

ಅಪಸ್ಮಾರ (ಮೂರ್ಛೆ ರೋಗ) ಇದು ಮಿದುಳಿನ ತೀವ್ರ ಅಸ್ವಸ್ಥತೆಯಾಗಿದ್ದು, ಯಾವುದೇ ವಯಸ್ಸಿನವರಲ್ಲಿ ಸಂಭವಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ ಅಪಸ್ಮಾರವು ಸಾಮಾನ್ಯ ನರಸಂಬಂಧಿ ಆರೋಗ್ಯ ಸಮಸ್ಯೆಯಾಗಿದ್ದು, 2018ರ ಅಧ್ಯಯದ ಪ್ರಕಾರ ಜಗತ್ತಿನಲ್ಲಿ 7 ಕೋಟಿಗೂ ಅಧಿಕ ಮಂದಿ ಬಳಲುತ್ತಿದ್ದು, ಭಾರತದಲ್ಲಿ ಈ ಸಂಖ್ಯೆ 1.2 ಕೋಟಿಯಷ್ಟಿದೆ.
ಜಾಗತಿಕವಾಗಿ ಒಂದು ಸಾವಿರ ಜನರಲ್ಲಿ 5-9 ಮಂದಿ ಅಪಸ್ಮಾರಕ್ಕೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ವಿಶ್ಲೇಷಣೆ ಪ್ರಕಾರ ಜಾಗತಿಕ ರೋಗದ ಹೊರೆಯಲ್ಲಿ ಅಪಸ್ಮಾರ ಶೇ. 0.7 ಇದೆ. ಭಾರತದಲ್ಲಿ 8-12 ವರ್ಷ ವಯಸ್ಸಿನ ಮಕ್ಕಳಲ್ಲಿ ಅಪಸ್ಮಾರವು ವಿಶೇವಾಗಿ ಕಂಡುಬರುತ್ತಿದ್ದು, ಪ್ರತಿ ಒಂದು ಸಾವಿರ ಮಕ್ಕಳಲ್ಲಿ 22.2 ಹರಡುವಿಕೆಯ ಪ್ರಮಾಣವಿದೆ. ಈ ರೋಗದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 17ರಂದು ‘ರಾಷ್ಟ್ರೀಯ ಅಪಸ್ಮಾರ ದಿನ’ ಆಚರಿಸಲಾಗುತ್ತದೆ. ಅದೇ ರೀತಿ ಜಗತ್ತಿನಾದ್ಯಂತ ಫೆಬ್ರವರಿ 12ರಂದು ‘ಅಂತಾರಾಷ್ಟ್ರೀಯ ಅಪಸ್ಮಾರ ದಿನ’ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಇಂಟರ್ನ್ಯಾಷನಲ್ ಬ್ಯೂರೋ ಫಾರ್ ಎಪಿಲೆಪ್ಸಿ (ಐಬಿಇ) ಮತ್ತು ಇಂಟರ್ನ್ಯಾಷನಲ್ ಲೀಗ್ ಅಗೆನೆಸ್ಟ್ ಎಪಿಲೆಪ್ಸಿ (ಐಎಲ್ಎಇ) ಪ್ರತಿ ವರ್ಷ ಅಪಸ್ಮಾರ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.
ಅಪಸ್ಮಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅಪಸ್ಮಾರದೊಂದಿಗೆ ಬದುಕುತ್ತಿರುವವರು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಪರಿಹರಿಸಲು ರಾಷ್ಟ್ರೀಯ ಅಪಸ್ಮಾರ ದಿನ ಆಚರಿಸಲಾಗುತ್ತದೆ. ಎಪಿಲೆಪ್ಸಿ ಫೌಂಡೇಶನ್ ಇತರ ಗುಂಪುಗಳು ಹಾಗೂ ಆರೋಗ್ಯ ಸಂಸ್ಥೆಗಳೊಂದಿಗೆ ಸೇರಿ ಈ ದಿನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡುತ್ತಿವೆ. ಆ ಮೂಲಕ ಅಪಸ್ಮಾರದಿಂದ ಬಳಲುತ್ತಿರುವ ಜನರು ಆರೋಗ್ಯಕರ ಜೀವನ ನಡೆಸಲು ಮತ್ತು ಅಸ್ವಸ್ಥತೆಯ ಸುತ್ತಲಿನ ಕಳಂಕವನ್ನು ಕಡಿಮೆ ಮಾಡಲು, ಅಂತಹವರಿಗೆ ನೆರವಾಗಲು, ಸಂಪನ್ಮೂಲಗಳು ಮತ್ತು ಶಿಕ್ಷಣ ಒದಗಿಸುವ ಮೂಲಕ ಅಪಸ್ಮಾರ ಕುರಿತು ಇರುವ ತಪು್ಪ ಕಲ್ಪನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಶ್ರಮಿಸುತ್ತಿವೆ.
