

| ರೇಖಾ ಗಜಾನನ ಭಟ್ಟ
ಒಮ್ಮೆ ಒಬ್ಬ ಮಹಿಳೆ ತಾನು ಕಾಡಿನಲ್ಲಿದ್ದಂತೆ ಕನಸು ಕಂಡಳು. ಅವಳು ಕಾಡಿನಲ್ಲಿ ಸಂಚರಿಸುತ್ತಿರುವಾಗ ಸಿಂಹವೊಂದು ಅಟ್ಟಿಸಿಕೊಂಡು ಬಂದಿತು. ಅವಳು ಜೀವಭಯದಿಂದ ಓಡಿಹೋಗಿ ಒಂದು ಮರವನ್ನು ಏರಿ ಕೂತಳು. ಅವಳು ಸದ್ಯಕ್ಕೆ ಸಿಂಹದ ಬಾಯಿಂದೇನೋ ಪಾರಾದಳು. ಆದರೆ ಒಂದು ಕಪು್ಪ ಮತ್ತು ಇನ್ನೊಂದು ಬಿಳಿಬಣ್ಣದ ಇಲಿಗಳು ಅವಳು ಕೂತಿರುವ ಕೊಂಬೆಯನ್ನು ಕತ್ತರಿಸುತ್ತಿದ್ದವು. ಅಲ್ಲಿಂದ ಬೀಳುವುದನ್ನು ತಪ್ಪಿಸಿಕೊಳ್ಳಲು ಇನ್ನೊಂದು ಕೊಂಬೆಗೆ ಹಾರಲು ಯತ್ನಿಸಿದಾಗ ಅಲ್ಲಿ ಹೆಬ್ಬಾವೊಂದು ನಿದ್ರಿಸುತ್ತಿರುವುದು ಕಾಣಿಸಿತು. ‘ನನಗಿನ್ನು ಜೀವ ಉಳಿಸಿಕೊಳ್ಳಲು ಯಾವುದೇ ತಂತ್ರಗಳಿಲ್ಲ ದೇವರೇ...’ ಎಂದು ಆಕಾಶದತ್ತ ನೋಡಿದಾಗ ಮರದ ತುದಿಯ ಸಣ್ಣರೆಂಬೆಯಲ್ಲಿ ಜೇನುಗೂಡು ತೂಗುತ್ತಿರುವುದು ಕಾಣಿಸಿತು. ಜೇನುಹುಳುಗಳು ಇಲ್ಲದಿದ್ದುದ್ದನ್ನು ಗಮನಿಸಿ ಜೇನುಗೂಡನ್ನು ಬೆರಳತುದಿಯಿಂದ ಮುಟ್ಟಿದಾಗ ಜೇನುತುಪ್ಪ ಒಂದೊಂದೇ ಹನಿಯಾಗಿ ಬೀಳಲಾರಂಭಿಸಿತು. ಅದರ ರುಚಿಗೆ ಮಾರುಹೋದ ಅವಳು ಮತ್ತೆ ಮತ್ತೆ ಬಾಯ್ದರೆದು ಜೇನಿನ ಹನಿಗಳನ್ನು ಸವಿಯುತ್ತ ತನಗೊದಗಿದ ವಿಪತ್ತುಗಳನ್ನು ಮರೆತು ಹೋದಳು. ಸಿಂಹ, ಹೆಬ್ಬಾವು, ಇಲಿಗಳು ಯಾವುದೂ ನೆನಪಾಗಲಿಲ್ಲ. ಕೊನೆಗೆ ಎಚ್ಚರವಾದ ಮೇಲೆ ಅವಳಿಗೆ ಈ ಕನಸು ವಿಚಿತ್ರವಾಗಿ ತೋರಿತು.
