

ಕೆಲವು ದಿನಗಳ ನಂತರ ಮಾವಿನ ಚಿಗುರೆಲ್ಲಾ ತುಂಬಾ ದೊಡ್ಡದಾದ ಸುಂದರ ಮಾವಿನ ಹಣ್ಣುಗಳಾದವು. ಪ್ರಾಣಿ-ಪಕ್ಷಿಗಳೆಲ್ಲಾ ಆ ತೋಟದ ಮಾಲೀಕನನ್ನು ವೀಕ್ಷಿಸುತ್ತಿದ್ದವು. ಇಷ್ಟೆಲ್ಲಾ ಹಣ್ಣುಗಳಾದ ಮೇಲಾದರೂ ಈ ವ್ಯಕ್ತಿ ಸಂತೋಷಪಡುತ್ತಾನೆಯೇ? ಎಂದು. ಆದರೆ ಆಗಲೂ ಅವನ ಚಿಂತೆ ದೂರವಾಗಲಿಲ್ಲ. ಅವನಿಗಿರುವ ಮುಂದಿನ ಚಿಂತೆ ಮಾರ್ಕೆಟ್ನಲ್ಲಿ ಹಣ್ಣಿಗೆ ಸರಿಯಾದ ಬೆಲೆ ಸಿಗುತ್ತದೆಯೋ, ಇಲ್ಲವೋ? ಎಂಬುದು. ಒಂದು ವೇಳೆ ಇಲ್ಲಿ ಬೆಲೆ ಸಿಗದಿದ್ದರೆ, ಆ ಹಣ್ಣುಗಳನ್ನು ಯಾವ ದೇಶಕ್ಕೆ ಕಳಿಸಿದರೆ ಉತ್ತಮ ಬೆಲೆ ಬರಬಹುದು? ಎಂದು ವಿಚಾರಿಸತೊಡಗಿದ. ದಿನಗಳು ಕಳೆದಂತೆ ಮಾವಿನ ಹಣ್ಣುಗಳಲ್ಲಿ ಕೆಲವು ಕೊಳೆಯಲು ಪ್ರಾರಂಭಿಸಿದವು. ಇದು ಅವನನ್ನು ಇನ್ನಷ್ಟು ಆತಂಕಗೊಳಿಸಿತು. ಸತ್ಯಾಂಶವೆಂದರೆ ಮಾರ್ಕೆಟ್ನಲ್ಲಿ ಉತ್ತಮ ಬೆಲೆಯೇ ಇತ್ತು. ಆದರೆ, ಇವನ ದುರಾಸೆಯೆಂದರೆ ಇನ್ನೂ ಹೆಚ್ಚಿಗೆ ಬೆಲೆ ಸಿಗಲಿ ಕಾದು ನೋಡೋಣ ಎಂಬುದು. ಇದನ್ನೆಲ್ಲಾ ನೋಡಿದ ಪಕ್ಷಿಗಳು ‘ಮನುಷ್ಯನೇ ಇಲ್ಲಿ ನೋಡು, ನಾವು ಕೇವಲ ನಿನ್ನ ಮಾವಿನ ಗಿಡದ ಚಿಗುರನ್ನು ನೋಡಿ ಖುಷಿಪಟ್ಟು ಕುಣಿದಾಡಿದೆವು. ಆದರೆ, ನೀನು ಬುಟ್ಟಿ- ಬುಟ್ಟಿಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡಿದ್ದರೂ ಸಂತೋಷವಾಗಿರುವುದನ್ನು ಮಾತ್ರ ನಾವು ನೋಡಲೇ ಇಲ್ಲ. ಹಣ್ಣುಗಳ ಸಿಹಿಯನ್ನು ಕೂಡ ಅನುಭವಿಸಲಿಲ್ಲ, ಬರೀ ಕೊರಗುತ್ತಾ ದಿನಗಳನ್ನು ದೂಡುತ್ತಿರುವುದು ಮಾತ್ರ ತುಂಬಾ ನೋವಿನ ಸಂಗತಿ’ ಎಂದವು.
ಇರುವ ಭಾಗ್ಯವ ನೆನೆದು ಸಂತೋಷವಾಗಿರುವುದನ್ನು ಕಲಿತಾಗ ಮಾತ್ರ ಬಾಳು ಬಂಗಾರವಾಗುತ್ತದೆ. ಇಲ್ಲದ್ದಕ್ಕೆ ಕೊರಗುವುದರಿಂದ ಸಂತೋಷವೆಂಬುದು ತುಂಬಾ ದುಬಾರಿಯಾಗುತ್ತದೆ. ಜೀವನವೆಂಬುದು ನೀರಿನ ಮೇಲಿನ ಗುಳ್ಳೆಯಂತಾಗಿದ್ದು, ಯಾವುದಕ್ಕೂ ಗ್ಯಾರಂಟಿಯಾಗಲಿ ಅಥವಾ ವಾರಂಟಿಯಾಗಲಿ ಇಲ್ಲ. ಕ್ಷಣಿಕವಾದ ಈ ಬದುಕನ್ನು ಪ್ರತಿಕ್ಷಣ ಸುಂದರಗೊಳಿಸುತ್ತಾ ಸಾಗಲು ಭವಿಷ್ಯದ ಬಗ್ಗೆ ಬಹಳಷ್ಟು ಚಿಂತಿಸದೆ, ವರ್ತಮಾನದಲ್ಲಿ ಜೀವಿಸುವುದನ್ನು ಅಳವಡಿಸಿಕೊಳ್ಳಬೇಕು.
(ಲೇಖಕರು ಹವ್ಯಾಸಿ ಬರಹಗಾರರು)