ಮಿದುಳಿನ ವಿದ್ಯುತ್ ಚಟುವಟಿಕೆಯಲ್ಲಿ ಆಗುವ ಸರಳ ವ್ಯತ್ಯಯವೇ ಅಪಸ್ಮಾರ. ಮಿದುಳಿಗೆ ಹಾನಿ ಮಾಡುವ ಹಲವು ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿ ಕೊಳ್ಳಬಹುದು. ಇದು ಚಯಾಪಚಯ ವ್ಯವಸ್ಥೆಯಲ್ಲಿನ ಸಮಸ್ಯೆ ಯಾಗಿದ್ದು, ಸೋಂಕು, ರಕ್ತನಾಳ ಸಮಸ್ಯೆ ಮತ್ತು ಮಿದುಳಿನ ಗಡ್ಡೆಯ ರೂಪದಲ್ಲಿಯೂ ತಲೆದೋರಬಹುದು. ಹಾಗಾಗಿ, ರೋಗಲಕ್ಷಣ ಕಂಡು ಬಂದ ವ್ಯಕ್ತಿಯನ್ನು ಕೂಡಲೇ ತಪಾಸಣೆಗೆ ಒಳಪಡಿಸಿ, ರೋಗ ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.
ಅಪಸ್ಮಾರ ವೈದ್ಯಕೀಯ ಇತಿಹಾಸ, ನರಸಂಬಂಧಿತ ಪರೀಕ್ಷೆಗಳು, ಇಇಜಿ ಮತ್ತು ಎಂಆರ್ಐ ಅಥವಾ ಸಿಟಿಸ್ಕಾ್ಯನ್ನಂತಹ ಇಮೇಜಿಂಗ್ ಪರೀಕ್ಷೆಗಳ ಮೂಲಕ ನಿರ್ಣಯಿಸಲಾಗುತ್ತದೆ.
ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಗಳನ್ನು ನೀಡುವುದರಿಂದ ಅಪಸ್ಮಾರ ನಿಯಂತ್ರಿಸಬಹುದು. ಈ ಸಮಸ್ಯೆಗೆ ತುತ್ತಾದವರು ನಿಗದಿತ ಅವಧಿಯವರೆಗೆ ಕ್ರಮಬದ್ಧವಾಗಿ ಔಷಧ ತೆಗೆದುಕೊಳ್ಳಬೇಕು. ತೀರಾ ವಿರಳ ಪ್ರಕರಣಗಳಲ್ಲಿ ಅಪಸ್ಮಾರವು ಮಿದುಳು ಹಾನಿ ಸಂಬಂಧಿಸಿದ ಸಮಸ್ಯೆ ಆಗಿದ್ದು, ಅನಿಯಂತ್ರಿತ ಅಪಸ್ಮಾರಕ್ಕೆ ಚಿಕಿತ್ಸೆ ನೀಡುವುದು ಸವಾಲಿನದಾಗಿರುತ್ತದೆ. ಇಂಥ ರೋಗಿಗಳಿಗೆ ಹೆಚ್ಚಿನ ರೀತಿಯ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿ ಯಾವ ರೀತಿಯ ಶಸ್ತ್ರಚಿಕಿತ್ಸೆ ನಡೆಸಬೇಕು ಎಂಬುದನ್ನು ನಿರ್ಧರಿಸಿ ಮುಂದಿನ ಚಿಕಿತ್ಸೆ ನೀಡಬೇಕಾಗುತ್ತದೆ.