ಒಬ್ಬ ಜ್ಞಾನಿಯ ಬಳಿ ಹೋಗಿ ತನಗೆ ಕಂಡ ಕನಸಿನ ವಿಷಯವನ್ನು ಅವಳು ಅರುಹಿಕೊಂಡಾಗ, ಕನಸಿನ ಕುರಿತಾಗಿ ಅವರ ವಿಶ್ಲೇಷಣೆ ಎಷ್ಟು ಚೆನ್ನಾಗಿದೆ ನೋಡಿ. ‘ಸಾವು ಸಿಂಹದಂತೆ ಸದಾ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಿರುತ್ತದೆ. ಆ ಕಪು್ಪ-ಬಿಳಿ ಇಲಿಗಳು ಹಗಲು-ರಾತ್ರಿಗಳಿಗೆ ರೂಪಕವಾಗಿವೆ. ಅವು ನಮ್ಮನ್ನು ಸಾವಿನೆಡೆಗೆ ಕೊಂಡೊಯ್ಯುತ್ತಲೇ ಇರುತ್ತವೆ. ಇನ್ನೂ ಸಮಾಧಿಯಂತೆ ಆ ಹೆಬ್ಬಾವು. ಅದು ಸದಾ ನಮ್ಮನ್ನು ತನ್ನೊಳಗೆ ಎಳೆದುಕೊಳ್ಳಲು ಬಯಸುತ್ತಲೇ ಇರುತ್ತದೆ. ಇನ್ನು ಜೇನುಗೂಡು ನಮ್ಮ ಈ ಜಗತ್ತಿಗೆ ಹೋಲಿಕೆಯಾಗಿದ್ದು ಅದರೊಳಗಿನ ಜೇನುತುಪ್ಪ ಲೌಕಿಕ ಜೀವನದ ಸುಖಭಾಗ್ಯಗಳ ಸಂಕೇತ. ಅದು ಮರಣ, ದಾರುಣ, ಗೋರಿ, ಚಿತೆ ಮುಂತಾದವುಗಳನ್ನು ಮರೆತು ಬದುಕುವಂತೆ ಮಾಡುತ್ತದೆ’ ಎಂದು ವಿವರಿಸಿದರು.
ನಿಜ ಅಲ್ಲವೇ? ಸಾವು-ನೋವು, ವಿಪತ್ತು ಮುಂತಾದ ಅನಿರೀಕ್ಷಿತ ಸಂಗತಿಗಳು ನಮ್ಮ ಸುತ್ತಲೇ ಸುಳಿಯುತ್ತಿರುತ್ತವೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೂ ಅದನ್ನೇ ನೆನಪಿಸಿಕೊಂಡು ಭಯಬೀತರಾಗಿ ಕೊರಗಲು ಬಿಡದೆ ಎಲ್ಲ ಮರೆತು ಧನಾತ್ಮಕವಾಗಿ ನಮ್ಮನ್ನು ಮುನ್ನೆಡೆಸುವುದು ಲೌಕಿಕ ಜೀವನ. ಕರ್ಮ, ಕರ್ತವ್ಯ, ಸುಖದ ಹಾದಿ, ಗುರಿ, ಸಾಧನೆ ಮುಂತಾದ ಅಂಶಗಳು ನಮ್ಮನ್ನು ಜೀವನ್ಮುಖಿಯಾಗಿಸುತ್ತವೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ತಡೆದರೆ ಕಾಂಗ್ರೆಸ್ ಅವನತಿ; ಇದನ್ನು ಹೇಳಿದ್ದು ಕಾಂಗ್ರೆಸ್ನವರಲ್ಲ…!
ಎಚ್.ಎಸ್.ವಿ.ಯವರ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಗೀತೆಯ ಸಾಲಿನಂತೆ ಸಮಸ್ಯೆಗಳು ನೂರಾರಿದ್ದರೂ ಚಿಂತಿಸದೇ ಸತ್ಕರ್ಮವನ್ನು ಮಾಡಿ ನಿರಾಳವಾಗಿ ಬದುಕಬೇಕು. ಮುಂದೆ ಆಪತ್ತುಗಳು ಬರದಂತೆ ಜಾಗರೂಕರಾಗಬೇಕು. ಆದರೆ ಅದನ್ನೇ ನೆನೆದು ಕೊರಗುವುದರ ಬದಲು ವರ್ತಮಾನದ ಬಾಳಜೇನನ್ನು ಸವಿಯೋಣ ಅಲ್ಲವೇ..?
ಮೋಹ ಮಮಕಾರಗಳು ಮೈದಳೆದು ನಿಲ್ಲಲು
ಬಯಕೆ, ಕರ್ತವ್ಯಗಳು ಜೊತೆಯಾಗಿ ಸೇರಲು
ಅನಿಶ್ಚಿತತೆಯ ಭಾವವಾಗ ಓಡುವುದು ದೂರ
ಕರ್ಮದ ಓಟ ಸಾಗುವುದು ಬಾಳ ದಾರಿಪೂರ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)