

| ಎನ್.ಜಯಭೀಮ್ ಜೋಯ್ಸ್
ಒಂದು ಊರಿನಲ್ಲಿ ಒಬ್ಬ ಭಿಕ್ಷುಕನಿದ್ದ. ಅವನಿಗೆ ಒಂದು ಕಾಲು ಇರಲಿಲ್ಲ. ಒಮ್ಮೆ ಆ ಊರಿಗೆ ಪರವೂರಿನ ವ್ಯಕ್ತಿಯೊಬ್ಬ ಬಂದ. ಭಿಕ್ಷುಕ ಕುಂಟನಾಗಿದ್ದರೂ ಅವನ ಮುಖದ ಮೇಲೆ ಒಂದು ರೀತಿಯ ಶಾಂತಿ, ತೃಪ್ತಿ ಮತ್ತು ಪ್ರಸನ್ನತೆ ತುಂಬಿಕೊಂಡಿತ್ತು. ಬಹಳ ಸಮಾಧಾನ ಹೊಂದಿರುವವನಂತೆ ಕಾಣಿಸುತ್ತಿದ್ದ. ಆ ವ್ಯಕ್ತಿಗೆ ಇವನನ್ನು ನೋಡಿ ಕುತೂಹಲದ ಜತೆ ಆಶ್ಚರ್ಯವಾಗುತ್ತದೆ. ಆತನ ಬಳಿ ಹೋಗಿ, ‘ನೀನು ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದರೂ ನಿನ್ನನ್ನು ನೋಡಿದರೆ ಶಾಂತಿ, ನೆಮ್ಮದಿ, ಸಂತೋಷ ಹೊಂದಿರುವುದು ಕಾಣುತ್ತದೆ. ಆಗರ್ಭ ಶ್ರೀಮಂತರಿಗೂ ಸಿಗದ ಸುಖ, ಶಾಂತಿ ನಿನ್ನಲ್ಲಿ ಕಾಣುತ್ತಿದೆ. ಭಿಕ್ಷುಕನಾದ ನಿನಗೆ ಇದು ಹೇಗೆ ಸಾಧ್ಯವಾಯಿತು?’ ಎಂದು ಕೇಳಿದ.
‘ನೀವು ತಿಳಿದಂತೆ ನಾನೊಬ್ಬ ಭಿಕ್ಷುಕ ಹೌದು. ನನಗೆ ಒಂದು ಕಾಲೂ ಇಲ್ಲ. ಆದರೆ, ಅಲ್ಲಿ ನೋಡಿ. ಆ ಮನುಷ್ಯನಿಗೆ ಎರಡೂ ಕಾಲಿಲ್ಲ. ಅವನನ್ನು ನೋಡಿ ನಾನು ಸಮಾಧಾನ ಪಟ್ಟುಕೊಳ್ಳುತ್ತೇನೆ. ಏಕೆಂದರೆ, ದೇವರು ನನಗೆ ಒಂದಾದರೂ ಕಾಲು ಕೊಟ್ಟಿದ್ದಾನೆ. ಜತೆಗೆ ಗಟ್ಟಿಯಾಗಿರುವ ಎರಡು ಕೈಗಳಿವೆ. ಪ್ರಪಂಚವನ್ನು ನೋಡಲು ಎರಡು ಕಣ್ಣುಗಳಿವೆ. ಒಳ್ಳೆಯ ಮಾತು ಕೇಳಲು ಎರಡು ಕಿವಿಗಳಿವೆ. ಆ ದಯಾಮಯನಾದ ದೇವರನ್ನು ನಾನು ವಂದಿಸಬೇಕು. ನನಗೆ ಕೊಟ್ಟಿರುವುದರಲ್ಲೇ ತೃಪ್ತಿಪಟ್ಟುಕೊಂಡಿದ್ದೇನೆ. ಈ ಜಗತ್ತಿನಲ್ಲಿ ನನಗಿಂತಲೂ ದೀನ ಸ್ಥಿತಿಯುಳ್ಳ ಲಕ್ಷಾಂತರ ಜನರಿದ್ದಾರೆ. ಎಷ್ಟೋ ಜನರಿಗೆ ಕೈಗಳಿಲ್ಲ, ಕಾಲುಗಳಿಲ್ಲ, ಕಣ್ಣುಗಳಿಲ್ಲ, ಕಿವಿಗಳಿಲ್ಲ. ಆ ಲೆಕ್ಕದಲ್ಲಿ ನಾನು ಬಲು ಅದೃಷ್ಟವಂತ. ಆ ಲಕ್ಷಾಂತರ ನತದೃಷ್ಟರಿಗಿಂತ ನಾನೆಷ್ಟು ಭಾಗ್ಯಶಾಲಿ. ಹಾಗಿದ್ದ ಮೇಲೆ ನಾನೇಕೆ ಚಿಂತೆ ಮಾಡಬೇಕು? ನಗುನಗುತ್ತ ಇರುತ್ತೇನೆ. ದೇವರು ಕೊಟ್ಟಿರುವ ಈ ಶರೀರ ಸಂಪತ್ತಿನಿಂದ ನಾನು ಸಂತುಷ್ಟನಾಗಿಯೇ ಇರುವೆ’ಎಂದು ಭಿಕ್ಷುಕ ಉತ್ತರಿಸಿದ.
ನಾವು ಜೀವನದಲ್ಲಿ ಸಂತುಷ್ಟರಾಗಿ ಇರಬೇಕಾದರೆ ನಮಗಿಂತ ಕಷ್ಟದ ಸ್ಥಿತಿಯಲ್ಲಿರುವವರನ್ನು ನೋಡಬೇಕಂತೆ. ನಮ್ಮ ಹತ್ತಿರ ಸ್ಕೂಟರ್ ಇದ್ದು ಪಕ್ಕದ ಮನೆಯವರ ಹತ್ತಿರ ಸೈಕಲ್ ಇದ್ದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಸಂತೋಷಪಟ್ಟುಕೊಳ್ಳಬೇಕು. ಆರ್ಥಿಕವಾಗಿ ನಮಗಿಂತ ಕೆಳಗಿರುವವರನ್ನು ಕಂಡಾಗ ದೇವರು ನಮ್ಮನ್ನು ಶ್ರೀಮಂತರನ್ನಾಗಿಸಿ ಅನುಗ್ರಹಿಸಿದ್ದಾನೆ ಎಂಬ ತೃಪ್ತಿ ಮೂಡುತ್ತದೆ. ಅದರ ಬದಲು ನಮಗಿಂತ ಉತ್ತಮರೀತಿಯಲ್ಲಿರುವವರೊಂದಿಗೆ ಹೋಲಿಸಿಕೊಂಡು, ನಮಗೆ ಇಂಥ ಭೋಗಭಾಗ್ಯವಿಲ್ಲವಲ್ಲ ಎಂದು ಬೇಸರಿಸಿಕೊಂಡರೆ, ಜೀವನದಲ್ಲಿ ನೆಮ್ಮದಿ ಮರೀಚಿಕೆಯಾಗುತ್ತದೆ. ಜೀವನದಲ್ಲಿ ಉನ್ನತ ಹಂತಕ್ಕೇರಬೇಕೆಂದು ಕನಸು ಕಾಣುವುದು, ಯತ್ನಿಸುವುದು ಬೇರೆ. ನಮ್ಮ ಬಳಿ ಸಿರಿಸಂಪತ್ತಿಲ್ಲವೆಂದು ಕೊರಗುವುದು ಬೇರೆ. ಇರುವುದರಲ್ಲಿ ಸಂತಸ ಕಾಣುವುದೇ ನೆಮ್ಮದಿಯ ಬದುಕಿನ ಸೂತ್ರ.
(ಲೇಖಕರು ಹವ್ಯಾಸಿ ಬರಹಗಾರರು)