

ಭಾರತಿ ಎ.,ಕೊಪ್ಪ
ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ಆಶ್ರಮವೊಂದಿತ್ತು. ಶಿಷ್ಯಂದಿರೆಲ್ಲ ಸಂಜೆಯ ವೇಳೆ ಹಸಿರಿನ ನಡುವೆ ಗುಂಪು ಗುಂಪಾಗಿ ಆಟವಾಡುತ್ತಿದ್ದರು. ಅಲ್ಲೇ ಸಮೀಪದ ಒಂದು ಮರದಲ್ಲಿ ಬೃಹತ್ ಜೇನುಗೂಡಿತ್ತು. ಜೇನುಹುಳುಗಳು ಪ್ರಕೃತಿ ಸಹಜವೆಂಬಂತೆ ಒಗ್ಗಟ್ಟಿನ ಗೂಡಿನಲ್ಲಿ ಸೇರಿಕೊಂಡಿದ್ದವು.
ಶಿಷ್ಯಂದಿರ ಆಟ ಸಾಗುತ್ತಿರುವಾಗ ಆಶ್ರಮದ ಇನ್ನೊಬ್ಬ ಸಹಪಾಠಿ ಬಂದ. ತನ್ನನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ಕೇಳಿಕೊಂಡ. ಆದರೆ ಆತನ ತುಂಟತನ, ಕೋಪ, ಜಗಳವನ್ನು ಸದಾ ನೋಡಿದ್ದ ಸಹಪಾಠಿಗಳು ಹತ್ತಿರ ಸೇರಿಸಿಕೊಳ್ಳಲಿಲ್ಲ. ಬಾಲಕನ ಕೋಪ ನೆತ್ತಿಗೇರಿತು. ಮುನಿಸಿಕೊಂಡು ಸಮೀಪದಲ್ಲಿದ್ದ ಮರದ ಕೆಳಗೆ ಹೋಗಿ ಕುಳಿತ. ಹಾಗೆಯೇ ಕಣ್ಣು ಹಾಯಿಸಿದಾಗ ಜೇನುಗೂಡು ಕಾಣಿಸಿತು. ತನ್ನನ್ನು ಆಟಕ್ಕೆ ಸೇರಿಸದ ಸಹಪಾಠಿಗಳಿಗೆ ಬುದ್ಧಿ ಕಲಿಸಬೇಕೆಂದು ಜೇನುಗೂಡಿಗೆ ಕಲ್ಲು ಎಸೆದ. ಆ ಎಸೆತದ ರಭಸಕ್ಕೆ ಜೇನು ಹುಳುಗಳು ಚೆಲ್ಲಾಪಿಲ್ಲಿಯಾಗಿ ಹಾರಿದವು. ಎಲ್ಲಾ ಮಕ್ಕಳ ಮೇಲೂ ದಾಳಿ ಮಾಡಿದವು. ಕೆಲವರು ತಪ್ಪಿಸಿಕೊಂಡರು. ಕೆಲವರು ಜೇನುಹುಳುಗಳ ದಾಳಿಗೆ ತುತ್ತಾಗಿ ನೋವಿನೊಂದಿಗೆ ಚೀರುತ್ತಾ ಆಶ್ರಮ ಸೇರಿಕೊಂಡರು. ನಂತರ ಗುರುವಿನ ಬಳಿ ಔಷಧೀಯ ಸಸ್ಯದ ಚಿಕಿತ್ಸೆ ಪಡೆದು ಗುಣಮುಖರಾದರು.
