

ಅಂದು ಗುರುಕುಲದಲ್ಲಿ ಶಿಷ್ಯನೊಬ್ಬ, ‘ಗುರುಗಳೇ ನಮಗೆ ಯಾವ ರೀತಿಯ ಬದುಕಿನಿಂದ ಸುಖ ಸಿಗುತ್ತದೆ’ ಎಂದು ಕೇಳಿದ. ಗುರುಗಳು ಮುಗುಳ್ನಕ್ಕರು. ‘ನೀನು ಕೇಳಬೇಕಾದ ಪ್ರಶ್ನೆ ಹಾಗಲ್ಲ, ನಮ್ಮ ಯಾವ ರೀತಿಯ ಬದುಕಿನಿಂದ ಬೇರೆಯವರಿಗೆ ಸಂತಸವಾಗುತ್ತದೆ? ಎಂದು ಕೇಳಬೇಕಿತ್ತು. ನೀವುಗಳು ದನದ ಹಾಗೆ ಬದುಕಿದರೆ ನಿಮಗೂ ಸುಖ, ಅದಕ್ಕಿಂತ ಹೆಚ್ಚಾಗಿ ಇತರರಿಗೆ ಸುಖ’ ಎಂದರು.
ಶಿಷ್ಯರಿಗೆ ಗೊಂದಲವಾಯಿತು. ಇದೇನು ಗುರುಗಳು ಹೇಳುತ್ತಿರುವುದು. ನಾವು ಮೂಕಪ್ರಾಣಿಯ ಹಾಗೆ ಬದುಕಬೇಕೇ ಅಂತ. ಗುರುಗಳು ಒಂದು ದೀರ್ಘ ಶ್ವಾಸ ತೆಗೆದುಕೊಂಡು ಹೇಳಿದರು-‘ನೀವುಗಳು ದನದ ಹಾಗೆ ಬದುಕಿ ಎಂದು ಹೇಳಿದ್ದಕ್ಕೆ ನಿಮಗೆಲ್ಲ ಅಚ್ಚರಿಯಾಗಿರಬಹುದು. ಒಂದು ದನ ಅಥವಾ ಹಸು ತನ್ನಷ್ಟಕ್ಕೆ ತಾನು ಬದುಕುತ್ತಿದೆ ಎಂದರೂ ಅದು ಸಮಾಜಕ್ಕೆ ಎಷ್ಟೊಂದು ಉಪಯೋಗ ಮಾಡುತ್ತಿದೆ. ಅದರ ಗಂಜಲವನ್ನು ಹತ್ತು ಹಲವಾರು ಔಷಧಗಳಿಗೆ ಉಪಯೋಗಿಸುತ್ತಾರೆ. ಸಗಣಿಯನ್ನು ಮನೆ ಸಾರಿಸಲು, ತಟ್ಟಿ ಒಣಗಿಸಿ ಸೌದೆಯಾಗಿ, ವಿಭೂತಿಯಾಗಿ ಉಪಯೋಗಿಸುತ್ತಾರೆ. ಎಲ್ಲ ಧಾರ್ವಿುಕ ಕಾರ್ಯಕ್ರಮಗಳಿಗೆ ಸಗಣಿ ಬೇಕೇ ಬೇಕು. ಇನ್ನು ಹಸುವಿನ ಹಾಲಂತೂ ಅಮೃತವೇ. ಎಷ್ಟು ಹಸಿದ ಹೊಟ್ಟೆಯನ್ನು ತುಂಬಿಸುವುದೋ. ಹಾಲಿನಿಂದ ಬೆಣ್ಣೆ ತೆಗೆಯುತ್ತಾರೆ, ಮೊಸರು ಕಡೆಯುತ್ತಾರೆ. ಹಸುವಿನಿಂದ ಆಗುವ ಉಪಯೋಗ ಒಂದೆರಡಲ್ಲ. ಇನ್ನು ಅದರ ತೊಗಲಿನಿಂದ ಪಾದರಕ್ಷೆ ಮಾಡುತ್ತಾರೆ, ಮೃದಂಗಕ್ಕೂ ಉಪಯೋಗಿಸತ್ತಾರೆ. ಆದರೆ ಹಸುವಿಗೆ ಗೊತ್ತಿಲ್ಲ ತನ್ನಿಂದ ಪ್ರಪಂಚ ಇಷ್ಟೊಂದು ಪ್ರಯೋಜನ ಪಡೆದುಕೊಳ್ಳುತ್ತಿದೆ ಎಂದು. ಆದರೆ ಅಂತಿಮವಾಗಿ ಹಸುವಿನ ಜನ್ಮ, ಸಾರ್ಥಕವಾಗುತ್ತದೆ.
