ಸಾರ್ಥಕ ಬದುಕಿನ ಪರಿ

Abdul Kalam
Published on
ಪ್ರೊ ಮೂಲಿಮನಿ
ಪ್ರೊ.ವಿ.ಎಚ್.ಮೂಲಿಮನಿ
ಒಮ್ಮೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೈದರಾಬಾದಿನ ನಿಜಾಂ ಆಸ್ಪತ್ರೆಯ ಪೋಲಿಯೋ ಪೀಡಿತ ಮಕ್ಕಳ ವಿಭಾಗಕ್ಕೆ ಹೋಗಿದ್ದರು. ಆ ಮಕ್ಕಳ ಕಾಲುಗಳು ನಿರ್ಬಲವಾಗಿದ್ದವು. ಅವರು ನಡೆಯುವುದಕ್ಕಾಗಿ ಕಾಲಿಗೆ ಲೋಹದ ಕ್ಯಾಲಿಪರ್ಸ್​ಗಳನ್ನು ಹಾಕಿಕೊಂಡಿದ್ದರು. ಮೂರು ಕೇಜಿ ತೂಕದ ಆ ಕ್ಯಾಲಿಪರ್ಸ್​ಗಳು ಅವರ ಕಾಲುಗಳನ್ನು ಎಳೆದೆಳೆದು ಹಾಕುವ ಕಷ್ಟಕ್ಕೆ ಒಳಪಡಿಸುತ್ತಿದ್ದವು. ವೈದ್ಯಾಧಿಕಾರಿಗಳು, ‘ಈ ನಮ್ಮ ರೋಗಿಗಳ ನೋವನ್ನು ನಿವಾರಿಸಲು ಸಾಧ್ಯವೇ?’ ಎಂದು ಕೋರಿದರು.

ಕಲಾಂರು ಅಲ್ಲಿಂದ ನೇರವಾಗಿ ಪ್ರಯೋಗಾಲಯಕ್ಕೆ ಬಂದರು. ತಂತ್ರಜ್ಞರಿಗೆ ಈ ಸಮಸ್ಯೆಗಳನ್ನು ವಿವರಿಸಿದರು. ಅವರೆಲ್ಲರೂ ಮೂರು ವಾರಗಳ ಕಾಲ ಬಿಡುವಿಲ್ಲದ ಹಾಗೆ ದುಡಿದು, ಹೊಸ ಕ್ಯಾಲಿಪರ್ಸ್​ನ್ನು ತಯಾರು ಮಾಡಿದರು. ಅದರ ತೂಕ ಕೇವಲ 300 ಗ್ರಾಂ. ಅವರು ಹೈದರಾಬಾದಿನ ಆಸ್ಪತ್ರೆಗೆ ಹೋದರು. ಮಕ್ಕಳ ಕಾಲಿಗೆ ಹೊಸ ಕ್ಯಾಲಿಪರ್ಸ್ ತೊಡಿಸಿದರು. ಇದುವರೆಗೆ ಮೂರು ಕೆಜಿ ತೂಕದ ಕ್ಯಾಲಿಪರ್ಸ್​ಗಳನ್ನು ಹೊತ್ತು ನಡೆಯಲಾಗದೆ ಬಳಲುತ್ತಿದ್ದ ಮಕ್ಕಳು ಈಗ 300 ಗ್ರಾಂನಷ್ಟು ಹಗುರವಾದ ಕ್ಯಾಲಿಪರ್ಸ್​ಗಳನ್ನು ಹಾಕಿಕೊಂಡು ನಲಿದಾಡಿದರು. 1995-96ರಲ್ಲಿ ತಯಾರಿಸಿದ ಈ ಉಪಕರಣವನ್ನು 50 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅಳವಡಿಸಲಾಗಿದೆ. ಮಕ್ಕಳಿಗೆ ಆನಂದವೋ ಆನಂದ. ಮಕ್ಕಳ ಕಷ್ಟ ನಿವಾರಣೆಯಾಗಿದ್ದರಿಂದ ಅವರ ಕಣ್ಣಲ್ಲೂ, ಅವರ ತಂದೆ-ತಾಯಿಗಳ ಕಣ್ಣಲ್ಲೂ ಹಾಗೂ ವೈದ್ಯಾಧಿಕಾರಿಗಳ ಕಣ್ಣಲ್ಲೂ ಆನಂದಭಾಷ್ಪ ಸುರಿಯುತ್ತಿತ್ತು. ಅವರ ಕಣ್ಣೀರು ನೋಡಿ ಕಲಾಂರಿಗೂ ಕಣ್ಣೀರು ಬಂತು. ಅದು ಕಲಾಂರ ಬದುಕಿನ ಸಾರ್ಥಕ ಕ್ಷಣ.

ನಾವು ಏನನ್ನೋ ಗಳಿಸಿದಾಗ, ಪದವಿ ಪಡೆದಾಗ, ಪ್ರಶಸ್ತಿ ಸ್ವೀಕರಿಸಿದಾಗ ನಮಗೆ ಸಂತೋಷವಾಗಬಹುದು. ಆದರೆ ಬದುಕು ಸಾರ್ಥಕ ಎನಿಸುವುದು ಮತ್ತೊಬ್ಬರ ಕಷ್ಟಗಳನ್ನು ನಿವಾರಣೆ ಮಾಡಿದ ಕ್ಷಣದಲ್ಲಿ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ- ‘ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದು ಮಾತ್ರ ನಿಜವಾದ ಜೀವನ’ ಎಂದು. ಈ ಜಗತ್ತಿನ ಸೃಷ್ಟಿಕರ್ತನಾದ ಭಗವಂತನು ನಿರ್ಗಣನೆಂದು, ಕೆಲವರೂ ವೈಕುಂಠವಾಸಿ ಅಥವಾ ಕೈಲಾಸವಾಸಿಯೆಂದು ಹೇಳುವರಷ್ಟೆ. ಆ ಭಗವಂತನು ಭೂಲೋಕದ ಜನರ ಕಷ್ಟನಿಷ್ಠುರಗಳನ್ನು ಹೋಗಲಾಡಿಸುವ ಪರೋಪಕಾರದಿಂದ ಆನಂದಿಸುವನು.

ಪರಹಿತಮಂ ಕೈವಲ್ಯದ| ಪರಿಯಂ ನೆರೆ ತೂಗಿ ನೋಡಿ ಹರಿಯಾದರದಿಂ||
ಪರಹಿತವೇ ಮೇಲಹುದೆಂ ದರಿತಾಂತಂ ತಾಂ ದಶವತಾರಶ್ವಮೇಯಂ||

ಇದರಿಂದ ವೈಕುಂಠದಿಲೋಕಗಳಲ್ಲಿರುವ ಆನಂದಕ್ಕಿಂತಲೂ ಪರೋಪಕಾರ ದಲ್ಲಿ ಹೆಚ್ಚಿನ ಆನಂದವಿರುವುದೆಂದು ಎದ್ದು ಕಾಣುವುದು. ಇಂಥ ಆನಂದ ನಮ್ಮೆಲ್ಲರದ್ದೂ ಆಗಲಿ. ಆ ನಿಟ್ಟಿನಲ್ಲಿ ಪರೋಪಕಾರ ಜೀವನಮಂತ್ರವಾಗಲಿ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net