ಅಪಸ್ಮಾರವನ್ನು ನಿರ್ವಹಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಅಗತ್ಯ. ಉದಾಹರಣೆಗೆ ರೋಗ ಪ್ರಚೋದಕ ಅಂಶಗಳನ್ನು ನಿಯಂತ್ರಿಸುವುದು (ನಿದ್ರಾಹೀನತೆ ಅಥವಾ ಒತ್ತಡದ ಜೀವನ). ಅಪಸ್ಮಾರದೊಂದಿಗೆ ಬದುಕುವುದು ಭಾವನಾತ್ಮಕ ಒತ್ತಡ, ಆತಂಕ ಮತ್ತು ಖಿನ್ನತೆಗೆ ಕಾರಣವಾಗಬಹುದು. ಮಾನಸಿಕ ಆರೋಗ್ಯ ವೃತ್ತಿಪರರ ಬೆಂಬಲ, ಸಮಾಲೋಚನೆ ಮೂಲಕ ಜೀವನದ ಗುಣಮಟ್ಟದಲ್ಲಿ ಧನಾತ್ಮಕ ಅಂಶಗಳನ್ನು ರೂಢಿಸಿಕೊಳ್ಳುವುದು.
ಅಪಸ್ಮಾರ ಹೊಂದಿರುವ ವ್ಯಕ್ತಿ ದೇಹವಿಡೀ ನಡುಗುವಿಕೆಯ ಜೊತೆಗೆ ಬಾಯಿಯಲ್ಲಿ ನೊರೆ ಹೊರಬಂದು ಅಲ್ಪಕಾಲದವರೆಗೆ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಾರೆ. ಈ ವೇಳೆ ಕೈ ಅಥವಾ ಕಾಲುಗಳು ಅನಿಯಂತ್ರಿತವಾಗಿ ಚಲಿಸುತ್ತವೆ. ಮುಖ ಒಂದು ಕಡೆಗೆ ವಾಲಿಕೊಂಡು ಕಣ್ಣು ಗುಡ್ಡೆಗಳು ಮೇಲ್ಮುಖವಾಗಿ ತಿರುಗುತ್ತವೆ. ಇದು ದೇಹದಲ್ಲಿ ಕಂಡುಬರುವ ಒಂದು ರೀತಿಯ ಸೆಳವು. ಇದು ಪದೇಪದೆ ಮರುಕಳಿಸುವುದು ಅಪಸ್ಮಾರದ ಲಕ್ಷಣಗಳಾಗಿವೆ. ಮಕ್ಕಳಲ್ಲಿ ಈ ಸೆಳವಿನ ಜತೆಗೆ ಜ್ವರ ಸಹ ಕಾಣಿಸಿಕೊಳ್ಳುತ್ತದೆ.
ಇಡಿಯೋಪಥಿಕ್ ಎಪಿಲೆಪ್ಸಿಗೆ ನಿರ್ದಿಷ್ಟ ಕಾರಣ ಇಲ್ಲ. ಆದರೂ, ಅನುವಂಶಿಕವಾಗಿ ಬರುವ ತೊಂದರೆಯಾಗಿದೆ. ಮಿದುಳಿನ ಬೆಳವಣಿಗೆಯಲ್ಲಾಗುವ ಅಸಹಜತೆಗಳು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ತಲೆಗೆ ಗಂಭೀರ ಪೆಟ್ಟು ಬಿದ್ದರೆ, ಪಾರ್ಶ್ವವಾಯು, ಮಿದುಳುಗಡ್ಡೆ, ಬ್ರೖೆನ್ ಹೆಮರೇಜ್ (ಮಿದುಳಿನಲ್ಲಿ ರಕ್ತಸ್ರಾವ), ಮಿದುಳಿನ ರಕ್ತನಾಳಗಳ ದೋಷಪೂರಿತ ರಚನೆ, ಜನನದ ವೇಳೆ ಶಿಶುವಿಗೆ ಆಗುವ ತೀವ್ರ ಬಗೆಯ ಸೋಂಕು, ಚಯಾಪಚಯ ಅಪಸ್ಮಾರಕ್ಕೆ ಕಾರಣಗಳು ಎನ್ನುತ್ತಾರೆ ತಜ್ಞ ವೈದ್ಯರು.