವೃತ್ತಿಗಳ ಆವಿಷ್ಕಾರವಾಗಿದೆ. ನೀವು ಆಂತರಿಕ ಸ್ವಾತಂತ್ರ್ಯ ಪಡೆಯುತ್ತೀರಿ ಮತ್ತು ಶುದ್ಧ, ಸ್ವತಂತ್ರ ಮನಸ್ಸನ್ನು ಪೂರ್ಣ ಬಲದಿಂದ ಹೊಳೆಯಲು ಅನುಮತಿಸುತ್ತೀರಿ. ನೀವು ಒಂದು ರೀತಿಯ ‘ಸಾರ್ವತ್ರಿಕವಾದಿ’ ಆಗುತ್ತೀರಿ, ಪ್ರತಿ ಧರ್ಮದಲ್ಲೂ ಮತ್ತು ಸಂಸ್ಕೃತಿಯ ಯಾವುದೇ ಅಭಿವ್ಯಕ್ತಿಯಲ್ಲಿಯೂ ಸೌಂದರ್ಯವನ್ನು ಗಮನಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಿ. ಐದನೇ ಚಕ್ರದ ಪ್ರಮುಖ ಆಸ್ತಿಯೆಂದರೆ ನಿಮ್ಮ ಆಂತರಿಕ ಧ್ವನಿಯ ಜಾಗೃತಿ, ನಿಮಗೆ ಸತ್ಯವನ್ನು ಹೇಳಲು ಸಾಧ್ಯವಾಗುತ್ತದೆ.
ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರಪ್ರದೇಶದ ವಾರಾಣಸಿಯಲ್ಲಿದೆ.
ಸ್ಕಂದ ಮಾತಾ ಕವಚ
ಐಂ ಬಿಜಾಲಿಂಕಾ ದೇವಿ ಪದ್ಯುಗ್ಮಧರಾಪರಾ
ಹೃದಯಂ ಪಾತು ಸ ದೇವಿ ಕಾರ್ತಿಕೇಯಾಯುತಾ
ಶ್ರೀ ಹ್ರೀಂ ಹೂಂ ಐಂ ದೇವೀ ಪರ್ವಸ್ಯಾ ಪಾತು ಸರ್ವದಾ
ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ
ವಾಣವಾಣಾಮೃತೇ ಹುಂ ಫಟ್ ಬಿಜಾ ಸಮಾನ್ವಿತಾ
ಉತ್ತರಸ್ಯಾ ತಥಾಗ್ರೇ ಚ ವಾರುಣೇ ನೈರುತೆ ಅವತು
ಇಂದ್ರಾಣಿ ಭೈರವೀ ಚೈವಾಸಿತಾಡಿ ಚ ಸಂಹಾರಿಣಿ
ಸರ್ವದಾ ಪಾತು ಮಾಂ ದೇವಿ ಚಾನ್ಯಾನ್ಯಾಸು ಹಿ ದೀಕ್ಷು ವೈ
ದೇವಿ ಸ್ಕಂದ ಮಾತ ಮಂತ್ರ: ಓಂ ದೇವಿ ಸ್ಕಂದಮಾತಾಯ ನಮಃ
ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಕೆಂಪುಗುಲಾಬಿ ಹೂವಿನಿಂದ ಪೂಜೆ ಮಾಡಿದರೆ ಮನಃಶುದ್ಧಿಯಾಗುವುದು. ದೇವಿ ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿ ಪಡೆಯುತ್ತಾರೆ, ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ. ದೇವಿಯ ಈ ರೂಪದ ಪೂಜೆಯಿಂದ ಸಾಧಕನಿಗೆ ಅಲೌಕಿಕ ತೇಜಸ್ಸು ಹಾಗೂ ಪ್ರಭೆ ಸಿಗುವುದರಿಂದ ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ.
ಇದನ್ನೂ ಓದಿ: 24ಕ್ಕೆ ಕೊಲ್ಲೂರು ದೇವಳ ದರ್ಶನ ನಿರ್ಬಂಧ
ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ ಐದನೆಯದ್ದು ‘ಅರ್ಚನೆ’. ಭಗವತ್ ಸ್ವರೂಪವನ್ನು ಶ್ರದ್ಧಾ-ಭಕ್ತಿಗಳಿಂದ ಪೂಜಿಸುವುದೇ ‘ಅರ್ಚನ ಭಕ್ತಿ’. ಭಗವಂತನು ದೇವಾಲಯಗಳಲ್ಲಿ ಆರ್ಚಾಸ್ವರೂಪದ ಮುಖಾಂತರ ದರ್ಶನವೀಯುವುದೆ ಅಲ್ಲದೆ, ಸದಾಚಾರ್ಯನ ಹೃದಯದಲ್ಲಿ, ಭಕ್ತನ ಆತ್ಮದಲ್ಲಿಯೂ ವಿರಾಜಮಾನನಾಗಿರುತ್ತಾನೆ. ಈ ಮೂರು ರೀತಿಗಳಲ್ಲಿರುವ ಭಗವತ್ ಸ್ವರೂಪವನ್ನು ಭಕ್ತನು ಗುರುತಿಸಿ, ತನಗೆ ಇಷ್ಟವಾದ ದೈವವನ್ನು ಭಕ್ತಿ, ಪ್ರಪತ್ತಿಗಳೊಂದಿಗೆ ಪ್ರತಿನಿತ್ಯವೂ ಪೂಜಿಸುವನು. ಭಕ್ತನು ಭಗವಂತನಿಗೆ ಮಾಡುವ ಎಲ್ಲ ರೀತಿಯ ಸೇವೆಗಳಲ್ಲಿಯೂ ಸ್ವಾರ್ಥದ ಸೋಂಕು ಇಲ್ಲದೆ, ತ್ಯಾಗವನ್ನು ಪ್ರದರ್ಶಿಸುವಂತಿರಬೇಕು.
ಇದನ್ನೂ ಓದಿ: ಶೃಂಗೇರಿ ಶಾರದೆಗೆ ಮಯೂರ ವಾಹನಾಲಂಕಾರ
ಮಾನಸಿಕವಾದ ಅರ್ಚನೆಯಲ್ಲಿ ಭಗವಂತನನ್ನು ಪೂಜಿಸುವುದು ಹಾಗೂ ಭಗವಂತನಿಗೆ ಆತ್ಮಸಮರ್ಪಣೆ ಮಾಡಿಕೊಳ್ಳುವುದು-ಅತಿ ಮುಖ್ಯ. ಇಂತಹ ಮಾನಸಿಕವಾದ ಅರ್ಚನೆಯಲ್ಲಿ ಬಾಹ್ಯ ಉಪಚಾರಗಳು ಅವಶ್ಯಕವಲ್ಲ. ಆದರೆ ಸ್ಥೂಲರೂಪದ ಅರ್ಚನೆಯಲ್ಲಿ ಅನೇಕ ಉಪಚಾರಗಳು ಅವಶ್ಯಕ.
(ಲೇಖಕರು ಆಧ್ಯಾತ್ಮಿಕ ಚಿಂತಕರು)