ಒಂದೆರಡು ದಿನಗಳ ಬಳಿಕ ಗುರುಗಳು ಜೇನುಗೂಡಿನ ಮಹತ್ವ ಮತ್ತು ಸಿಹಿಜೇನು ತಯಾರಾಗುವ ಬಗೆಯನ್ನು ತಿಳಿಸಿದರು. ಒಗ್ಗಟ್ಟಿನಿಂದ ಬದುಕುವ ಜೇನುಹುಳುಗಳಿಗೆ ತೊಂದರೆ ಕೊಟ್ಟರೆ ಅವು ಉಗ್ರರೂಪ ತಾಳಿ ದಾಳಿ ಮಾಡುವ ಪರಿಯನ್ನೂ ಹೇಳುತ್ತಾ ಸಾಗಿದರು. ಶಿಷ್ಯಂದಿರಿಗೆ ತಮ್ಮ ತಪ್ಪಿನ ಅರಿವಾಗತೊಡಗಿತು. ಗುರುಗಳು ‘ನಮ್ಮೊಡನೆ ಒಬ್ಬ ಕೋಪಿಷ್ಠನಿದ್ದರೆ ಅಥವಾ ತಪ್ಪು ದಾರಿ ಹಿಡಿಯುವಂತಹವನಿದ್ದರೆ ಆತನನ್ನು ಪ್ರತ್ಯೇಕಿಸುತ್ತಾ ಹೋಗಬಾರದು. ದೂರ ಇಟ್ಟಂತೆ ಆತನ ದುರ್ಗಣಗಳೂ ಹೆಚ್ಚಾಗುತ್ತಾ ಹೋಗುತ್ತವೆ. ತೊಟ್ಟು ಸ್ವಲ್ಪ ಮುರಿದ ಅಥವಾ ಸ್ವಲ್ಪ ಚಿಕ್ಕ ತೊಟ್ಟಿನ ಹೂವನ್ನೂ ಕೂಡ ಎಸೆಯದೆ, ಒಳ್ಳೆಯ ಹೂಗಳ ಜೊತೆಗೆ ಸೇರಿಸಿ, ಸುಂದರವಾದ ಹೂಮಾಲೆ ಮಾಡುತ್ತೇವಲ್ಲವೆ? ಅಂತೆಯೇ ಸದ್ಗುಣಿಗಳು ಸಹವರ್ತಿಗಳ ದುರ್ಗಣಗಳನ್ನು ತಿದ್ದಿ, ಬದುಕನ್ನು ಸುಂದರವಾದ ಹೂಮಾಲೆಯಂತೆ ಮಾಡಬೇಕು’ ಎಂದರು. ಶಿಷ್ಯಂದಿರ ಮುಖದಲ್ಲಿ ಬದುಕಿನ ಸವಿಜೇವಿನ ಪಾಠದ ಅರಿವಿನ ಮಂದಹಾಸ ಮೂಡಿತು.
ನಮಗೂ ನಮ್ಮ ದೈನಂದಿನ ಬದುಕಿನಲ್ಲಿ ಸಹವರ್ತಿಗಳ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ಮನೆಯೇ ಆಗಿರಬಹುದು, ಅಥವಾ ಔದ್ಯೋಗಿಕ ಪರಿಸರದಲ್ಲಿಯೂ ಆಗಿರಬಹುದು. ಆದರೆ ಆ ಅಭಿಪ್ರಾಯಭೇದಗಳನ್ನು ಅಲ್ಲಲ್ಲೇ ಸರಿದೂಗಿಸಿಕೊಂಡು ಹೋಗಬೇಕು. ಭಿನ್ನಾಭಿಪ್ರಾಯಗಳು ಬೆಳೆದಂತೆಲ್ಲಾ ದುರಾಲೋಚನೆಗಳು ಹುಟ್ಟಿಕೊಳ್ಳುತ್ತವೆ. ಕೋಪ ತಾಪಗಳು, ಒಡೆದ ಮನಸ್ಸು ಕೆಡುಕಿನ ರಹದಾರಿಯಾಗುತ್ತದೆ.
ಕೋಪವೆಂಬುದು ತಾನು| ಪಾಪದಾ ನೆಲೆಗಟ್ಟು|
ಆಪತ್ತು ಸುಖವು ಸರಿಯೆಂದು ಕಾಂಬವಗೆ|
ಪಾಪವೆಲ್ಲಿಹುದು ಸರ್ವಜ್ಞ
ಎಂಬ ಸರ್ವಜ್ಞನ ತ್ರಿಪದಿಯ ಸಾಲುಗಳಂತೆ ಕೋಪವು ನಮ್ಮ ಪಾಪಕೃತ್ಯಗಳಿಗೆ ಮೂಲವಾಗುತ್ತದೆ. ಸಮಾಧಾನ ಚಿತ್ತದಿಂದ ವರ್ತಿಸುತ್ತಾ, ಕೋಪರಹಿತ ಮನಸ್ಸು ನಮ್ಮದಾಗಿಸಿಕೊಂಡು ಜೀವನ ಸಾಗಿಸಬೇಕು. ಬದುಕು ಸುಂದರ ಹೂಮಾಲೆಯಂತಾಗಬೇಕು.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)