ನಮ್ಮ ನಿಮ್ಮೆಲ್ಲರ ಬದುಕು ಕೂಡ ಹೀಗೆಯೇ ಇರಬೇಕು. ನಾವು ಒಬ್ಬರೇ ಆದರೂ ನಮ್ಮಿಂದ ಹತ್ತು ಹಲವು ಪ್ರಯೋಜನಗಳು ಆಗಬೇಕು. ಮುಖ್ಯವಾಗಿ ಪ್ರಯೋಜನವಾಗುತ್ತಿದೆ ಎಂದು ನಮಗೇ ಅರಿವಿರಬಾರದು. ನಾವು ಯಾವ ಸ್ಥಾನದಲ್ಲಿರುತ್ತೇವೋ ಆ ಸ್ಥಾನಕ್ಕೆ ಗೌರವ ತರುವ ಹಾಗೆ ಬದುಕಬೇಕು. ಮಕ್ಕಳಾದಾಗ ಮಕ್ಕಳಂತೆ ತಂದೆ-ತಾಯಿಯ ಗೌರವ ಹೆಚ್ಚಾಗುವಂತೆ, ಶಾಲೆಗೆ ಹೋದಾಗ ಒಳ್ಳೆಯ ವಿದ್ಯಾರ್ಥಿಗಳಾಗಿ ನಾವು ಓದುವ ವಿದ್ಯಾಸಂಸ್ಥೆಗೆ ಹೆಸರು ತರುವಂತೆ, ಕೆಲಸಕ್ಕೆ ಸೇರಿದ ಮೇಲೆ ಕೆಲಸ ಮಾಡುವ ಸಂಸ್ಥೆಯ ಗೌರವ ಹೆಚ್ಚಿಸುವಂತೆ, ಸಮಾಜದಲ್ಲಿ ಬದುಕುವಾಗ ಇತರರಿಗೆ ಸ್ವಲ್ವವಾದರೂ ಮಾದರಿಯಾಗುವಂತೆ ಬದುಕುವುದು ಎಲ್ಲ ನಾಗರಿಕರ ಲಕ್ಷಣವಾಗಬೇಕು’ ಎಂದು ಗುರುಗಳು ಮಾತು ಮುಗಿಸಿದರು.
ನಿಜ, ಬರೀ ನಮಗಾಗಿ ಬದುಕುವುದರಲ್ಲಿ ಯಾವ ಸ್ವಾರಸ್ಯವಿದೆ? ನಾಲ್ಕು ಜನರಿಗೆ ಉಪಕಾರಿ ಆಗುವಂತೆ ಬದುಕಬೇಕು. ಸಹಾಯ ಮಾಡಿದ್ದರೂ, ಅದೆಲ್ಲ ನನ್ನಿಂದ ಅಲ್ಲ ನಿಮಿತ್ತ ಮಾತ್ರ ತಾನು ಎಂಬುದು ಅರಿವಿನಲ್ಲಿ ಇರಬೇಕು. ಜೀವನ ನಮಗೆಲ್ಲ ಸಿಕ್ಕಿರುವ ಅದ್ಭುತ ಕೊಡುಗೆ. ಇದನ್ನು ಸ್ವಾರ್ಥಕ್ಕಾಗಿ ಕಳೆದುಬಿಟ್ಟರೆ ಬದುಕು ವ್ಯರ್ಥ. ಹಾಗಾಗಿ, ಜೀವನದ ನಿಜ ಉದ್ದೇಶವನ್ನು ಅರ್ಥ ಮಾಡಿಕೊಳ್ಳೋಣ. ಹೃದಯವೈಶಾಲ್ಯದಿಂದ ಬದುಕುತ್ತ, ನೋವುಗಳನ್ನು ಕಳೆಯುತ್ತ ಹೆಚ್ಚು ಹೆಚ್ಚು ಜನರಿಗೆ ನೆರವಾಗೋಣ. ಆ ಮೂಲಕ ಸಾರ್ಥಕತೆ ನಮ್ಮದಾಗಿಸಿಕೊಳ್ಳೋಣ.
| ಬೇಲೂರು ರಾಮಮೂರ್ತಿ
(ಲೇಖಕರು ಸಾಹಿತಿ)